


ದಾವಣಗೆರೆ: ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಒಕ್ಕೂಟದ ಮುಖಂಡರು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ನೀರಾವರಿ ಇಲಾಖೆಯ ಕಚೇರಿ ಮುಂಭಾಗ ಜಮಾಯಿಸಿದ ರೈತರು, ಸರ್ಕಾರ, ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ,
‘ಕೊನೆ ಭಾಗದ ರೈತರಿಗೆ 80 ದಿನ ಕಳೆದರೂ ನೀರು ತಲುಪಿಲ್ಲ. ನಾಲೆಗಳು ಒಣಗಿದ ಸ್ಥಿತಿಯಲ್ಲಿವೆ. ಕೊನೆ ಭಾಗದ ರೈತರು ಹಿಂದಿನಿಂದಲೂ ಮಲತಾಯಿ ಧೋರಣೆಗೆ ಒಳಗಾಗುತ್ತಿದ್ದಾರೆ. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತನಾಡಿ 3–4 ದಿನಗಳಲ್ಲಿ ನೀರು ಕೊಡಿಸುವ ಪ್ರಯತ್ನ ಮಾಡಲಾಗುವುದೆಂದು ಹೇಳಿದರು

ರೈತ ಮುಖಂಡ ಬಿ.ಎಂ.ಸತೀಶ್ ಮಾತನಾಡಿ,
‘ನಾಲೆಗೆ ನೀರು ಹರಿಸಿ ಇಂದಿಗೆ 80 ದಿನ ಕಳೆದರೂ, ಕೊನೆ ಭಾಗಕ್ಕೆ ಹನಿ ನೀರು ತಲುಪಿಲ್ಲ. ನೀರು ನಿರ್ವಹಣೆ ಮಾಡುವ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ’ ಎಂದು ರೈತ ಮುಖಂಡ ಕೊಳೇನಹಳ್ಳಿ ದೂರಿದರು.
‘ಅಕ್ರಮ ಪಂಪ್‌ಸೆಟ್‌ದಾರರ ಮೇಲೆ ಈತನಕ ಕಾನೂನು ಕ್ರಮ ಕೈಗೊಂಡಿಲ್ಲ. ಈ ವಿಚಾರದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಪಂಪ್‌ಸೆಟ್ ತೆರವು ಮಾಡಿಸುವ ಬಗ್ಗೆ ಜಿಲ್ಲಾಧಿಕಾರಿ ಹೇಳಿಕೆ ನೀಡಿದರೆ ಸಾಲದು, ನೀರು ಹಾಗೂ ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.
ರೈತ ಮುಖಂಡ ಶಾಮನೂರು ಲಿಂಗರಾಜ್ ಮಾತನಾಡಿ
‘ತುಂಗಭದ್ರಾ ಅಚ್ಚುಕಟ್ಟಿನ ಬೆಳೆಗಳಿಗೆ 2 ಟಿಎಂಸಿ ನೀರು ಹರಿಸುವಂತೆ ಆದೇಶ ಇದೆ. ಆದರೆ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ತಲುಪಿಸುವ ಕಾಳಜಿ ಸರ್ಕಾರಕ್ಕಿಲ್ಲ’ ಎಂದು ಕಿಡಿಕಾರಿದರು.
ಕೊನೆ ಭಾಗಕ್ಕೆ ನೀರು ಬಿಡಲು ಆಗುವುದಿಲ್ಲ ಎಂದು ಮೊದಲೇ ಹೇಳಿದ್ದರೆ, ನಾವು ಬಿತ್ತನೆ ಮಾಡಿ ಹಣ ಕಳೆದುಕೊಳ್ಳುತ್ತಿರಲಿಲ್ಲ. ಈಗಲೂ ನಿಮಗೆ ನೀರು ಕೊಡಲು ಆಗದಿದ್ದರೆ, ಕೂಡಲೇ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಘೋಷಿಸಲು ಮುಂದಾಗಬೇಕು’ ಎಂದು ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು.ಈ ವೇಳೆ ಮುಖಂಡರಾದ ಕೊಂಡಜ್ಜಿ ನಾಗರಾಜ್ ಶಾನುಭೋಗ, ಧನಂಜಯ ಕಡ್ಲೆಬಾಳ್, ರಾಜಶೇಖರ ನಾಗಪ್ಪ, ಕುರುಡಿ ಯು.ಜಿ.ಶಿವಕುಮಾರ್, ಅನಿಲ್ ಕುಮಾರ ನಾಯ್ಕ, ತಾರೇಶ ನಾಯ್ಕ, ಐರಣಿ ಅಣ್ಣೇಶ್, ಕೊಟ್ರೇಶಗೌಡ, ಎಚ್.ಪಿ.ವಿಶ್ವಾಸ್, ಕೊಂಡಜ್ಜಿ ಭಾಗದ ರೈತರು ಇದ್ದರು.
‘