ದಾವಣಗೆರೆ : ನೀವು ಹೆದರಬೇಡಿ, ನಿಮ್ಮ ಕುಟುಂಬದ ಜತೆ ನಾವಿದ್ದೇವೆ. ಬೇಲ್ ಕೂಡ ವ್ಯವಸ್ಥೆ ಮಾಡುತ್ತೇವೆ. ನಿಮ್ಮ ಜತೆ ನಾನು ಮತ್ತು ಬಿಜೆಪಿ ಮುಖಂಡರೆಲ್ಲ ಇದ್ದಾರೆ ಎಂದು ಬಿಜೆಪಿ ಯುವನಾಯಕ, ಮಾಜಿ ಸಂಸದ ಜಿ.ಎಂ.ಸಿದೇಶ್ವರ ಪುತ್ರ ಜಿ.ಎಸ್.ಅನಿತ್ ಹೇಳಿದರು.
ದಾವಣಗೆರೆಯಲ್ಲಿ ಗಣಪತಿ ವಿಸರ್ಜನಾ ಸಮಯದಲ್ಲಿ ಆದ ಗಲಾಟೆ ಸಂದರ್ಭದಲ್ಲಿ ಬಂಧಿತರಾದವರನ್ನು ಬಿಜೆಪಿ ಯುವ ಮುಖಂಡ ಜಿ ಎಸ್ ಅನಿತ್ ಕುಮಾರ್ ಜಿಲ್ಲಾ ಕಾರಾಗೃಹದಲ್ಲಿ ಭೇಟಿ ಮಾಡಿ ಸಾಂತ್ವಾನ ಹೇಳಿ ಮತ್ತು ಅವರ ಮನೆಗಳಿಗೆ ಭೇಟಿ ನೀಡಿ ಧನ ಸಹಾಯ ಮಾಡಿ ಅವರಿಗೆ ಧೈರ್ಯ ತುಂಬಿ ಮಾತನಾಡಿದರು.
ಜೈಲಿನಲ್ಲಿರುವ ಸತೀಶ್ ಪೂಜಾರಿ ಮತ್ತು ಇತರೆ ಹಿಂದೂ ಸಂಘಟಕರನ್ನು ನಾನು ಭೇಟಿ ಮಾಡಿದ್ದೇನೆ. ಅವರಿಗೂ ಧೈರ್ಯ ತುಂಬಿದ್ದೇನೆ. ಬೇಲ್ ಪಡೆಯಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಶೀಘ್ರದಲ್ಲಿ ಬೇಲ್ ಸಿಗುತ್ತದೆ ಎಂದ ಅವರು. ಸತೀಶ್ ಪೂಜಾರಿ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಮನೆ ಯಜಮಾನ ಇಲ್ಲದೇ ಹೋದಾಗ ಆ ಮನೆ ನಡೆಸುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು..ಹಿಂದೂ ಹೋರಾಟಗಾರ ಸತೀಶ್ ಪೂಜಾರಿ ಜತೆ ನಾವಿದ್ದೇವೆ. ಬೇಲ್ ಸಿಕ್ಕ ನಂತರ ಮತ್ತೆ ಭೇಟಿಯಾಗುತ್ತೇನೆ ಎಂದು ಕುಟುಂಬಕ್ಕೆ ಪರಿಹಾರಧನದ ಚೆಕ್ ನೀಡಿದರು.
ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್ ಮಾತನಾಡಿ, ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಬಂಧನ ಖಂಡಿಸಿ ಹಾಗೂ ರಾಜ್ಯ ಸರ್ಕಾರ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ ಮಾಡಲಾಗಿದೆ.
ಸತೀಶ್ ಪೂಜಾರಿ ಅವರನ್ನು ಬಂಧಮುಕ್ತಗೊಳಿಸಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಸತ್ಯ ಸಂಗತಿಗಳನ್ನು ಮಾತನಾಡುವ ಸಾಮಾಜಿಕ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಾನಸಿಕ ಸ್ಥೈರ್ಯ ಕುಗ್ಗಿಸುವ, ದಮನಿಸುವ ಪ್ರಯತ್ನಗಳನ್ನು ಮಾಡುತ್ತಿದ್ದು, ಇವರಿಗೆ ಅವರದೇ ಭಾಷೆಯಲ್ಲಿ ಉತ್ತರವನ್ನು ಕೊಡುವ ಸಾಮರ್ಥ್ಯ ಹಿಂದೂ ಸಂಘಟನೆಗಿದೆ’ ಎಂದು ಎಚ್ಚರಿಸಿದರು.
ಬಿಜೆಪಿ ನಾಯಕ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ‘ಕೂಡಲೇ ಹಿಂದೂ ವಿರೋಧಿ ನಡೆಯನ್ನು ಸರ್ಕಾರ ನಿಲ್ಲಿಸಬೇಕು. ಹಾಗೊಂದು ವೇಳೆ ಇನ್ನು ಮುಂದೆ ಸಂಘಟನೆಯ ಕಾರ್ಯಕರ್ತರನ್ನು ಕೆಣಕಿದರೆ, ಅವರ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಯಾವುದೇ ರೀತಿಯ ಕೆಲಸಗಳು ನಡೆದರೆ ಸಂಘಟನೆ ಒಂದು ಸಮಾಜವಾಗಿ ಉತ್ತರವನ್ನು ಕೂಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತದೆ’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹರಿಹರ ಕ್ಷೇತ್ರದ ಶಾಸಕರಾದ ಬಿಪಿ ಹರೀಶ್ , ಮಾಜಿ ದೂಡಾ ಅಧ್ಯಕ್ಷರಾದ ಯಶವಂತರಾವ್ ಜಾದವ್ , ಮೋರ್ಚ ರಾಜ್ಯ ಉಪಾಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ , ಮಹಾನಗರ ಪಾಲಿಕೆ ಸದಸ್ಯರಾದ ಶಿವಪ್ರಕಾಶ್ , ಶಂಕರಗೌಡ ಶಿವು , ತಿಂಕರ್ ಮಂಜಣ್ಣ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು