ಶಿವಮೊಗ್ಗ.
ಕಳೆದ 2 ವರ್ಷಗಳಿಂದ ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ಗಳಿಗೆ ಅರ್ಜಿಗಳನ್ನು ಕರೆದಿಲ್ಲ ಎಂದು ಆರೋಪಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ಗಳನ್ನು 2 ವರ್ಷಗಳಿಂದ ಅರ್ಹ ಫಲಾನುಭವಿಗಳಿಗೆ ನೀಡುತ್ತಿಲ್ಲ, ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರು ವಂಚಿತರಾಗುತ್ತಿದ್ದಾರೆ. ಈ ಹಿಂದೆ ರಾಜ್ಯದಲ್ಲಿ 10.10ಲಕ್ಷ ಅರ್ಜಿಗಳನ್ನು ಬಿಪಿಎಲ್ ಕಾರ್ಡ್‍ಗಳಿಗಾಗಿ ಕರೆಯಲಾಗಿತ್ತು. ಇದರಲ್ಲಿ 7.99 ಲಕ್ಷ ಇತ್ಯಾರ್ಥ ಪಡಿಸಿ ಇನ್ನು 2.10ಲಕ್ಷ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದೆ ಎಂದರು.
ಹಾಗೆಯೇ 2.07ಲಕ್ಷ ಎಪಿಎಲ್‍ಗಾಗಿ ಅರ್ಜಿ ಬಂದಿದ್ದು, ಇದರಲ್ಲಿ 1.34 ಲಕ್ಷ ಅರ್ಜಿಗಳನ್ನು ಪರಿಷ್ಕರಿಸಿ 72,876 ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದೆ. ಹಾಗಾಗಿ ಕಾರ್ಡ್ ವಂಚಿತರಾದವರು ರಾಜ್ಯ ಸರ್ಕಾರದ ಯಾವುದೇ ಮಹತ್ವಕಾಂಕ್ಷಿ ಯೋಜನೆಗಳನ್ನು ಪಡೆಯಲು ಲಾಭವಾಗುತ್ತಿಲ್ಲ. ಬಡವರು ಸರ್ಕಾರಕ್ಕೆ ಇಡೀ ಶಾಪ ಹಾಕುತ್ತಿದ್ದಾರೆ ಎಂದು ದೂರಿದರು.
ಅನ್ನಭಾಗ್ಯ, ಗೃಹಲಕ್ಷ್ಮೀ, ಆಯುಷ್ಮಾನ್ ಭಾರತ್, ರೈತರಿಗೆ ಸಬ್ಸಿಡಿ ವಿವಿಧ ಸಾಮಾಜಿಕ ಭದ್ರತೆಯ ಯೋಜನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳು ಬಡವರಿಗೆ ಕಾರ್ಡ್‍ಗಳಿಲ್ಲದೆ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ಬಾಕಿ ಉಳಿಸಿಕೊಂಡ ಅರ್ಜಿಗಳನ್ನು ಇತ್ಯಾರ್ಥಗೊಳಿಸಿ ಬಡವರಿಗೆ ನೀಡಬೇಕು. ಮತ್ತು ಹೊಸದಾಗಿ ಅರ್ಜಿ ಹಾಕಲು ಅವಕಾಶ ನೀಡಬೇಕು ಎಂದು ಮನವಿದಾರರು ಆಗ್ರಹಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಶಂಕರನಾಯ್ಕ, ಜಿ.ವಿ.ಮಂಜುಳ, ಟಿ.ಬಿ.ಸೋಮಶೇಖರಯ್ಯ, ಕೆರೆ ಸ್ವಾಮಿ, ಆದಿಶೇಷ, ಮೀನಾಕ್ಷಿ ಮುಂತಾದವರು ಇದ್ದರು