


ನಂದೀಶ್ ಭದ್ರಾವತಿ, ದಾವಣಗೆರೆ
ದಾವಣಗೆರೆಯಲ್ಲಿ ಲಿಂಗಾಯಿತ ಮತಗಳನ್ನು ಬಿಟ್ಟರೆ ಅಹಿಂದ ಮತಗಳೇ ನಿರ್ಣಾಯಕವಾಗಿದ್ದು, ಬಿಜೆಪಿ ಅಹಿಂದ ನಾಯಕರೊಬ್ಬರನ್ನು ಹಿಂದುಳಿದ ವರ್ಗಗಗಳ ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಿದೆ.

ಹೌದು..ಒಂದಾನೊಂದು ಕಾಲದಲ್ಲಿ ಅಕ್ರಮ ಮನೆಗಳನ್ನು ಕಟ್ಟಿಸಿಕೊಂಡವರಿಗೆ ದೂಡಾ ಅಧ್ಯಕ್ಷರಾಗಿ ಚಳಿ ಬಿಡಿಸಿದ್ದ ರಾಜನಹಳ್ಳಿ ಶಿವಕುಮಾರ್ ಈಗ ಅಹಿಂದ ನಾಯಕನಾಗಿ ಹೊರ ಹೊಮ್ಮಿದ್ದಾರೆ.

ರಾಜನಹಳ್ಳಿ ಶಿವಕುಮಾರ್ ದಾವಣಗೆರೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಗರಡಿಯಲ್ಲಿ ಬೆಳೆದಿದ್ದು, ಕುರುಬ ಸಮಾಜದ ಪ್ರಬಲ ನಾಯಕ. ಅಲ್ಲದೇ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ನಾಯಕ
ಲೋಕಸಭೆ ಗೆಲ್ಲಲು ತಂತ್ರ
ರಾಜನಹಳ್ಳಿ ಶಿವಕುಮಾರ್ ಗರಡಿ ಮನೆಯಲ್ಲಿ ಪೈಲ್ವಾನ್ ಆಗಿ ಬೆಳೆದರೂ, ರಾಜಕೀಯ ಗರಡಿಯಲ್ಲಿ ಅಪಾರ ಅನುಭವವಿದೆ. ಅಲ್ಲದೇ ರಾಜಕೀಯ ಚಾಣಕ್ಯವೂ ಆಗಿರುವುದರಿಂದ ದಾವಣಗೆರೆ ಲೋಕಸಭೆ ಗೆಲ್ಲಲೂ ರಣ ತಂತ್ರ ಹೂಡುತ್ತಿದ್ದಾರೆ.
ಕುರುಬ ಸಮಾಜದ ಪ್ರಭಾವಿ ನಾಯಕ
ದಾವಣಗೆರೆಯಲ್ಲಿ ಕುರುಬ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಲೋಕಸಭೆ ಚುನಾವಣೆಗೆ ಇವರ ಮತಗಳು ಕೂಡ ನಿರ್ಣಾಯಕವಾಗಿದೆ. ಆದ್ದರಿಂದ ರಾಜನಹಳ್ಳಿ ಶಿವಕುಮಾರ್ ಗೆ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ.
ಹಿಂದೂ ಪರ ಹೋರಾಟಗಾರ
ಹಿಂದೂ ಪರ ಹೋರಾಟಗಾರನಾಗಿರುವ ರಾಜನಹಳ್ಳಿ ಶಿವಕುಮಾರ, ಹಿಂದು ಧರ್ಮಕ್ಕೆ ಸಂಕಟ ಬಂದಾಗ ಸದಾ ಮುಂಚೂಣಿಯಲ್ಲಿ ಇರುತ್ತಾರೆ. ಅಲ್ಲದೇ ಜಯ ಸಿಗೋತನಕ ಹೋರಾಟ ಮಾಡುವುದು ಇವರ ಗುಣ
ರಾಜನಹಳ್ಳಿ ಮಾಡಿದ ಕೆಲಸವೇನು?ದೂಡಾ ಅಧ್ಯಕ್ಷರಾಗಿ ಕೆಲಸ ಮಾಡಿರುವ ರಾಜನಹಳ್ಳಿ ಶಿವಕುಮಾರ್ ಅಧಿಕಾರವಸ್ವೀಕರಿಸಿದ ದಿನದಿಂದ ಸರಕಾರಿ ಭೂಮಿ ಒತ್ತುವರಿ ಮಾಡಿರುವವರ ವಿರುದ್ಧ ಹಾಗೂ ಅನಧಿಕೃತವಾಗಿ ಕಂದಾಯ ಬಡಾವಣೆ ಅಭಿವೃದ್ದೀ ಪಡಿಸಿ ಬಡ ಮತ್ತು ಮಧ್ಯಮ ವರ್ಗದ ಜನರನ್ನು ವಂಚಿಸುತ್ತಿದ್ದ ಜಾಲದ ವಿರುದ್ಧ ಹೋರಾಟವನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಯುವವರೆಗೂ ಮುಂದುವರೆಸಿ ದೂಡಾದಲ್ಲ ಸದ್ದು ಮಾಡಿ ಭೂ ಮಾಫಿಯಾ ಎದುರಿಸಿದ್ದರು.
ಪಾರ್ಕ್ ಒತ್ತುವರಿ ತೆರವು
ದೂಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಕೆಲವೇ ದಿನಗಳಲ್ಲಿ ಜಿಎಂಐಟಿ ಬಳಿಯ ರಸ್ತೆ ಜಾಗದಲ್ಲಿ ನಿರ್ಮಿಸಿದ್ದ ಶಾದಿಮಹಲ್ ತೆರವುಗೊಳಿಸಿದ್ದರು. ಬಸವೇಶ್ವರ ನಗರದಲ್ಲಿನ ಉದ್ಯಾನವನದಲ್ಲಿ ನಿರ್ಮಾಣ ಹಂತದಲ್ಲಿನ ಕಟ್ಟಡ ತೆರವುಗೊಳಿಸಿದಲ್ಲದೇ 50 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ್ನಾಗಿ ಅಭಿವೃದ್ದಿ ಪಡಿಸಿದ್ದಾರೆ. ಅಲ್ಲದೇ ನಗರದಲ್ಲಿ ಪ್ರಭಾವಿಗಳು ಒತ್ತುವರಿ ಮಾಡಿದ್ದ 15 ರಿಂದ 20 ಪಾರ್ಕ್ ಮತ್ತು ಸರಕಾರಿ ಜಾಗಗಳನ್ನು ತೆರವುಗೊಳಿಸಿ ದೂಡಾದ ಸುಪರ್ದಿಗೆ ನೀಡಿದರು. ಕುಂದುವಾಡ ಕೆರೆಯ ಬಳಿಯ ರಿಂಗ್ ರಸ್ತೆಯ ಜಾಗವನ್ನು ಕಬಳಿಸಿದ್ದನ್ನು ತೆರವುಗೊಳಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ವೃತ್ತದಿಂದ ಕುಂದುವಾಡ ಕೆರೆಯವರೆಗೂ ದ್ವಿಪಥ ರಸ್ತೆ ಅಭಿವೃದ್ಧೀ ಪಡಿಸಿದ್ದರು. ಅಲ್ಲದೇ ಎಸ್ಪಿ ಕಚೇರಿ ಎದುರು ಕಬಳಿಕೆಯಾಗಿದ್ದ ಹತ್ತು ಗುಂಟೆ ಜಾಗವನ್ನು ಮತ್ತೆ ದೂಡಾಕ್ಕೆ ಪಡೆದು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದರು. ಹೀಗೆ ದೂಡಾದಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಸದ್ದು ಮಾಡಿದ್ದ ರಾಜನಹಳ್ಳಿ ಶಿವಕುಮಾರ್ ದೂಡಾಅಧ್ಯಕ್ಷರ ಪವರ್ ನ್ನು ಸಮಾಜಕ್ಕೆ ಪರಿಚಯ ಮಾಡಿದವರಾಗಿದ್ದಾರೆ.
ಪಕ್ಷಕ್ಕೆ ಯುವಕರ ದಂಡು
ಶಾಲಾ ದಿನಗಳಲ್ಲಿ ಆರ್‌ಎಸ್‌ಎಸ್ ಶಾಖೆಗೆ ಹೋಗುತ್ತಿದ್ದ ರಾಜನಹಳ್ಳಿ ಶಿವಕುಮಾರ್ ಮುಂದೆ ಬಿಜೆಪಿ ಸಂಪರ್ಕಕ್ಕೆ ಬಂದು, ಆ ಭಾಗದ ಬಿಜೆಪಿ ನಾಯಕ ಯಶವಂತರಾವ್ ಜಾಧವ್ ಅವರೊಂದಿಗೆ ಪಕ್ಷ ಸಂಘಟನೆಗೂ ಶ್ರಮಿಸಿದ್ದಾರೆ. ಬಿಜೆಪಿ ವರ್ಚಸ್ಸು ಕಡಿಮೆ ಇದ್ದ ಕಾಲದಲ್ಲಿ ಪಕ್ಷದಲ್ಲಿ ಬೆರಳೆಣಿಕೆಯ ಸಂಖ್ಯೆಯ ಕಾರ್ಯಕರ್ತರು ಇದ್ದಾಗ, ತಮ್ಮ ಸಂಪರ್ಕದಲ್ಲಿದ್ದ ಯುವಕರ ದಂಡನ್ನೇ ಪಕ್ಷಕ್ಕೆ ಕರೆದುಕೊಂಡು ಬಂದು ಪಕ್ಷದ ಕಾರ್ಯಕರ್ತರನ್ನಾಗಿ ಬೆಳೆಸುವಲ್ಲಿ ಯಶಸ್ವಿಯಾದರು. ಹೀಗೆ ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆಗೂ ಅಪಾರ ಕೊಡುಗೆ ನೀಡಿದ್ದಾರೆ.
ಶಿವಕುಮಾರ್ ಇತಿಹಾಸ
ರಾಜನಹಳ್ಳಿ ಗ್ರಾಮದಲ್ಲಿ ವೈದ್ಯರ ಪುತ್ರರಾಗಿ ಜನಿಸಿದ ಶಿವಕುಮಾರ್, ಮುಂದೆ ತಮ್ಮ ತಾಯಿಯ ತವರು ದಾವಣಗೆರೆಯ ದುಗ್ಗಮ್ಮನ ಪೇಟೆಯ ಮನೆಯಲ್ಲಿ ಬೆಳೆದರು. 1993-94ರಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದ ಶಿವಕುಮಾರ್, ಆ ಭಾಗದಲ್ಲಿ ನಿತ್ಯವೂ ನಡೆಯುತ್ತಿದ್ದ ಆರ್‌ಎಸ್‌ಎಸ್ ಶಾಖೆಯ ಸಭೆಗೆ ಹೋಗಿ ಪ್ರಖರ ಹಿಂದು ಕಾರ್ಯಕರ್ತರಾಗಿ ಬೆಳೆದರು. ಜತೆಗೆ ಗರಡಿ ಮನೆಗೆ ಹೋಗುವ ಗೀಳು ಬೆಳೆಸಿಕೊಂಡು ತಾಲೀಮು ನಡೆಸಿ ಜಟ್ಟಿಯು ಆದರು. ಮುಂದೆ ಹಿಂದೂ ಜಾಗರಣಾ ವೇದಿಕೆಯಲ್ಲಿ ಜಿಲ್ಲಾ ಹೋರಾಟ ಪ್ರಮುಖರಾಗಿ ಜವಾಬ್ದಾರಿ ನಿಭಾಯಿಸಿ ಧರ್ಮ ರಕ್ಷಣೆಗೆ ಈ ಮುಂದಾದರು. ದಾವಣಗೆರೆಯಲ್ಲಿ ಯಾವುದೇ ಹಿಂದು ಕಾರ್ಯಕರ್ತರಿಗೆ ಅನ್ಯಾಯವಾದಾಗ, ಆಮಿಷ ತೋರಿಸಿ ಹಿಂದುಗಳನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡಿದಾಗೆಲ್ಲ ಮುಂದೆ ನಿಂತು ಹೋರಾಟ ಮಾಡಿ ಅನ್ಯಾಯಕ್ಕೆ ಒಳಗಾದ ಹಿಂದು ಕಾರ್ಯಕರ್ತರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ.