
ದಾವಣಗೆರೆ :ಕಾಲ ಬದಲಾದಂತೆ ವಾಹನಗಳ ಮೇಲೆ ಆಸಕ್ತಿಯೂ ಬದಲಾಗುತ್ತಿದ್ದು, ಈಗ ಎಲೆಕ್ಟ್ರಿಕ್ ವಾಹನಗಳತ್ತ ಸವಾರರ ಚಿತ್ತ ನೆಟ್ಟಿದೆ. ಅದರಲ್ಲೂ ದೇವನಗರಿ ಮಂದಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಕಾರು ಹಾಗೂ ಬೈಕ್ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ.
ಪರಿಸರ ಸ್ನೇಹಿ ಹಾಗೂ ಇಂಧನ ವೆಚ್ಚವಿಲ್ಲದ ಎಲೆಕ್ಟ್ರಿಕ್ ಕಾರು ಹಾಗೂ ಬೈಕ್ಗಳ ಖರೀದಿ ಜೋರಾಗಿದೆ. ಟಾಟಾ ಮೋಟರ್ಸ್, ಜೆಎಂ ಮೋಟಾರ್ಸ್, ಮಹೀಂದ್ರಾ ಸೇರಿದಂತೆ ಪೆಟ್ರೋಲ್, ಡಿಸೇಲ್ ಕಾರು ತಯಾರಿಸುವ ಕಂಪನಿಗಳು(ಇವಿ) ವಿದ್ಯುತ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಆರ್ಟಿಒ ಅಧಿಕಾರಿ ಪ್ರಮುತೇಶ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸವಾರರು ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಈಗಾಗಲೇ ಕೇವಲ 11 ತಿಂಗಳಿಗೆ ಒಂದು ಸಾವಿರಕ್ಕೂ ದ್ವೀಚಕ್ರ ವಾಹನಗಳು ಸೇರಿದಂತೆ ಇತರೆ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗಿವೆ ಎಂದರು.


ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ವಿನಾಯಿತಿ ನೀಡಿದೆ. ಇ ವಾಹನಗಳ ಖರೀದಿಗೆ ಟ್ಯಾಕ್ಸ್ ಇಲ್ಲ. ಆಟೋ ರಿಕ್ಷಾ ವಾಹನಗಳಿಗೆ ಪರ್ಮಿಟ್ ಇಲ್ಲ. ಅದರ ಜೊತೆ ಪರಿಸರ ಸ್ನೇಹಿ ವಾಹನಗಳಾಗಿವೆ. ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ. ಇವುಗಳ ನೋಂದಣಿ ಇನ್ನೂ ವರ್ಷದಿಂದ ವರ್ಷಕ್ಕೆ ಹೆಚ್ಚುವ ಸಂಭವ ಹೆಚ್ಚಿದೆ ಎಂದರು.
ಪೆಟ್ರೋಲ್ ಚಾಲಿತ ಬೈಕ್ ಮಾರಾಟದ ಜನಪ್ರಿಯ ಕಂಪನಿಗಳಾದ ಹೀರೋ, ಹೋಂಡಾ, ಟಿವಿಎಸ್, ಬಜಾಜ್ , ಕೈನೆಟಿಕ್ ಸೇರಿದಂತೆ ಬಹಳಷ್ಟು ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ಬೈಕ್ಗಳನ್ನು ಮಾರುಕಟ್ಟೆಗೆ ತಂದಿವೆ.. ಇದರ ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ಇತರ ವಾಹನಗಳ ನೋಂದಣಿಯಲ್ಲೂ ಏರಿಕೆಯಾಗಿದೆ. ಪ್ರತಿ ತಿಂಗಳು ಸರಿಸಮಾರು 1100 -1200 ಬೈಕ್, ಕಾರು, ಆಟೋ ಸೇರಿದಂತೆ ಇತರೆ ವಾಹನಗಳು ನೋಂದಣಿಯಾಗುತ್ತವೆ. ಕಾರುಗಳು 120-130 ನೋಂದಣಿಯಾದ್ರೆ, 1000ಕ್ಕೂ ಹೆಚ್ಚು ಬೈಕ್ಗಳು ಸೇರಿದಂತೆ ಇತರ ವಾಹನಗಳ ರಿಜಿಸ್ಟ್ರೇಷನ್ ಆಗುತ್ತಿವೆ’ ಎಂದು ಮಾಹಿತಿ ನೀಡಿದರು.
ಸರ್ಕಾರಿ ಆದಾಯಕ್ಕೆ ಖೋತಾ
ಪ್ರತಿ ತಿಂಗಳು 200-300 ವಾಹನಗಳು ರಿಜಿಸ್ಟ್ರೇಷನ್ ಆಗುತ್ತಿವೆ. ಆದರೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಪ್ರತಿ ವಾಹನಕ್ಕೆ 8,000-10,000 ತೆರಿಗೆ ಸಂದಾಯವಾಗುತ್ತಿತ್ತು. ಆದರೆ ಈಗ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯಿತಿ ಇರುವುದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಆದರೆ ಪರಿಸರ ಮಾಲಿನ್ಯ ದೃಷ್ಟಿಯಿಂದ ಈ ನಿರ್ಧಾರ ಸ್ವಾಗತಾರ್ಹವಾಗಿದೆ.