
ಶಿವಮೊಗ್ಗ,ಅ.19: ಶೃಂಗೇರಿಯಿಂದ ಶ್ರೀಶೈಲದವರೆಗೆ ನಿರ್ಮಲಾ ತುಂಗಾ ಭದ್ರಾ ಅಭಿಯಾನದ ಪಾದಯಾತ್ರೆ ನಡೆಯಲಿದ್ದು, ಇಂದು ನಗರದ ಆರ್.ಎಂ.ಆರ್. ರಸ್ತೆಯಲ್ಲಿರುವ ಹೊಯ್ಸಳ ಪೌಂಡೇಷನ್ ಕಚೇರಿಯಲ್ಲಿ ಪೂರ್ವಬಾವಿ ಸಭೆ ನಡೆಯಿತು. ಸಚಿವ ಮಧುಬಂಗಾರಪ್ಪನವರು ಇಂದು ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಈ ಅಭಿಯಾನದಲ್ಲಿ ಯಾವುದೇ ರಾಜಕಾರಣವಿಲ್ಲ, ನಾವೆಲ್ಲ ತುಂಗೆಯ ನೀರು ಕುಡಿದು ದೊಡ್ಡವರಾಗಿದ್ದೇವೆ. ನಮ್ಮ ಕರ್ತವ್ಯವಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಬರೀ ಸರ್ಕಾರದ ಕರ್ತವ್ಯವಲ್ಲ, ಸಾರ್ವಜನಿಕರು ಕೂಡ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ತುಂಗಾ ಭದ್ರೆಯಷ್ಟೇ ಅಲ್ಲ, ಇಡೀ ರಾಜ್ಯದ ಎಲ್ಲಾ ನದಿಗಳ ಶುದ್ಧೀಕರಣಕ್ಕೆ ಒಂದು ಯೋಜನೆ ರೂಪಿಸಲು ಸಮಿತಿಯನ್ನು ರಚಿಸಲಾಗಿದೆ. ಶಿವಮೊಗ್ಗದ ಅನೇಕ ಪರಿಸರ ಪ್ರೇಮಿಗಳು ಒಗ್ಗಟ್ಟಾಗಿ ಒಂದು ಸಮಿತಿಯನ್ನು ರಚಿಸಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಜಾಗೃತಿ ಮೂಡಿಸಲು ಭದ್ರಾ ಅಭಿಯಾನ ಪಾದಯಾತ್ರೆ ಮುಗಿಸಿದ್ದಾರೆ. ನದಿ ಕಲುಷಿತಗೊಳ್ಳಲು ನಾವೇ ಕಾರಣರು, ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಗಂಡಾಂತರ ಕಾದಿದೆ ಎಂದರು.
ಅದಕ್ಕಾಗಿಯೇ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಮುಂದಿನ ವರ್ಷದಿಂದ ವಾರದಲ್ಲಿ ಒಂದು ದಿನ ಜನರಲ್ ನಾಲೆಡ್ಜ್ ಪಠ್ಯವನ್ನು ಅಳವಡಿಸಲಾಗುವುದು. ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯವಾಗಲಿದೆ. ಪರಿಸರ ಜಾಗೃತಿ,ಸಂಚಾರ ನಿಯಮಗಳ ಪಾಲನೆ, ನದಿ ಮತ್ತು ಪರಿಸರ ಸ್ವಚ್ಛತೆಯ ಬಗ್ಗೆ ಪಾಠಗಳಿದ್ದು, ಅದಕ್ಕೆ ಪರೀಕ್ಷೆ ಇರುವುದಿಲ್ಲ. ಸುಮಾರು 40 ಕೋಟಿ ಜನ ತುಂಗಾಭದ್ರಾ ನೀರನ್ನು ಬಳಸುತ್ತಿದ್ದಾರೆ. ಇದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಶಾಸಕ ಚನ್ನಬಸಪ್ಪ ಮಾತನಾಡಿ, ನಿರ್ಮಲಾ ತುಂಗಾ ಭದ್ರಾ ಅಭಿಯಾನದ ಯಶಸ್ಸಿಗೆ ಈಗಾಗಲೇ ಅನೇಕ ಸಭೆ ನಡೆಸಿ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಪ್ರಮುಖವಾಗಿ ಯುವಕರು , ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಲಿವೆ. ಅಧಿಕಾರಿಗಳನ್ನು ಕೂಡ ಇದರಲ್ಲಿ ಸೇರಿಸಿಕೊಳ್ಳುತ್ತೇವೆ. ಎಲ್ಲರ ಸಹಕಾರ ಅಗತ್ಯ ಎಂದರು.

ಈ ಸಂದರ್ಭದಲ್ಲಿ ಅಭಿಯಾನದ ಪ್ರಮುಖರಾದ ಡಾ.ಶ್ರೀಪತಿ ಮಾತನಾಡಿ, ತುಂಗೆಯ ನೀರು ಸ್ನಾನಕ್ಕೂ ಯೋಗ್ಯವಲ್ಲದ ಪರಿಸ್ಥಿತಿ ಬಂದಿದೆ. ಇದಕ್ಕೆ ಹಲವಾರು ಕಾರಣಗಳು ಇವೆ. ಮತ್ತು ನಾಗರಿಕರೇ ಅದಕ್ಕೆ ಕಾರಣ ರೈತರ ಹೊಲಕ್ಕೆ ಹಾಕುವ ರಾಸಾಯನಿಕಗಳು ಕೂಡ ಹೇರಳ ಪ್ರಮಾಣದಲ್ಲಿ ನದಿಗೆ ಸೇರುತ್ತಿದೆ. ತುಂಗೆಯ ಮೂಲ ಶೃಂಗೇರಿಯಿಂದಲೇ ಶುದ್ಧೀಕರಣದ ಕೆಲಸವಾಗಬೇಕಾಗಿದೆ. ಇದಕ್ಕಾಗಿಯೇ ಹಲವು ಕ್ರಮಗಳ ಬಗ್ಗೆ ಮಾಹಿತಿ ಹಾಗು ಪಾದಯಾತ್ರೆಯ ಬಗ್ಗೆ ವಿವರ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಕಾಡಾ ಅಧ್ಯಕ್ಷ ಡಾ. ಅಂಶುಮನ್ ಗಿರೀಶ್ ಪಟೇಲ್, ಎಂ.ಶಂಕರ್, ಕಲ್ಗೋಡು ರತ್ನಾಕರ್, ಚಂದ್ರಭೂಪಾಲ್, ರಮೇಶ್ ಹೆಗಡೆ, ಎಸ್.ಬಿ.ಅಶೋಕ್ಕುಮಾರ್, ಕಿರಣ್, ಕಾಂತೇಶ್ ಕದರಮಂಡಲಗಿ, ಬಾಲುನಾಯ್ಡು, ಜಿ.ಡಿ.ಮಂಜುನಾಥ್ ಮೊದಲಾದವರು ಇದ್ದರು.