ದಾವಣಗೆರೆ ,: ಮಧ್ವಾಚಾರ್ಯರಿಂದ 13ನೇ ಶತಾಬ್ದದಲ್ಲಿ ವಿಶೇಷವಾಗಿ ಪ್ರಚಾರಕ್ಕೆ ಬಂದ ದ್ವೈತ ಸಿದ್ಧಾಂತದ ಮೂಲಕವೇ ವೈಷ್ಣವ ಭಕ್ತಿಯು ಬೋಧಿಸಲ್ಪಟ್ಟಿತು. ಮಧ್ವಾಚಾರ್ಯರ ಸಮಗ್ರ ತತ್ವವನ್ನು ಅವರ ಶಿಷ್ಯ ಪ್ರಶಿಷ್ಯರು ಜಗತ್ತಿಗೆ ಸಾರಿದರು. ಈ ವಿಶಿಷ್ಟ ಶಿಷ್ಯ ಸಂಪ್ರದಾಯದ ಪೀಳಿಗೆಗೆ ಸೇರಿದವರೇ ಶ್ರೀ ರಾಘವೇಂದ್ರ ಸ್ವಾಮಿಗಳು.
ಮಂತ್ರಾಲಯದ ಬೃಂದಾವನದಲ್ಲಿ ‘ರಾಯರು’ ಸಜೀವವಾಗಿ ಕುಳಿತು ಭಕ್ತರ ಕಲ್ಪವೃಕ್ಷ-ಕಾಮಧೇನು ಆಗಿದ್ದಾರೆ. ನಾನು ಮತ್ತು ದೇವರು ಒಂದೇ ಅಲ್ಲ. ಎಲ್ಲ ಚೇತನರಿಗೂ ದೇವರಿಗೂ ಭೇದವುಂಟು, ಆತ ಈಶ. ನಾನು ಆತನ ‘ದಾಸ’ ಮಾತ್ರ, ಎಂದು ಸಾರುವ ತತ್ವವೇ ದ್ವೈತ ಸಿದ್ಧಾಂತವಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳು ಸಂಸ್ಕೃತ ಭಾಷೆಯಲ್ಲಿ ಅವರು ಸಾರಸ್ವತ ಪ್ರಪಂಚಕ್ಕೆ ನೀಡಿದ ಮಹತ್ತರವಾದ ಕೊಡುಗೆ ಚಿರಸ್ಮರಣೀಯವಾಗಿದೆ. ವೈದಿಕಮತ ಸಾರವನ್ನು ಎಂತಹ ಜಡಮತಿಯೂ ಕೂಡ ಅರ್ಥೈಸಿಕೊಳ್ಳುವಂತೆ ರಚಿಸಿರುವ ಅವರ ಮೇರು ಕೃತಿಗಳು ಅತ್ಯದ್ಬುತ. ಸಮಗ್ರ ವೇದ-ವೇದಾಂತಾದಿ ಎಲ್ಲಾ ಶಾಸ್ತ್ರಗಳ ತಲಸ್ಪರ್ಶಿ ಜ್ಞಾನವುಳ್ಳ ‘ರಾಯರ’ ಗ್ರಂಥಗಳು ದ್ವೈತ ಸಿದ್ಧಾಂತ ತತ್ವಗಳ ಅವಗಾಹನೆಗೆ ದಾರಿದೀಪಗಳಾಗಿವೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಜರು
ದಕ್ಷಿಣ ಭಾರತದಲ್ಲಿ ಕದಂಬ, ಚಾಳುಕ್ಯ, ಹೊಯ್ಸಳ, ಚೋಳ ಮುಂತಾದ ಅರಸರು ಪ್ರಖ್ಯಾತರಾಗಿದ್ದರು. ಅವರು ವೈದಿಕ ಧರ್ಮಾಬಿಮಾನಿಗಳಾಗಿ ಬ್ರಾಹ್ಮಣ ಕುಟುಂಬಗಳಿಗೆ ವಿಶೇಷ ಮನ್ನಣೆಯಿತ್ತು, ತಮ್ಮ ಆಸ್ಥಾನದಲ್ಲಿ ಉನ್ನತ ಸ್ಥಾನ-ಪದವಿಗಳನ್ನು ಕೊಟ್ಟು ಗೌರವಿಸುತ್ತಿದ್ದರು. ವಿಜಯನಗರದ ಅರಸರು ಕೂಡ ಬ್ರಾಹ್ಮಣಾಭಿಮಾನಿಗಳೇ ಆಗಿದ್ದರು. ಆಗ ಷಾಷ್ಠಿಕ ವಂಶದವರಾದ 60 ಬ್ರಾಹ್ಮಣ ಕುಟುಂಬಗಳು ಅವರ ಆಸ್ಥಾನದಲ್ಲಿದ್ದರು. ಅವರ ಪೈಕಿ ಬೀಗಮುದ್ರೆಯ ಮನೆತನದ ಗೌತಮ ಗೋತ್ರದ ವಂಶಕ್ಕೆ ಸೆರಿದವರು ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಜರು. ವೇದ-ವೇದಾಂತಾದಿ ವಿದ್ಯೆಗಳಲ್ಲಿ ಪಾರಂಗತರಾದ ಕೃಷ್ಣಭಟ್ಟರೆಂಬುವರು ಪ್ರಖ್ಯಾತ ವೀಣಾಪಂಡಿತರಾಗಿ ಕೃಷ್ಣದೇವರಾಯನ ಆಸ್ಥಾನದಲ್ಲಿ ಇದ್ದರು. ಇವರ ಮಕ್ಕಳು ಕನಕಾಚಲಭಟ್ಟರು, ಕನಕಾಚಲಭಟ್ಟರ ಮಕ್ಕಳು ವೀಣಾ ತಿಮ್ಮಣ್ಣ ಭಟ್ಟರು. ಇವರ ವಂಶದಲ್ಲಿ ವೀಣಾವಾದ ಪಾಂಡಿತ್ಯ ತಲೆ-ತಲಾಂತರದಿಂದಲೂ ಮನೆಮಾಡಿತ್ತು.
ಸಾಮ್ರಾಜ್ಯತೊರೆದ ರಾಯರ ಕುಟುಂಬ
ಹದಿನಾರನೆಯ ಶತಮಾನದ ಮಧ್ಯಭಾಗದಲ್ಲಿ ಬಹುಮನಿ ಸುಲ್ತಾನರೆಂದು ಪ್ರಸಿದ್ಧಿ ಹೊಂದಿದ ಐದು ಜನ ಮುಸ್ಲಿಂ ರಾಜರು ಒಂದಾಗಿ ರಕ್ಕಸತಂಗಡಗಿ ಯುದ್ಧದಲ್ಲಿ ಕೃಷ್ಣದೇವರಾಯನ ಅಳಿಯ ರಾಮರಾಯರನ್ನು ಸೋಲಿಸಿದರು. ಈ ಸಂದರ್ಭದಲ್ಲಿ ಮತೀಯ ಕಲಹಗಳು ನಡೆದು ಮಠ-ಮಂದಿರಗಳು ನಾಶವಾಗಿ ಹೋದವು. ಆಗ ರಾಜಾಶ್ರಯ ತಪ್ಪಿದ ವಿದ್ವಾಂಸರು, ಕಲಾಕಾರರು, ವೈದಿಕ ಕುಟುಂಬಗಳೆಲ್ಲಾ ಊರು ಬಿಟ್ಟು ಹೋಗಬೇಕಾಗಿ ಬಂತು. ಅವರ ಪೈಕಿ ವೀಣಾ ತಿಮ್ಮಣ್ಣಭಟ್ಟರು ದೂರದ ಊರಾದ ಕುಂಭಕೋಣಕ್ಕೆ ಹೋದರು. ತಂಜಾವೂರನ್ನು ಚೆವ್ವಪ್ಪ ನಾಯಕನು ಆಳುತ್ತಿದ್ದನು. ಆ ರಾಜನ ಆಶ್ರಯಕ್ಕೆ ಬಂದ ತಿಮ್ಮಣಭಟ್ಟರು ಬ್ರಾಹ್ಮಣಾಗ್ರಹಾರದಲ್ಲಿ ಧರ್ಮಪತ್ನಿಯಾದ ಗೋಪಿಕಾಂಬೆಯೊಂದಿಗೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದರು ಅವರಿಗೆ ಗುರುರಾಜನೆಂಬ ಮಗನು, ವೆಂಕಟಾಂಬೆ ಎಂಬ ಮಗಳು ಜನಿಸಿದರು.
ವೆಂಕಟನಾಥನ ಜನನ
ತಿಮ್ಮಣ್ಣಭಟ್ಟರು ಹಾಗೂ ಪತ್ನಿ ಗೋಪಿಕಾಂಬೆಯು ತಿರುಪತಿಗೆ ಬಂದು ವೆಂಕಟೇಶ್ವರನ ಕೃಪೆಗೆ ಪಾತ್ರರಾಗಲು ದಂಪತಿಗಳಿಬ್ಬರು ಸೇವಾಕಾರ್ಯದಲ್ಲಿ ತೊಡಗಿ ತಮ್ಮ ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ, ಲೋಕಕಲ್ಯಾಣಕಾರಕ, ಜಗನ್ಮಾನ್ಯ ಮತ್ತೊಬ್ಬ ಸುಪುತ್ರನನ್ನು ಪಡೆಯಲು ತಮ್ಮ ಕುಲದೈವ ಶ್ರೀನಿವಾಸನಲ್ಲಿ ಮೊರೆಹೋದರು. ಸ್ವಲ್ಪ ದಿವಸಗಳಲ್ಲಿ ಶ್ರೀನಿವಾಸನ ಅನುಗ್ರಹದಿಂದ ಕ್ರಿ.ಶ. 1595 ಶ್ರೀಮನ್ಮಥನಾಮ ಸಂವತ್ಸರದ ಫಾಲ್ಗುಣ ಶುಕ್ಲ ಸಪ್ತಮಿ ಶುಕ್ರವಾರ ಮೃಗಶಿರ ನಕ್ಷತ್ರದಲ್ಲಿ ಗಂಡು ಮಗು ಜನಿಸಿತು. ಈ ಮಗುವಿಗೆ ‘ವೆಂಕಟನಾಥ’ ಎಂದೇ ನಾಮಕರಣ ಮಾಡಿದರು. 3 ವರ್ಷ ತುಂಬಲು ಚೌಲ ಸಂಸ್ಕಾರ ತದನಂತರ ದಿನದಲ್ಲಿ ಆಕ್ಷರಾಭ್ಯಾಸ ಮಾಡಿಸಿದರು. ಉಪನಯನ ಕಾರ್ಯವನ್ನು ಮುಗಿಸಿ ಅಕ್ಕನ ಮನೆಯಲ್ಲಿ ಭಾವನಾದ ಲಕ್ಷ್ಮೀ ಮೀನರಸಿಂಹಾಚಾರ್ಯರ ಶಿಷ್ಯನಾಗಿ ವೆಂಕಟನಾಥನು ವೇದ-ಶಾಸ್ತ್ರಾಧ್ಯಯನ ಮಾಡುವಂತೆ ಕಳಿಯಿಸಿದರು.
ಬಹುಬೇಗ ವೇದ-ಶಾಸ್ತ್ರಗಳಲ್ಲಿ ತಲಸ್ಪರ್ಶಿಜ್ಞಾನ ಸಂಪಾದಿಸಿ ವ್ಯಾಕರಣ, ಮೀಮಾಂಸಾ, ತರ್ಕ, ವೇದಾಂತ ಶಾಸ್ತ್ರಗಳ ಪಾಠಗಳನ್ನು ನಿತ್ಯವೂ ಅಭ್ಯಾಸ ಮಾಡಿ ಕಾವ್ಯ, ನಾಟಕ, ಅಲಂಕಾರ ಗ್ರಂಥಗಳನ್ನು ಸಮಗ್ರವಾಗಿ ವೆಂಕಟನಾಥ ಅಧ್ಯಯನಿಸಿ ಪಾಂಡಿತ್ಯ ಪಡೆದನು.
ವೆಂಕಟನಾಥನಿಗೆ ಬಂದ ಬಿರುದುಗಳು:
ಗುರುರಾಜಾಚಾರ್ಯರು ಪ್ರಾಥಮಿಕ ವಿದ್ಯೆಯಲ್ಲಿ ಪ್ರವೀಣನಾದ ವೆಂಕಟನಾಥರನ್ನು ಕುಲ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರಲ್ಲಿಗೆ ಮಹತ್ವದ ವಿದ್ಯಾಭ್ಯಾಸಕ್ಕೆಂದು ಕಳಿಯಿಸಿದರು. ವೆಂಕಟನಾಥನು ಶ್ರೀ ಮಧ್ವಾಚಾರ್ಯರ, ಶ್ರೀ ಜಯತೀರ್ಥರು, ಶ್ರೀ ವಿಭುದೇಂದ್ರ ತೀರ್ಥರು, ಶ್ರೀ ವ್ಯಾಸ ತೀರ್ಥರ ಗ್ರಂಥಗಳನ್ನು ಸಮಗ್ರವಾಗಿ ಅಭ್ಯಸಿಸಿದರು. ಇವರ ಪಾಂಡಿತ್ಯಕ್ಕೆ ಗುರುಗಳು ‘ಪರಿಮಳಾಚಾರ್ಯ’ ಎಂಬ ಬಿರುದನ್ನು ದಯಪಾಲಿಸಿದರು.
ಶ್ರೀ ಕ್ಷೇತ್ರ ಮುನ್ನಾರು ಗುಡಿಯಲ್ಲಿ ನಡೆದ ತರ್ಕದಲ್ಲಿ ದ್ವೈತ ತತ್ತ್ವವನ್ನು ವೆಂಕಟನಾಥನು ಸಮರ್ಥವಾಗಿ ವಾದಿಸಿ, ಪ್ರತಿವಾದಿಗಳು ನಿರುತ್ತರರಾಗಿ ಹೋದಾಗ ಸಂತಸಗೊಂಡ ಶ್ರೀ ಸುಧೀಂದ್ರ ತೀರ್ಥರು ಮಹಾಭಾಷ್ಯಾಚಾರ್ಯರೆಂದು ಬಿರುದುಕೊಟ್ಟು ಗೌರವಿಸಿದರು. ತಂಜಾವೂರಿನ ಅರಮನೆಯಲ್ಲಿ ನಡೆದ ಪಂಡಿತರ ಸಭೆಯಲ್ಲಿ ವಿಬುಂಧಾನಂದರು ಅಲಂಕಾರ ಶಾಸ್ತ್ರದಲ್ಲಿ ನನ್ನೊಡನೆ ವಾದದಲ್ಲಿ ಗೆದ್ದರೆ ನನ್ನ ‘ಭಟ್ಟಾಚಾರ್ಯ’ ಬಿರುದನ್ನು ತ್ಯಜಿಸಿ ಕೊಟ್ಟುಬಿಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರು. ಈ ವಾದದಲ್ಲಿ ವೆಂಕಟನಾಥನು ಜಯಗಳಿಸಿದ ಪ್ರಯುಕ್ತ ರಾಜನು ವೆಂಬಕನಾಥರಿಗೆ ಈ ‘ಬಿರುದು’ ನೀಡಿ ಸತ್ಕರಿಸಿದನು.
ವೆಂಕಟನಾಥರ ವಿವಾಹ:
ಅಣ್ಣನಾದ ಗುರುರಾಜಾಚಾರ್ಯರು ತಮ್ಮನಿಗೆ ವಿವಾಹ ಮಾಡುವ ಸಂಕಲ್ಪದಿಂದ ‘ಸರಸ್ವತಿ’ ಎಂಬ ಕನ್ಯೆಯೊಂದಿಗೆ ಕ್ರಿ.ಶ. 1614ರಲ್ಲಿ ವಿವಾಹ ನೆರವೇರಿಸಿದರು. ವೆಂಕಟನಾಥ ದಂಪತಿಗಳು ಕೆಲವು ಕಾಲ ಅಣ್ಣನ ಕುಟುಂಬದಲ್ಲಿಯೇ ಇದ್ದು ತದನಂತರ ಪ್ರತ್ಯೇಕ ವಾಸವಾಗಿರಲು ಬಯಸಿದರು. ಇವರಿಗೆ ‘ಪುತ್ರ’ ಪ್ರಾಪ್ತಿಯಾಯಿತು. ಮಗುವಿಗೆ ‘ಲಕ್ಷಿ್ಮೀನಾರಾಯಣ’ನೆಂದು ನಾಮಕರಣ ಮಾಡಿದರು. ಗುರುಗಳಾದ ಶ್ರೀ ಸುಧೀಂದ್ರರ ಅಪ್ಪಣೆಯಂತೆ ಕಾವೇರಿ ಪಟ್ಟಣದಲ್ಲಿ ವಿದ್ಯಾಪೀಠವನ್ನು ನಡೆಸುವ ಸಲುವಾಗಿ ಪತ್ನಿ, ಮಗುವಿನೊಂದಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ವಿದ್ಯಾಪೀಠ ಸರಿಯಾಗಿ ನಡೆಯದೇ, ಮನೆ ಕಳ್ಳತನವಾಗಿ ಮಗುವನ್ನು ಸಾಕಲು, ತಮ್ಮ ಜೀವನ ಸಾಗಿಸಲು ಕಷ್ಟವಾಗಿ ಬಡತನದ ಬೇಗೆಯಲ್ಲಿ ಬೆಂದರು.
ವೆಂಕಟನಾಥರಿಗೆ ಸನ್ಯಾಸ ದೀಕ್ಷೆಯ ಬಯಕೆ:
ವೆಂಕಟನಾಥನು ವಿದ್ವತ್ವಲಯದಲ್ಲಿ ಹೆಸರು ಮಾಡಿದರು, ಶ್ರೀ ಸುಧೀಂದ್ರ ತೀರ್ಥರಿಗೆ ವಯಸ್ಸಾಯಿತು, ಉತ್ತರಾಧಿಕಾರಿಯನ್ನು ಆರಿಸಲು ಅವರು ಚಿಂತಿಸುತ್ತಿರುವಾಗ ವೆಂಕಟನಾಥನಿಗೆ ಸನ್ಯಾಸ ದೀಕ್ಷೆ ಬಯಕೆ ಇರಲಿಲ್ಲ. ವಿನಯ, ವಿಧೇಯತೆಯಿಂದ ಗುರುಗಳಲ್ಲಿ ಅರಿಕೆಮಾಡಿ ನಾನು ಸನ್ಯಾಸಿಯಾಗಲಾರೆ ಎಂದು ತಿಳಿಸಿ ಮನೆಗೆ ಬಂದರು. ತಾನು ಸನ್ಯಾಸಿಯಾದರೆ ಹೆಂಡತಿ-ಮಕ್ಕಳ ಪರಿಸ್ಥಿತಿ ಗಂಭೀರವಾಗುವುದೆಂಬ ಚಿಂತೆ ಕಾಡಿತು. ಭಗವತ್ಸಂಕಲ್ಪ, ವಾಗ್ದೇವಿಯ ಆಜ್ಞೆ, ಕರ್ತವ್ಯದ ಕರೆಗಳಿಂದಾಗಿ, ಲೋಕಕಲ್ಯಾಣಕ್ಕಾಗಿ ‘ಭಾರ್ಯೆಯ’ ತ್ಯಾಗ ಅನಿವಾರ್ಯವೆಂದು ನಿಶ್ಚಯಿಸಿದರು. ಅವರ ಸನ್ಯಾಸ ಕುರಿತು ಪತ್ನಿ ಸರಸ್ವತಿಗೆ ಕರುಳು ಕತ್ತರಿಸಿದಂತಾಯ್ತು, ದುಃಖ ಉಕ್ಕಿ ಹರಿಯಿತು. 23 ವರ್ಷದ ಹುಡುಗಿ ಪತಿಯನ್ನು ನಂಬಿ ಬದುಕುವವಳು, ಪತ್ನಿಯನ್ನು ಮನ ಒಲಸುವಲ್ಲಿ ವೆಂಕಟನಾಥ ಮುಂದಾದರು. ಮಗನಿಗೆ ಉಪನಯನ ಮಾಡಿ ಮುಗಿಸಿದರು. ವೆಂಕಟನಾಥ ಸನ್ಯಾಸವಾಗುವ ಸಂದರ್ಭ ತಪ್ಪಿಸಲು ಸಾಧ್ಯವಾಗಲಿಲ್ಲ. ಕ್ರಿ.ಶ. 1621ನೇ ಇಸವಿ ಪಾಲ್ಗುಣಶುದ್ಧ ಬಿದಿಗೆಯ ದಿನ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥನಿಗೆ ತುರೀಯಾಶ್ರಯ ದೀಕ್ಷೆಯನ್ನಿತ್ತು ಶ್ರೀ ರಾಘವೇಂದ್ರತೀರ್ಥ ಎಂದು ನಾಮಕರಣ ಮಾಡಿದರು. ಪ್ರಣಮ ಮಂತ್ರೋಪದೇಶ ಮಾಡಿದ ಮೇಲೆ ವೇದಾಂತ ವಿದ್ಯಾ ಸಾಮ್ರಾಜ್ಯ ಸಿಂಹಾಸನದಲ್ಲಿ ಕೂಡಿಸಿ ಪಟ್ಟಾಭಿಷೇಕ ಮಾಡಿದರು. ತಂಜಾವೂರಿನ ರಾಜಾ ರಘುನಾಥನು ಶ್ರೀ ರಾಘವೆಂದ್ರ ತೀರ್ಥರಿಗೆ ಭೂಮಾನ್ಯಗಳನ್ನಿತ್ತು ರತ್ನಾಭಿಷೇಕ ಮಾಡುತ್ತಾ ಧನ್ಯತೆಯನ್ನು ಪಡೆದನು.
ಶ್ರೀ ರಾಘವೇಂದ್ರ ನಾಮ ಸಾರ್ಥಕತೆ
ಶ್ರೀ ರಾಘವೇಂದ್ರ ಸ್ವಾಮಿಗಳ ಗ್ರಂಥಗಳನ್ನು ಓದಿದವರಿಗೆ ನೈಜಸಂಗತಿಯ ಅರಿವಾಗದಿರದು. ಮಹಾಮೇಧಾವಿಗಳು, ಭುವಿಗೆ ಬಂದ ಕರ್ಮಜದೇವತೆ, ಪರಮಭಾಗವತೋತ್ತಮ, ರಾಘವೆಂದ್ರ ಎಂದರೆ ರಘುಕುಲ ದೀಪಕನಾದ ಶ್ರೀ ರಾಮಚಂದ್ರನೇ ಆದ್ದರಿಂದ ರಾಯರು ಕೂಡ ಜಗತ್ಕಲ್ಯಾಣಕ್ಕಾಗಿ ಪಣತೊಟ್ಟರು. ಭಕ್ತರ ಇಷ್ಟಾರ್ಥಗಳನ್ನು ಅವರಿಗೆ ಸನ್ನಡೆತೆಯ ಮಾರ್ಗದಲ್ಲಿ ಪೂರೈಸುವವರು ಎಂಬುದೇ ‘ರಾಘವೇಂದ್ರ’ ಎಂಬ ಪದಕ್ಕೆ ಅರ್ಥ. ಹರಿದಾಸರು ರಾಘವೇಂದ್ರ ಎಂಬ ಪದದ ಪ್ರತಿ ಅಕ್ಷರವನ್ನು ವಿಶದೀಕರಿಸಿ ಅರ್ಥೈಸಿದ್ದಾರೆ. ತಮ್ಮನ್ನು ನಂಬಿ ಬಂದ ಭಕ್ತರಿಗೆ ಮಾರ್ಗದರ್ಶಕರಾಗಿ, ಪರಿಮಳಾಚಾರ್ಯರೆಂಬ ಅನ್ವರ್ಥನಾಮ ಧ್ಯೇಯವುಳ್ಳ ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಮಹಾಮೇಧಾವಿಗಳೆಂದು ಗುರು ಗುಣಸ್ತವದಲ್ಲಿ ಸಾರಿದ್ದಾರೆ. ರಾಯರು ಸಹಜಸಿದ್ಧವಾದ ತಮ್ಮ ಜ್ಞಾನದ ಮೂಲಕ ಶ್ರೀ ಹರಿಸರ್ವೋತ್ತಮ, ವಾಯಜೀವೋತ್ತಮ, ಜೀವರು ಬೇರೆ ಈಶನು ಬೇರೆ ಎಂಬುದೇ ವೇದಶಾಸ್ತ್ರಗಳ ನಿಜವಾದ ಪರಿನಿಷ್ಟಿತವಾದ ಅರ್ಥವೆಂದು ಸಾರಿದರು. ಶ್ರೀ ರಾಯರು ವೀಣಾವಾದನದಲ್ಲೂ ಮೈಮರೆತು ತಲ್ಲಿನರಾಗುತ್ತಿದ್ದರು.
ಸರಸ್ವತಮ್ಮನವರ ದೇಹ ಪರಿತ್ಯಾಗ:
ರಾಯರ ಸನ್ಯಾಸ ಸ್ವೀಕಾರದ ಸುದ್ಧಿತಿಳಿದ ಸರಸ್ವತಿ ಅಮ್ಮನವರು ಈ ಲೋಕವನ್ನೇ ಬಿಟ್ಟು ಬಿಡುವ ಆಲೋಜನೆಯಿಂದ ಆತ್ಮಹತ್ಯೆಗೆ ಮನಸ್ಸು ಮಾಡಿದರು. ಅದು ಪಾಪಕಾರ್ಯವೆಂದು ಗೊತ್ತಿದ್ದರೂ ಚಿಕ್ಕ ವಯಸ್ಸಿನಲ್ಲಿಯೇ ಪತಿ ಇದ್ದು ಕೂಡ ಅವರನ್ನು ನೋಡದಂತಹ ವಿರಹ ಉಂಟಾದುದನ್ನು ಅವರು ಸಹಿಸದಾಗಿದ್ದರು.ಅವರಿಗೆ ಅತಿಯಾದ ದುಃಖದ ಉಪಶಮನಕ್ಕೆ ಬೇರೆ ದಾರಿಯೇ ತೋಚದಿರಲು ಹತ್ತಿರವಿದ್ದ ಒಂದು ಭಾವಿಯಲ್ಲಿ ಹಾರಿ ಆತ್ಮಹತ್ಯೆಮಾಡಿಕೊಂಡರು. ಈ ಸಂಗತಿಯನ್ನು ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಭಕ್ತರು ತಿಳಿಸಿದರು. ತಮ್ಮ ಪೂರ್ವಾಶ್ರಮದ ಪತ್ನಿಯ ಸದ್ಗುಣಗಳು ನೆನಪಿಗೆ ಬಂದವು ನಾಲ್ಕಾರು ಹನಿ ದುಃಖಾಶ್ರುಗಳು ಹೊರಬಂದವು ಯಥಾಸ್ಥಿತಿಯಲ್ಲಿ ತಮ್ಮ ಜಪ-ತಪಾಧಿ ಕಾರ್ಯಗಳಲ್ಲಿ ಪ್ರವೃತ್ತರಾದರು. ಶ್ರೀ ರಾಘವೇಂದ್ರ ತೀರ್ಥರ ಅಲೌಕಿಕ ತೇಜಸ್ಸು, ಪಾಂಡಿತ್ಯ-ಪ್ರತಿಭೆಗಳು, ಲೋಕ ಕಲ್ಯಾಣ ದೀಕ್ಷೆಗಳನ್ನು ನೋಡಿ ಸರ್ವರೂ ಮೂಕ ವಿಸ್ಮಿತರಾಗುತ್ತಿದ್ದರು. ಲೋಕಸಂಚಾರ ಕಾರ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಯಾಣ ಬೆಳೆಸಿದರು.
ರಾಘವೇಂದ್ರ ಸ್ವಾಮಿಗಳಿಂದ ಗ್ರಂಥ ರಚನೆ
ರಾಯರು ಅಪೂರ್ವವಾದ ಗ್ರಂಥಗಳ ರಚನೆಯನ್ನು ಮಾಡಿದ್ದಾರೆ. ಅವು ಹೀಗಿವೆ, ಕಥಾಲಕ್ಷಣ, ಪ್ರಮಾಣ ಲಕ್ಷಣ, ತತ್ವ ಸಂಖ್ಯಾನ, ತತ್ವವಿವೇಕ, ಮಾಯವಾದ ಖಂಡನ, ಉಪಾಧಿಖಂಡನ, ಮಿಥ್ಯಾತ್ವಾನು ಖಂಡನ, ತತ್ವೋದ್ಬೋತ, ವಿಷ್ಣು ತತ್ವ ನಿರ್ಣಯ, ಕರ್ಮನಿರ್ಣಯ, ದಶೋಪನಿಷತ್ತುಗಳಿಗೆ ಶ್ರೀ ಮಧ್ವಾಚಾರ್ಯರ, ಟೀಕಾಚಾರ್ಯರ ಭಾವವನ್ನು ಅನುಸರಿಸಿ ಖಂಡಾರ್ಥಗಳೆಂಬ ಗ್ರಂಥಗಳನ್ನು ರಚಿಸಿದರು.
ಪಂಚಸೂಕ್ತಗಳಿಗೆ ಶ್ರೇಷ್ಠ ವ್ಯಾಖ್ಯಾನಗಳನ್ನು ರಚಿಸಿದರು, ಶ್ರೀಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯ ನಿರ್ಣಯಕ್ಕೆ ‘ಭಾವ ಸಂಗ್ರಹ’ ವನ್ನು, ರಾಮಾಯಣವನ್ನು ಆಧರಿಸಿ ‘ಶ್ರೀರಾಮ ಚಾರಿತ್ರಾ್ಯಮಂಜರಿ’ ಯನ್ನು ಭಾಗವತದ ಶಮಸ್ಕಂದವನ್ನು ಆಧರಿಸಿ ‘ಶ್ರೀಕೃಷ್ಣ ಚಾರಿತ್ರ್ಯಮಂಜರಿ’ ಎಂಬ ಮೂರು ಸ್ವತಂತ್ರ ಕಾವ್ಯಗಳನ್ನು ರಚಿಸಿದರು. ಮೀಮಾಂಸಾಶಾಸ್ತ್ರವು ದ್ವೈತ ಸಿದ್ಧಾಂತಕ್ಕೆ ಸಹಕಾರಿಯಾಗಿದೆ. ಪಾಠ-ಪ್ರವಚನಗಳಿಗೆ, ವಾದಾದಿ ವಾಕ್ಯಾರ್ಥವಿಚಾರಕ್ಕೆ ಸಹಾಯಕವಾಗಲೆಂಬ ಆಕಾಂಕ್ಷೆಯಿಂದ ಭಾಟ್ಟಮೀಮಾಂಸಾಶಾಸ್ತ್ರದ ಮೇಲೆ ‘ಭಾಟ್ಟಾಸಂಗ್ರಹವೆಂಬ’ ಅದ್ವಿತೀಯ ಗ್ರಂಥವನ್ನು ರಚಿಸಿದರು. ಈ ಗ್ರಂಥವು ಮಧುರೆಯಲ್ಲಿ ಆನೆಯ ಮೇಲೆ ಬಂಗಾರದ ಅಂಬಾರಿಯಲ್ಲಿ ರಾಜಬೀದಿಗಳಲ್ಲಿ ಮೆರವಣಿಗೆ ಆಯಿತು. ಇದರಿಂದ ರಾಯರಿಗೆ ರತ್ನಾಭಿಷೇಕವನ್ನು ಮಧುರೆ ರಾಜ ತಿರುಮಲನಾಯಕ ಮಾಡಿ, ಎರಡು ಗ್ರಾಮಗಳನ್ನು, ರತ್ನಾಭರಣಗಳನ್ನು, ಬಂಗಾರದ ಪೆಟ್ಟಿಗೆಯನ್ನು ಕಾಣಿಕೆಯಾಗಿ ಅರ್ಪಿಸಿದನು.
ರಾಯರ ಸಂಕಲ್ಪಯಾತ್ರೆ:
ಪೂಜ್ಯ ಶ್ರೀ ರಾಘವೇಂದ್ರ ಸ್ವಾಮಿಗಳು ನಾಡಿನಾದ್ಯಂತ ಪ್ರಯಾಣಿಸಿ, ಭಕ್ತರ ನೋವು-ನಲಿವುಗಳಿಗೆ ಸ್ಪಂದಿಸಿ, ಗುರುಕಾರುಣ್ಯ ನೀಡಿದರು. ತಮಿಳುನಾಡು, ಆಂದ್ರಪ್ರಧೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಾದ್ಯಂತ ಪ್ರಯಾಣಿಸಿ, ಆನಂತ ಮಹಿಮೆಗಳನ್ನು ಭಕ್ತರ ಮನದಂಗಳದಲ್ಲಿ ಭಿತ್ತಿದರು.
ದ್ವೈತಮತದ ಮೂಲ ಸ್ಥಾನವೆನಿಸಿರುವ ಶ್ರೀ ಉಡುಪಿ ಕ್ಷೇತ್ರಕ್ಕೆ ರಾಯರು ಆಗಮಿಸಿ ಒಂದು ವಾರಗಳ ಕಾಲ ಉತ್ಸವಗಳಲ್ಲಿ ಪಾಲ್ಗೊಂಡರು, ಸುಬ್ರಮಣ್ಯ, ರಾಯನಾಥಪುರ, ಫಂಡರಪುರ, ಕೊಲ್ಲಾಪುರ, ನಾಸಿಕ್, ಬಿಜಾಪೂರ, ಆಲೂರು, ಶ್ರೀಶೈಲ, ತಿರುಪತಿ, ಕಾಳಹಸ್ತಿ, ಗದಗ, ಕಿರೀಟಗಿರಿ, ಸವಣೂರು, ಸಿರಸಂಗಿ, ಮಾನ್ವಿ, ಹೈದ್ರಾಬಾದ ಹೀಗೆ ಅನೇಕ ಸ್ಥಳಗಳಿಗೆ ಭೆಟ್ಟಿ ನೀಡಿ ಭಕ್ತರಲ್ಲಿ ಅನೇಕ ಮಹಿಮೆಗಳನ್ನು, ಧಾರ್ಮಿಕ ಮಾರ್ಗದರ್ಶನವನ್ನು ನೀಡಿದ ಕೀರ್ತಿ ರಾಯರಿಗೆ ಸಲ್ಲುತ್ತದೆ.
ರಾಯರು ಮಂತ್ರಾಲಯದ ಬೃಂದಾವನ ಪ್ರವೇಶ:
ನವಾಬನು ಆದವಾನಿ ಹತ್ತಿರದ ತುಂಗಭದ್ರಾ ನದಿಯ ತೀರದಲ್ಲಿ ಮಂಚಾಲಿ ಗ್ರಾಮವನ್ನು ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ದಾನವಾಗಿ ನೀಡಿದರು. ರಾಯರು ಮಂತ್ರಾಲಯ ಸಮೀಪದ ಗಾಣದಾಳು ಎಂಬ ಗ್ರಾಮದ ಸಮೀಪದ ಗುಡ್ಡದಲ್ಲಿ ಮೌನವ್ರತ ಆರಂಭಿಸಿದರು. ನಂತರ ಬಿಚ್ಚಾಲೆಗೆ ಬಂದು ಅನುಷ್ಠಾನದಲ್ಲಿ ಒಂದು ಚಾತುರ್ಮಾಸದ ದಿನಗಳನ್ನು ಕಳೆದು ತದನಂತರ ಮಂತ್ರಾಲಯಕ್ಕೆ ಆಗಮಿಸಿದರು. ಮಂಚಾಲಮ್ಮ ದೇವಿಯ ಸಾಕ್ಷಾತ್ಕಾರದಿಂದ ರಾಯರು ಪ್ರಸನ್ನರಾದರು. ತಮ್ಮ ಕೊನೆಯ ಕಾಲವನ್ನು ಮಂತ್ರಾಲಯದಲ್ಲಿ ಕಳೆಯಲು ಬಯಸಿದರು. ವೆಂಕಟೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿಸಿದರು. ಶಿಷ್ಯ ದಿವಾನ್ ವೆಂಕಣ್ಣನಿಗೆ ರಾಯರು ಬೃಂದಾವನ ಪ್ರವೇಶ ಮಾಡುತ್ತೇನೆ, ದೇಹತ್ಯಾಗ ಮಾಡುವುದಿಲ್ಲ. ಜೀವಂತವಾಗಿಯೇ ಬೃಂದಾವನದೊಳಗೆ ಇದ್ದು, ಏಳುನೂರು ವರ್ಷಗಳವರೆಗೆ ಲೋಕದ ಕಲ್ಯಾಣವನ್ನು ಮಾಡುತ್ತೇನೆ. ಈ ‘ಮಂಚಾಲಿ’ ಗ್ರಾಮವು ಮಂತ್ರಾಲಯವೆಂದು ಜಗತ್ಪ್ರಸಿದ್ಧವಾಗುವುದು, ಈ ಕ್ಷೇತ್ರ ಭಕ್ತರ ಸಕಲ ಇಷ್ಟಾರ್ಥಗಳನ್ನು ಇಚ್ಛಿಸುವ, ಕೋಟ್ಯಾಂತರ ಭಕ್ತರ ಯಾತ್ರಾಸ್ಥಳವಾಗಿ ಪ್ರಸಿದ್ಧಿ ಹೊಂದುವುದು ಎಂದು ‘ರಾಯರು’ ವೆಂಕಣ್ಣನಿಗೆ ತಿಳಿಸಿದರು.
ವೆಂಕಣ್ಣನು ನಿರ್ಮಾಣ ಮಾಡಿಸಿದ ವೃಂದಾವನವನ್ನು ತೋರಿಸಿದನು.ಕ್ರಿ.ಶ. 1671 ವಿರೋಧಿಕೃತ ಸಂವತ್ಸರದ ಆಷಾಢ ಮಾಸದಲ್ಲಿ ಚಾತುರ್ಮಾಸದ ದಿನಗಳು ಪ್ರಾರಂಭವಾಗಿ ಶ್ರಾವಣಮಾಸ ಬಂತು. ಶ್ರಾವಣ ಬಹುಳ ದ್ವಿತೀಯಾ ದಿನ ಇಹಲೋಕದ ಕಾರ್ಯಗಳನ್ನೆಲ್ಲಾ ಪೂರೈಸಿ ಬೃಂದಾವನ ಪ್ರವೇಶ ಮಾಡಲು ನಿರ್ಣಯಿಸಿದರು. ಈ ಸುದ್ಧಿ ತಿಳಿದ ಭಕ್ತಸಾಗರ ಆಗಮಿಸಿತು. ಕೃಷ್ಣಪಕ್ಷದ ಬಿದಿಗೆ ಶುಕ್ರವಾರ ನೆರದಿದ್ದ ಭಕ್ತ ಸಮೂಹಕ್ಕೆ ಶುಭಾಶೀರ್ವಾದ ಮಾಡುತ್ತಾ ಬೃಂದಾವನದಲ್ಲಿ ಕುಳಿತು ಧ್ಯಾನಾಸಕ್ತರಾದರು. ಕೊನೆಯ ಕಿಂಡಿಯನ್ನು ಗುರುಗಳ ಆದೇಶದಂತೆ ದಿವಾನ ವೆಂಕಣ್ಣ ಮುಚ್ಚಿದರು. ದುಃಖ, ನಿಶ್ಯಬ್ದದ ಮೌನ ರಾಜ್ಯವೇ ಅಲ್ಲಿ ಕ್ಷುಣ್ಣವಾಗಿ ಕಾಣುವಂತಾಯಿತು. ಬೃಂದಾವನದ ವಿಶೇಷ ಅಲಂಕಾರ ಮಾಡಿ ಪೂಜೆ, ಭಜನೆಯನ್ನು ಭಕ್ತ ಸಮೂಹ ನಡೆಸಿದರು.
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ|ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ|| ಎಂಬ ಶ್ಲೋಕವು ಸರ್ವರಿಂದಲೂ ಸದಾ ಜಪಿಸಲ್ಪಡುವ ಮಹಾಮಂತ್ರವೇ ಆಗಿದೆ. ನಿತ್ಯ-ಸತ್ಯಗಳನ್ನು ಸರ್ವ ಸಜ್ಜನರಿಗೆ ತೋರಿಸುತ್ತಿರುವ, ಆನಂತ ಕಾಲದವರೆಗೂ ಸತ್ಯರೂಪೀ ಪರಮಾತ್ಮನ ಅಂತರಂಗ ಭಕ್ತರಾದ ಶ್ರೀ ರಾಯರನ್ನು ಹೊಗಳುವ ಈ ಶ್ಲೋಕ ನಿಜವಾಗಿ ಸರ್ವಾಭಿಷ್ಟದಾಯಕವಾಗಿದೆ.
ಕೋಟ್ಯಾಂತರ ಜನರು ರಾಯರ ಅನುಗ್ರಹವನ್ನು ಪಡೆದು ಸಂತಸಭರಿತ ಜೀವನ ಸಾಗಿಸುತ್ತಿದ್ದಾರೆ. ಸರ್ವಜಾತಿ, ಜನಾಂಗದವರಿಗೆ ‘ರಾಯರು’ ಗುರುಗಳಾಗಿದ್ದಾರೆ, ಮಹಾತ್ಮರಾಗಿದ್ದಾರೆ. ಅವರು ಭಕ್ತರಲ್ಲಿ ಮಾಡಿದ ಆನಂತ ಮಹಿಮೆಗಳನ್ನು ಇಲ್ಲಿ ದಾಖಲಿಸಿ ಹೇಳಲು ಅಸಾಧ್ಯ ಹೀಗೆ ರಾಯರ ಅನುಗ್ರಹ, ಮಹಿಮೆಗಳು ಅಪಾರವಾಗಿವೆ. ಅವರು ಇಂದಿಗೂ ಭಕ್ತರ ಕಲ್ಪವೃಕ್ಷವಾಗಿದ್ದಾರೆ.
……
ಲೇಖನ ಬರೆದವರು : ಡಾ. ಗಂಗಾಧರಯ್ಯ ಹಿರೇಮಠ, ನಿವೃತ್ತ ಪ್ರಾಧ್ಯಾಪಕರು, ದಾವಣಗೆರೆ.ಮೊ: 9880093613