ಚನ್ನಗಿರಿ: ರೈತರು ದೇಶದ ಬೆನ್ನೆಲುಬು ಅದರೆ ರೈತ ಬೆಳೆದಂತಹ ಬೆಳೆಗಳಿಗೆ ಉತ್ತಮ ಧಾರಣೆ ದೊರಕದೇ ಇರುವುದು ಆತನ ಬೆನ್ನೆಲುಬು ಮುರಿಯುವಂತಾಗುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮಿಗಳು ಹೇಳಿದರು.
ಶನಿವಾರ ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಹಿರಿಯ ಶ್ರೀಗಳ ಸ್ಮರಣೋತ್ಸವ ಮತ್ತು ಬಸವತತ್ವ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರೈತ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚನ್ನಗಿರಿ ತಾಲೂಕಿನ ಎಲ್ಲಾ ಭಾಗಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿದ್ದು ತೋಟಗಳಿಗೆ ನೀರು ಪೂರೈಕೆ ಮಾಡಲು ಹರಸಾಹಸ ಮಾಡುತ್ತಿದ್ದಾರೆ. ಕುಡಿಯುವ ನೀರಿಗೂ ಸಹ ಹಾಹಾಕಾರ ಮಾಡುವಂತಹ ಲಕ್ಷಣಗಳು ಕಾಣುತ್ತಿವೆ. ರೈತರು ಈಗಾಗಲೇ ನೀರಿನ ಮಹತ್ವವನ್ನು ಅರಿತಿದ್ದು ಅರೋಗ್ಯ ಪೂರ್ಣ ಕೃಷಿಗೆ ಮುಂದಾಗಬೇಕಿದೆ.
ಗ್ರಾಮಗಳಲ್ಲಿ ನೀರಿನ ಸಮರ್ಪಕ ಬಳಕೆಯಾಗದೇ ಬಳಕೆ ಮಾಡುವಂತಹ ನೀರು ಚರಂಡಿಗಳಲ್ಲಿ ಹರಿದುಹೋಗುತ್ತಿರುವುದು ವಿಪರ್ಯಾಸ. ಆದ್ದರಿಂದ ಪ್ರತಿ ಹನಿ ನೀರನ್ನು ವ್ಯರ್ಥ ಮಾಡಬಾರದು ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ರೈತ ಕುಲ ಎನ್ನುವುದು ಬೇಡಿದ ಕುಲವಲ್ಲ. ಅದು ನೀಡಿದ ಕುಲವಾಗಿದೆ. ದೇಶದ ಜನರಿಗೆ ಆಹಾರ ನೀಡುವ ಮೂಲಕ ಬದುಕು ನೀಡುತ್ತಿರುವನು ರೈತ. ಆದರೆ ಇಂದು ಅಳುವ ಸರಕಾರಗಳು ರೈತನಿಗೆ ಉತ್ತಮ ರಕ್ಷಣೆ ನೀಡದೇ ರೈತರ ಮೇಲೆ ದೌರ್ಜನ್ಯವನ್ನು ಎಸಗುವ ಕೆಲಸ ಮಾಡುತ್ತಿವೆ.
ಹಿಂದಿನ ಕಾಲದಲ್ಲಿ ರೈತನು ತಮ್ಮ ಕೃಷಿ ಚಟುವಟಿಕೆಗಳನ್ನು ಮಾಡಲು ಕೆರೆ ಸಂಸ್ಕೃತಿ ಇತ್ತು. ನಂತರ ಜಲ ಸಂಸ್ಕೃತಿ ಬಂದು ಈಗ ಬೋರ್‌ವೆಲ್ ಸಂಸ್ಕೃತಿ ಬಂದಿದೆ. ರೈತರು ನೀರಿಗಾಗಿ ಪ್ರತಿನಿತ್ಯ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.
ಸರಕಾರಗಳು ಕೈಗಾರೀಕರಣ ಮಾಡುವ ನೆಪದಲ್ಲಿ ಸಾವಿರಾರು ಎಕೆರೆ ರೈತರ ಭೂಮಿಗಳನ್ನು ಕೈಗಾರಕೋದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದು ಅವರು ಹೆಚ್ಚಿನ ಧಾರಣೆಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ಸಹ ರೈತರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ರೈತರನ್ನು ಸದೃಡವಾಗಿ ಮಾಡಬೇಕಾದರೆ ಸ್ವಾಮಿನಾಥನ್ ವರದಿಯನ್ನು ಅನುಷ್ಟಾನ ಮಾಡಬೇಕಿದೆ.
ರೈತರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.ಸಭೆಯ ಸಾನಿಧ್ಯವನ್ನು ಚಿಕ್ಕಮಗಳೂರು ಜಯಬಸವ ತಪೋವನದ ಜಯಬಸವಾನಂದ ಸ್ವಾಮಿಗಳು, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರಸ್ವಾಮಿಗಳು, ಹಿರೇಮಗಳೂರಿನ ಚನ್ನಬಸವ ಸ್ವಾಮಿಗಳು ವಹಿಸಿ ಅಶೀರ್ವಚನ ನೀಡಿದರು. ಹಿರಿಯೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎನ್. ಓಂಕಾರಪ್ಪ, ತುಮ್‌ಕೋಸ್ ಅಧ್ಯಕ್ಷ ಆರ್.ಎಂ.ರವಿ, ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಪ್ರಗತಿಪರ ಕೃಷಿಕಶರಣಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಜಿ.ಎನ್.ಸ್ವಾಮಿ ಹಾಜರಿದ್ದರು.