ಶಿವಮೊಗ್ಗ: ‘ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್)ಯನ್ನು ಈಗಾಗಲೇ ಕೇಂದ್ರ ಸರ್ಕಾರ ಮುಚ್ಚಲು ತೀರ್ಮಾನಿಸಿದೆ. ಆದರೆ, ಸಂಸದ ಬಿ.ವೈ. ರಾಘವೇಂದ್ರ ಅವರು ಪುನರಾರಂಭ ಮಾಡಲಾಗುವುದು ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಭದ್ರಾವತಿ ಜನರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ವಿಐಎಸ್‌ಎಲ್ ಅನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸುತ್ತಿದೆ’ ಎಂದು ಆರೋಪಿಸಿದರು.
ಈಚೆಗೆ ಸಂಸತ್ ಕಲಾಪದಲ್ಲಿ ಬಿ.ವೈ. ರಾಘವೇಂದ್ರ ಅವರು ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಪುನಶ್ಷೇತನದ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಕೇಂದ್ರದ ಉಕ್ಕು ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ್ ವರ್ಮಾ ಉತ್ತರ ನೀಡಿದ್ದಾರೆ. ವಿಐಎಸ್‌ಎಲ್‌ನ್ನು ಕೇಂದ್ರದ ಬಂಡವಾಳ ಹಿಂತೆಗೆತ ಉದ್ಯಮದ ಪಟ್ಟಿಗೆ ಸೇರಿಸಿದ್ದು, ಈಗಾಗಲೇ ಭಾರತೀಯ ಉಕ್ಕು ಪ್ರಾಧಿಕಾರ ಅದನ್ನು ಮುಚ್ಚುವ ನಿರ್ಧಾರ ಪ್ರಕಟಿಸಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಅದನ್ನು ಮುಚ್ಚಿಟ್ಟು ಕಾರ್ಖಾನೆಯನ್ನು ಕೇಂದ್ರದಿಂದಲೇ ಪುನರ್ ಆರಂಭಿಸಲಾಗುತ್ತಿದೆ ಎಂದು ಸಂಸದರು ಹೇಳುತ್ತಿದ್ದಾರೆ. ಇದೇ ಸುಳ್ಳು ಹೇಳಿ ಲೋಕಸಭಾ ಚುನಾವಣೆಯ ವೇಳೆಯೂ ಲಾಭ ಪಡೆದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯು ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ಇದನ್ನು 2022ರಲ್ಲಿ ಪ್ರಾಧಿಕಾರ ತಿಳಿಸಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ಹೇಳಿದ್ದಾರೆ’ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.
‘ಪ್ರಸ್ತುತ 245 ಕಾಯಂ ಉದ್ಯೋಗಿಗಳು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ವಿಐಎಸ್‌ಎಲ್ ಮುಚ್ಚಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಕಾರಣ ಆಗಿದ್ದಾರೆ. ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪ್ರಚಾರಕ್ಕಾಗಿ ಕಾರ್ಖಾನೆಯ ಭೇಟಿಗಾಗಿ ಕರೆತಂದಿರುವಂತೆ ಕಾಣಿಸುತ್ತದೆ ’ ಎಂದು ಆರೋಪಿಸಿದರು.
‘ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಆರಂಭದಲ್ಲಿ ರೂ. 200 ಕೋಟಿ ಹಣ ಮೀಸಲಿಡಲಾಗಿತ್ತು. ಅದು ರೂ.500 ಕೋಟಿಗೆ ಏಕೆ ಏರಿಕೆಯಾಗಿದೆ. ವಿಮಾನ ನಿಲ್ದಾಣ ಉದ್ಘಾಟನೆಗೆ ರೂ.21 ಕೋಟಿ ಹಣ ಖರ್ಚು ಮಾಡಿದ್ದಾರೆ. ಸಂಸದರು ಇದರಲ್ಲಿ ಕಮಿಷನ್ ಎಷ್ಟು ಹೊಡೆದಿದ್ದಾರೆ? ಜಮೀನು ಕೊಟ್ಟವರಿಗೆ ಪರಿಹಾರ ಕೊಟ್ಟಿಲ್ಲ. ನೈಟ್ ಲ್ಯಾಂಡಿಂಗ್ ಕಾರ್ಯ ನಡೆಯತ್ತಿದೆ. ಆದರೆ, ಸಂಸದರು ಜನರಿಗೆ ಬರೀ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮುಖಂಡರಾದ ನಾಗರಾಜಗೌಡ, ಕಲಗೋಡು ರತ್ನಾಕರ್, ರಮೇಶ್, ಜಿ.ಡಿ.ಮಂಜುನಾಥ ಇದ್ದರು.‘
ಯಾರಿಗೆ ಅರ್ಜಿ ಕೊಡಬೇಕು ಎಂಬುದು ಗೊತ್ತಿಲ್ಲ’
‘ಬಿ.ವೈ. ರಾಘವೇಂದ್ರ ಪೆದ್ದ ಸಂಸದ ಆಗಿದ್ದಾರೆ. ಅವರಿಗೆ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರದಲ್ಲಿ ಯಾರಿಗೆ ಅರ್ಜಿ ಕೊಡಬೇಕು ಎಂಬುದು ಗೊತ್ತಿಲ್ಲ’ ಎಂದು ಸಚಿವ ಮಧು ಬಂಗಾರಪ್ಪ ಲೇವಡಿ ಮಾಡಿದರು.