
ದಾವಣಗೆರೆ ; ದಾವಣಗೆರೆಯ ಜಿಲ್ಲೆ ಸಮಾಚಾರ ದಿನಪತ್ರಿಕೆ ಬಳಗವು ಸಾದರಪಡಿಸುವ 2024 ರ “ವರ್ಷದ ವ್ಯಕ್ತಿ” ಪ್ರಶಸ್ತಿ ಪ್ರದಾನ ಸಮಾರಂಭವು ಫೆ.13ರಂದು ಕುವೆಂಪು ಕನ್ನಡ ಭವನದಲ್ಲಿ ಸಂಜೆ 5.30 ಕ್ಕೆ ನಡೆಯಲಿದೆ. ಇದೇ ಸಂದರ್ಭದಲ್ಲಿ 2024 ರ “ವರ್ಷದ ವ್ಯಕ್ತಿ” ಪ್ರಶಸ್ತಿಗೆ ದಾವಣಗೆರೆಯ ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ.ಸುರೇಶ್ ಅವರು ಭಾಜನರಾಗಲಿದ್ದಾರೆ ಎಂದು ಬಳಗದ ಕಾರ್ಯಾಧ್ಯಕ್ಷ ಮಹಾಂತೇಶ್ ಒಣರೊಟ್ಟಿ ಹೇಳಿದ್ದಾರೆ.
ಕಳೆದ 18 ವರ್ಷಗಳಿಂದ ನಿರಂತರವಾಗಿ ಸಾಧಕರನ್ನು ಆಯ್ಕೆಮಾಡಿ ಗೌರವಿಸುವ ವಿಶಿಷ್ಟ ಪರಂಪರೆಯನ್ನು ಜಿಲ್ಲೆ ಸಮಾಚಾರ ದಿನಪತ್ರಿಕೆ ಬಳಗವು ಹಮ್ಮಿಕೊಂಡು ಬರುತ್ತಿದೆ. ಬುಧವಾರ ಸಂಜೆ 5.30 ಕ್ಕೆ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ವಹಿಸುವರು ಹಾಗೂ ಉದ್ಘಾಟನೆಯನ್ನು ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ನೆರವೇರಿಸುವರು.
ಪ್ರಶಸ್ತಿಯನ್ನು ನಾಡಿನ ಖ್ಯಾತ ವಾಗ್ಮಿಗಳು ಹಾಗೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡರು ಪ್ರದಾನಿಸುವರು. ಸಮಾರಂಭಕ್ಕೆ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, ಜಗಳೂರಿನ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಸರ್ ಎಂ ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಜೆ.ಶ್ರೀಧರ್ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿಜಯಕುಮಾರ್ ಭಾಗವಹಿಸುವರು.


ಬಳಗದ ಕಾರ್ಯಾಧ್ಯಕ್ಷ ಮಹಾಂತೇಶ ವಿ ಒಣರೊಟ್ಟಿ, ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕ ವಿ.ಹನುಮಂತಪ್ಪ, ಪತ್ರಿಕೆಯ ಸಂಪಾದಕ ಹೆಚ್.ವೆಂಕಟೇಶ್ ಉಪಸ್ಥಿತರಿರುವರು. ಹಾಗೆಯೇ ಜಾನಪದ ಕಲಾವಿದೆ ರುದ್ರಾಕ್ಷಿ ಬಾಯಿ ಸಿ.ಕೆ. ಅವರಿಂದ ಗೀತಗಾಯನ ಮತ್ತು ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವಚನ ನೃತ್ಯ ರೂಪಕ ಪ್ರದರ್ಶನ ಇರುತ್ತದೆ ಎಂದು ದಿನಪತ್ರಿಕೆ ಬಳಗದ ಉಪಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲೆ ಸಮಾಚಾರ ದಿನಪತ್ರಿಕೆ ಬಳಗವು ಮನವಿ ಮಾಡಿದೆ.