ಬೆಂಗಳೂರು : ಮುಡಾ ಹಗರಣ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಸಮ್ಮತಿ ಸೂಚಿಸಿದೆ.
ಸಿಎಂ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ತನಿಖೆಯ ಅಗತ್ಯವಿದೆ ಎಂದಿರುವ ಹೈಕೋರ್ಟ್, ರಾಜ್ಯಪಾಲರು ಅನುಮತಿ ನೀಡಿರೋದು ಸರಿ ಇದೆ ಎಂದಿದೆ. ಹಾಗಾದ್ರೆ ಸಿಎಂ ವಿರುದ್ಧ ಯಾವ ರೀತಿ ತನಿಖೆ ನಡೆಯಬಹುದು? ಲೋಕಾಯುಕ್ತ ಸಂಸ್ಥೆಗೆ ಅವಕಾಶ ನೀಡಬಹುದೇ? ಅಥವಾ ಕೇಂದ್ರೀಯ ತನಿಖಾ ಸಂಸ್ಥೆಯಾದ ಸಿಬಿಐಗೆ ವಹಿಸಬಹುದೇ? ಈ ಕುರಿತು ಪುಟ್ಟ ಸ್ಟೋರಿ ನೋಡಿ
ಮುಡಾ ಅಕ್ರಮ ಕುರಿತಾಗಿ ಐಎಎಸ್ ಅಧಿಕಾರಿ ವೆಂಕಟಾಚಲಪತಿ ನೇತೃತ್ವದಲ್ಲಿ ಸಮತಿ ರಚಿಸಲಾಗಿತ್ತು. ಬಳಿಕ ಏಕಸದಸ್ಯ ಆಯೋಗವನ್ನೂ ರಾಜ್ಯ ಸರ್ಕಾರ ನೇಮಿಸಿತ್ತು. ಆದರೆ, ಯಾವ ವ್ಯಕ್ತಿ ವಿರುದ್ಧ ಆರೋಪ ಬಂದಿದೆಯೋ, ಅದೇ ವ್ಯಕ್ತಿ ತನಿಖೆಯ ಸ್ವರೂಪ ನಿರ್ಧರಿಸೋದು ಕಾನೂನು ಸಮ್ಮತವಲ್ಲ ಎಂದು ಈ ಹಿಂದೆ ರಾಜ್ಯಪಾಲರು ಹೇಳಿದ್ದರು. ಈ ಸಂಬಂಧ ರಾಜ್ಯ ಸಚಿವ ಸಂಪುಟ ಕೈಗೊಂಡಿದ್ದ ನಿರ್ಧಾರ ಕಾನೂನು ಬಾಹಿರ ಎಂದು ರಾಜ್ಯಪಾಲರು ಹೇಳಿದ್ದರು.
ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಹಾಂ ಜುಲೈ 18 ರಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಸಿಎಂ ಸಿದ್ದರಾಮಯ್ಯ ಪತ್ನಿ ಬಿ. ಎಂ. ಪಾರ್ವತಿ ಅವರಿಗೆ 2022ರ ಜನವರಿ 5ರಂದು ಅಕ್ರಮವಾಗಿ 14 ಸೈಟ್ಗಳನ್ನು ನೀಡಲಾಗಿದೆ ಎಂದು ತಮ್ಮ ದೂರಿನಲ್ಲಿ ವಿವರಿಸಿದ್ದರು.
ಮೈಸೂರಿನ ವಿಜಯನಗರದಲ್ಲಿ ಈ ನಿವೇಶನಗಳನ್ನು ಪರಿಹಾರದ ರೂಪದಲ್ಲಿ ಹಂಚಿಕೆ ಮಾಡಲಾಗಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸಿದ್ದರಾಮಯ್ಯ ಪುತ್ರ, ವರುಣಾ ಶಾಸಕ ಎಸ್. ಯತೀಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಿ. ಬಿ. ನಟೇಶ್ ಹಾಗೂ ಮುಡಾ ಮುಖ್ಯಸ್ಥ ಎಚ್. ವಿ. ರಾಜೀವ್ ಹೆಸರು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ದೂರಿನ ಆಧಾರದ ಮೇಲೇ ಮುಡಾ ಹಗರಣ ಇಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಹಿಡಿತದಲ್ಲಿ ಇಲ್ಲದ ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತ ಸಂಸ್ಥೆಗೆ ಮುಡಾ ಹಗರಣದ ತನಿಖೆ ವಹಿಸುವ ಸಾಧ್ಯತೆ ದಟ್ಟವಾಗಿದೆ.
ಮುಡಾ ಹಗರಣ ಸದ್ದು ಮಾಡಿದ ದಿನದಿಂದಲೂ ಬಿಜೆಪಿ ನಾಯಕರು ಈ ಪ್ರಕರಣದ ಕುರಿತಾಗಿ ಸಿಎಂ ವಿರುದ್ಧ ಸಿಬಿಐ ತನಿಖೆ ನಡೆಯಬೇಕು ಎಂದೇ ಆಗ್ರಹಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆದಿಯಾಗಿ ಎಲ್ಲರೂ ಇದೇ ಆಗ್ರಹ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರದ ಅಧೀನದ ಪೊಲೀಸರು ತನಿಖೆ ನಡೆಸೋದು ಸಮ್ಮತವೇ ಅನ್ನೋ ಪ್ರಶ್ನೆಗಳೂ ಇವೆ. ಆದರೆ, ಈ ಹಂತದಲ್ಲಿ ರಾಜ್ಯಪಾಲರ ನಿಲುವು ಏನಾಗಬಹುದು ಅನ್ನೋದು ಕುತೂಹಲ ಕೆರಳಿಸಿದೆ.ಬಿಜೆಪಿ ನಾಯಕರು ಸಿಎಂ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗುತ್ತಿದೆ. ಇತ್ತ ಕಾಂಗ್ರೆಸ್ ಪಕ್ಷ ಕಾನೂನು ಹೋರಾಟ ಮುಂದುವರೆಸಲು ಸಜ್ಜಾಗಿದೆ.
ಹೈಕೋರ್ಟ್ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾಗಿದ್ದಾರೆ. ಇಡೀ ಸಂಪುಟವೇ ಸಿಎಂ ಬೆನ್ನಿಗೆ ನಿಂತಿದೆ. ಇಡೀ ಪ್ರಕರಣ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ವಾದಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರ ಮತ್ತಷ್ಟು ತಿರುವುಗಳನ್ನ ಕಾಣೋದು ದಟ್ಟವಾಗಿದೆ.ಒಟ್ಟಿನಲ್ಲಿ ಕ್ಲೀನ್ ಇಮೇಜ್ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ ಹೆಗಲಿದೆ ಮುಡಾ ಕಲೆ ಮೆತ್ತಿಕೊಳ್ಳುವ ಸಾಧ್ಯತೆಯಿದೆ.