ದಾವಣಗೆರೆ: ‘ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮಹಿಳಾ ನ್ಯಾಯಾಧೀಶರ ಸಮ್ಮುಖದಲ್ಲಿ ಎಸ್ಐಟಿ ತನಿಖೆ ನಡೆಸಬೇಕು’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಆಗ್ರಹಿಸಿದರು.
‘ಬಿಜೆಪಿ ಸೈದ್ಧಾಂತಿಕ ಪದ್ಧತಿಯ, ತಪ್ಪು ಯಾರೇ ಮಾಡಿದ್ದರೂ ಅದು ತಪ್ಪೇ. ಅದನ್ನು ಸಮರ್ಥನೆ ಇಲ್ಲ. ಅಪರಾಧಿ ಎಂಬುದನ್ನು ಸಾಬೀತುಪಡಿಸುವುದು. ನ್ಯಾಯಾಂಗ ವ್ಯವಸ್ಥೆ. ನಾವು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ ಹೊರತು ಪ್ರಜ್ವಲ್ ಅವರೊಂದಿಗಲ್ಲ. ಈಗಾಗಲೇ ಜೆಡಿಎಸ್ನಿಂದ ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾವು ನ್ಯಾಯದ ಪರ ಎಂದಿದ್ದಾರೆ. ಅಲ್ಲದೇ ಈ ಘಟನೆಗಳು ನಡೆದಿದ್ದು, 4–6 ವರ್ಷಗಳ ಹಿಂದೆ. ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಈ ಬಗ್ಗೆ ಮಾಹಿತಿ ತಿಳಿದಿತ್ತು. ಈಗ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
ವೋಟ್ ಜಿಹಾದ್:
‘ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮರಿಯಾ ಆಲಂ ಎಂಬುವರು ವೋಟ್ ಜಿಹಾದ್ ಘೋಷಣೆ ಮಾಡಿದ್ದಾರೆ. ಲವ್ ಜಿಹಾದ್ ಹಾಗೂ ಲ್ಯಾಂಡ್ ಜಿಹಾದ್ ಬಳಿಕ ಈಗ ವೋಟ್ ಜಿಹಾದ್ ಶುರುವಾಗಿದೆ. ಜಿಹಾದಿ ಮಾನಸಿಕತೆ ಭಾರತವನ್ನು ಸೋಲಿಸುತ್ತದೆ. ನರೇಂದ್ರ ಮೋದಿ ನೇತೃತ್ವ ಭಾರತವನ್ನು ಗೆಲ್ಲಿಸುತ್ತದೆ. ಸಕಾರಾತ್ಮಕ ವಿಚಾರಗಳು ಹಾಗೂ ಮೋದಿ ಅವರ 10 ವರ್ಷದ ಸಾಧನೆಗಳನ್ನು ಇಟ್ಟುಕೊಂಡು ಮತಯಾಚಿಸುತ್ತೇವೆ’ ಎಂದು ಹೇಳಿದರು.