
ಚಿತ್ರದುರ್ಗ : ಆ ಊರಿನ ಕೆರೆಗೂ ಎರಡು ಗ್ರಾಮದ ಜನರಿಗೂ ಕರುಳುಬಳ್ಳಿಯ ಸಂಬಂಧವಿತ್ತು. 45 ವರ್ಷದ ಬಳಿಕ ತುಂಬಿದ ಕೆರೆ ನೋಡಿದ ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ..ಈ ನಡುವೆ ಇಡೀ ಊರು ಕೆರೆಗೆ ಗಂಗಮ್ಮ ಪೂಜೆ ಮಾಡಿ ಪ್ರತಿ ವರ್ಷ ಹೀಗೆ ತುಂಬು ತಾಯಿ ಎಂದು ಬೇಡಿಕೊಂಡರು.
ಹೌದು..ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮಸ್ಥರು ತಮ್ಮ ವ್ಯಾಪ್ತಿಯ ರಾಮಸಾಗರ ಕೆರೆಗೆ ಪೂಜೆ ಮಾಡಿ ತಮ್ಮ ಭಕ್ತಿ ಭಾವ ಮೆರೆದರು.
ಪೂರ್ವ ದಿಕ್ಕಿಗಿದ್ದ ಕೆರೆಯ ದಡದ ಮೇಲೆ ಇಡೀ ಊರು ಅಂಬಿನಂತೆ ಹಬ್ಬಿತ್ತು. ತನ್ನ ಕಣ್ಣ ಮುಂದಿನ ಎಲ್ಲ ಗದ್ದೆ-ತೋಟ ತುಡಿಕೆಗಳಿಗೆ `ಮಳೆ ಮೋಡಗಳ ನ್ಯಾಯದಂತೆ ಹರಿದು, ಬರಡು ನೆಲದ ಎದೆಯಿಂದಲೂ ಹಸುರು ಉಕ್ಕುವಂತೆ ಮಾಡಿ ದಾರಿದ್ರ್ಯವನ್ನು ತೊಡೆಯುವ ಅಮೃತದಾಯಿನಿಯಂತೆ ಕೆರೆ ಹಲವು ವರ್ಷಗಳ ಬಳಿಕ ತುಂಬಿತ್ತು.
ದೂರದೂರಿನಿಂದ ಬಂದವರು ನಗುಮುಖದಿಂದ ಕೆರೆಯತ್ತ ದೌಡಾಯಿಸಿದ್ದರು. ಬೆಳ್ನೊರೆಯ ಮುಕುಟವನ್ನು ಹೂವಿನ ಕರಗದಂತೆ ನವುರಾಗಿ ಹೊತ್ತು ಬರುತ್ತಿದ್ದ ಕೆರೆಯ ಅಲೆಗಳು, ಏರಿ ದಂಡೆಯನ್ನು ನವುರಾಗಿ ಮುಟ್ಟಿದ ತಕ್ಷಣ ಅಂತರಾಳದ ಭಾವ ಪುಳಕದೆನಿಸುತ್ತಿತ್ತು.

ಇಂತಹ ಜೀವನ್ಮುಖಿ ಕೆರೆ ನೀರಿನ ಮಾಯಾ ಸ್ಪರ್ಶದಿಂದಲೋ ಏನೋ, ಬಡತನ, ಅಸ್ಪೃಶ್ಯತೆ ಹಾಗೂ ಸಣ್ಣಪುಟ್ಟ ಏರುಪೇರುಗಳಿದ್ದರೂ ನಮ್ಮೂರಿನಲ್ಲಿದ್ದ ನಾನಾ ಕೋಮಿನ ಮನೆಗಳೆಲ್ಲ, ಒಂದೇ ಮರದಲ್ಲಿ ಗೂಡುಕಟ್ಟಿಕೊಂಡ ನಾನಾ ಜಾತಿಯ ಪಕ್ಷಿಗಳಂತೆ ಕೆರೆಯತ್ತ ದಾಂಗುಡಿ ಇಟ್ಟಿದ್ದವು.
ಜನಪದರ ಸಾಮಾಜಿಕ ತಾಂತ್ರಿಕ ಕೌಶಲದ ಅತ್ಯುನ್ನತ ಅಭಿವ್ಯಕ್ತಿಗಳಲ್ಲಿ ಒಂದಾದ ಈ ಕೆರೆ ಅಕ್ಷರಶಃ ಪ್ರವಾಸಿ ತಾಣವಾಗುತ್ತಿದೆ. ಊರಿಗೆ ಅನುಗುಣವಾದ ಕೆರೆಯ ವಿಸ್ತಾರ, ಅದರ ಸಾಮರ್ಥ್ಯಕ್ಕೆ ತಕ್ಕಂತಹ ಅಚ್ಚುಕಟ್ಟು ಪ್ರದೇಶ, ಏರಿ ಮತ್ತು ಅಚ್ಚುಕಟ್ಟು ಪ್ರದೇಶಕ್ಕೆ ಅಪಾಯವಾಗದಂತಹ ಎತ್ತರದಲ್ಲಿ ನಿರ್ಮಿಸಿರುವ ಕೋಡಿ. ಕೆರೆಯಲ್ಲಿರುವ ನೀರಿನ ಪ್ರಮಾಣವನ್ನು ಹೇಳಲು ನೆಟ್ಟಿರುವ ಮಟ್ಟದ ಕಲ್ಲು, ಕೆರೆ ಪಾಸಾಲೆಗೆ ಹರಿದು ಬರುವ ನೀರಿಗಾಗಿ ಇದ್ದ ರಾಯಗಾಲುವೆಗಳು, ಕೋಡಿ ಬಿದ್ದ ನಂತರ ಮುಂದಿನ ಕೆರೆಗೆ ನೀರು ಹರಿದು ಹೋಗುವ ಜಾಡು, ಕೋಡಿ ಹಳ್ಳದ ಎರಡೂ ಬದಿಯಲ್ಲಿ ದಟ್ಟವಾಗಿ ಹಬ್ಬಿದ್ದ ಸೀಗೆಮೆಳೆ, ಹೊಂಗೆಸಾಲು, ಬಿದಿರುಮೆಳೆ, ಕತ್ತಾಳೆ, ನಿತ್ಯ ಹಸುರಾಗಿರುತ್ತಿದ್ದ ಬೇಲಿ ಸಾಲು, ಅದರ ಕೆಳಗೆ ಸದಾ ತನುವಿನಿಂದ ಕೂಡಿ ಗಾಜಿನಂತೆ ಫಳ ಫಳ ಹೊಳೆಯುತ್ತಿದ್ದ ತೊರೆ ಮಳ್ಳು.
ಇಂತಹ ನಿತ್ಯ ಚೈತನ್ಯದ ನಿಸರ್ಗ ಹಲವು ದಿನಗಳ ಬಳಿಕ ಕಂಡು ಬಂತು.
ಮಳೆಗಾಲಕ್ಕಿಂತ ಬೇಸಗೆಯಲ್ಲಿಯೇ ಕೆರೆಯೊಂದಿಗಿನ ಇಲ್ಲಿನ ಜನರ ನಂಟು ಗಾಢವಾಗಿರುತ್ತಿತ್ತು. ಕೆರೆಯ ಪಾಸಾಲೆಯಲ್ಲಿ ಇದ್ದ ಸಣ್ಣಪುಟ್ಟ ಹಳ್ಳಗಳಲ್ಲಿ ನಿಂತಿರುತ್ತಿದ್ದ ಕಡುಗೆಂಪು ಬಣ್ಣದ ನೀರು ಈಜು ಬಾರದ ಹುಡುಗರ ಪಾಲಿಗೆ ಈಜುಕೊಳವಾಗಿತ್ತು. ಅಷ್ಟೆರ ಅಲ್ಲ, ಎಮ್ಮೆ ಮತ್ತು ದನಕರಗಳ ಪಾಲಿಗೂ ಅದೇ ಸ್ವಿಮಿಂಗ್ಪೂಲ್!ಮರಿ ಬಾಹುಬಲಿಗಳಂತೆ ಬುಳ್ಳಗಿರುತ್ತಿದ್ದ ಮಕ್ಕಳು ಉರಿಯವ ಬಿಸಿಲಿನ ಕೆಳಗೆ ಹೊಂಡದಲಿ ಎಮ್ಮೆಗಳ ಬಾಲ ಹಿಡಿದುಕೊಂಡು ತೇಲಿ ಮುಳುಗುತ್ತಿದ್ದರು.
ಈ ನಡುವೆ ಹಳ್ಳದೊಳಗಿನ ಬಿಲಗಳಿಗೆ ಅನಾಮತ್ತಾಗಿ ಕೈ ಹಾಕಿ ಏಡಿಗಳನ್ನು ಹಿಡಿಯುವುದರಲ್ಲಿ ಕೆಲವರು ಮಗ್ನರಾಗಿರುವ ದೃಶ್ಯ ಸಾಮಾನ್ಯವಾಗಿತ್ತು.
ಪ್ರತಿ ವರ್ಷ ಈ ಊರಿನಲ್ಲಿ ಡಿಸೆಂಬರ್ ಗೆ ಜಾತ್ರೆ ನಡೆಯುವ ವೇಳೆ ಸಾಕಷ್ಟು ಜನ ಸೇರುತ್ತಿದ್ದರು. ಆದರೆ ಈ ಬಾರಿ ಕೆರೆ ನೋಡಲೇಂದೆ ನೆಂಟರಿಷ್ಟರು ಬಂದಿದ್ದರು. ಇಡೀ ಊರಿನಲ್ಲಿ ಜಾತ್ರೆಯ ವಾತಾವರಣ ಏರ್ಪಟ್ಟಿತ್ತು.
ಊರಿನವರು ಹಬ್ಬದಂತೆ ತಮ್ಮ ತಮ್ಮ ನೆಂಟರಿಷ್ಟರನ್ನೂ ಕರೆಸಿಕೊಂಡು ಮನೆಯಲ್ಲಿ ಸಹಿ, ಮಾಂಸದೂಟ ಮಾಡಿದ್ದರು. ಇನ್ನು ಕೆರೆಯ ದಡಕ್ಕೆ ಅಪ್ಪಳಿಸುತ್ತಿದ್ದ ನೀರಿನ ಅಲೆಗಳ ಶಬ್ದ ಮೈ ನರವೇಳಿಸುತ್ತಿತ್ತು. ಹಿತಕರವಾದ ಕೆರೆಯ ಮೇಲಿನ ತಂಪು ಗಾಳಿಯ ಸೋಂಕಿನಿಂದ ಆಯಾಸವೆಲ್ಲ ಮಾಯವಾಗಿ ನಿದ್ರಾದೇವಿಯ ಮಡಿಲಿಗೆ ಹೋಗುವಂತೆ ಭಾಸವಾಗುತ್ತಿತ್ತು. ಕೆರೆ ನೋಡಿದ ಪ್ರಶಾಂತವಾದ ಕಣ್ಣುಗಳು ಎಂತಹವರಿಗೂ ಸಾಂತ್ವನ ಹೇಳುವಂತಿದ್ದವು.
ದಡವನ್ನು ಮೃದುವಾಗಿ ಸ್ಪರ್ಶಿಸಿ ಭಾರವಾದ ಹೃದಯದಿಂದ ಹಿಂದಿರುಗುತ್ತಿದ್ದ ಕೆರೆಯ ಅಲೆಗಳು, ಎಲ್ಲರ ಕುಶಲ ವಿಚಾರಿಸಲು ದೂರದ ಊರಿನಿಂದ ಬಂದವೋ ಎಂಬಂತೆ ಭಾಸವಾಗುತ್ತಿತ್ತು. ತುಂಬು ಹುಣ್ಣಿಮೆಯ ದಿನದಲ್ಲಂತೂ ಕೆರೆಯ ಸೌಂದರ್ಯ ಇಮ್ಮಡಿಗೊಳ್ಳುತ್ತಿತ್ತು.
ಹೊನ್ನ ಬಣ್ಣದ ಚಂದಿರ ಕೆರೆಯ ಅಲೆಗಳ ಮೇಲೆ ಕುಳಿತು ಬಂಗಾರದ ತೇರು ಸಾಗಿ ಬಂದಂತೆ ಬರುತ್ತಿದ್ದ ಜನರ ನೋಟವಂತೂ ಕಣ್ಮನೆ ಸೆಳೆಯುತ್ತಿತ್ತು.
ಕೆರೆಯ ಸಾಮೂಹಿಕ ಒಡನಾಟ ಹಾಗೂ ಒಂಟಿತನದಲ್ಲಿ ಆಳವಾಗಿ ಬೆಸೆದುಕೊಂಡವರಿಗೆ ಚೈತನ್ಯದ ಒಂದು ಭಾಗವೇ ಆಗಿತ್ತು.
ಜಲಗೋಡಿ ಬಿದ್ದ ಕೆಲವೇ ದಿನಗಳ ನಂತರ ಊರಿನ ಮುಖದಲ್ಲಿ ಸಂತೋಷದ ಹೊನಲು ಎದ್ದು ಕಾಣುತ್ತಿತ್ತು. ಬೆಳೆ ಕೈಗೆ ಬಂದು, ಬೇಸಗೆಯ ದಿನಗಳಲ್ಲಿ ದನ-ಕರುಗಳಿಗೆ ಕುಡಿಯಲು ನೀರಾಯ್ತು ಅನ್ನುವ ಸಂತಸ ಊರಿನವರ ಮಾತು-ಕತೆಗಳಲ್ಲಿ ವ್ಯಕ್ತವಾಗುತ್ತಿತ್ತು.
ಊರಿನವರ ಅಂತರಾಳದಲ್ಲಿ ಮಡುಗಟ್ಟಿದ್ದ ಈ ಎಲ್ಲ ಶ್ರದ್ಧೆಗಳು ಕೋಡಿ ಪೂಜೆಯ ಸಾಮೂಹಿಕ ಆಚರಣೆಯಲ್ಲಿ ಉತ್ತುಂಗಕ್ಕೆ ತಲುಪುತ್ತಿದ್ದವು. ಊರಿನಲ್ಲಿದ್ದ ಮುಖಂಡರೆಲ್ಲ ಸೇರಿ ಕೆರೆ ಕೋಡಿ ಪೂಜೆಗೆ ದಿನ ನಿಗದಿ ಮಾಡುತ್ತಿದ್ದರು. ಪೂಜೆಯ ದಿನವನ್ನು ಊರಿನಲ್ಲಿ ಸಾರಿಕ್ಕುತ್ತಿದ್ದರು.
ಕೋಡಿ ಪೂಜೆಗಾಗಿ ಪ್ರತಿ ಮನೆಗೊಂದು `ದುಡ್ಡು~ ಮತ್ತು ದವಸವನ್ನು ಸಂಗ್ರಹಿಸಲಾಯಿತು. ಕೋಡಿ ಪೂಜೆ ದಿವಸ ಊರಿನ ಕರಿಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವರ ಮೆರವಣಿಗೆ ಮುಂದೆ ಹರೆ ಮತ್ತು ತಮಟೆ ವಾದ್ಯ ಕಿವಿಗೆ ರಿಂಗಣಿಸುತ್ತಿತ್ತು. ಮುತ್ತೈದೆಯರು ಕಳಸ ಹೊತ್ತು ಬರುತ್ತಿದ್ದರು. ಸಾಲುಗಟ್ಟಿ ನಿಂತಿರುತ್ತಿದ್ದ ಜನರೆಲ್ಲ ಗಂಗೆಗೆ ಹಣ್ಣುಕಾಯಿ ಮಾಡಿದರು.
ಪೂಜಾರಪ್ಪನವರು ದೇವರಿಗೆ ಮತ್ತು ಕಳಸಕ್ಕೆ ಪೂಜೆ ಮಾಡಿದ ನಂತರ ಅರಿಶಿನದ ಬಟ್ಟೆಯಲ್ಲಿ ಅಕ್ಕಿ, ಬೆಲ್ಲದಚ್ಚು, ಒಂದು ಕಣ, ಅರಿಶಿನ-ಕುಂಕುಮ, ಅಂಗುನೂಲು (ಅರಿಶಿನದ ದಾರ), ಬಳೆಬಂಗಾರ ಇಟ್ಟು ಗಂಟುಕಟ್ಟಿ, ಗಂಗಮ್ಮನಿಗೆ ಮಡ್ಲಕ್ಕಿ ತುಂಬುರವ್ವ ಅಂತ ಹೇಳಿ ಅದನ್ನು ಮುತ್ತೈದೆಯರ ಕೈಗೆ ಕೊಡುತ್ತಿದ್ದರು.
ಮುತ್ತೈದೆಯರು ತುಂಬಿದ ಕೆರೆಗೆ ಪೂಜೆ ಮಾಡಿ, ಮಡ್ಲಕ್ಕಿ ಬಿಡುವಾಗ `ನಮ್ಮವ್ವ ಗಂಗಮ್ಮ ತಾಯಿ, ಊರು ಮನೆ ಕಾಯವ್ವ, ಬೆಳೆದ ಬೆಳೆ ಕೈಗೆ ಬರಂಗೆ ಮಾಡವ್ವ ನಮ್ಮವ್ವ~ ಎಂದು ಅಂತರಾಳದಿಂದ ಹೇಳುತ್ತಿದ್ದರು. ಅವರ ಪ್ರಾರ್ಥನೆ ಸಾಮೂಹಿಕ ಒಳಿತಿಗಾಗಿ ಇರುತ್ತಿತ್ತು.
ತುಂಬಿದ ಕೆರೆಗೆ ಮಡ್ಲುದುಂಬಿದ ಮೇಲೆ, ಪೂಜಾರಪ್ಪನವರು- `ಎಲ್ಲಿ ಜಲಗನ್ನಿಕೆಯರನ್ನ ಕರೆದು ಅವರಿಗೆ ಮಡ್ಲಕ್ಕಿ ತುಂಬರವ್ವ~ ಎಂದು ಹೆಂಗಸರ ಕಡೆ ತಿರುಗಿ ಹೇಳುತ್ತಿದ್ದರು. ಊರಿನ ಐದು ಜನ (ಬೆಸ ಸಂಖ್ಯೆಯಲ್ಲಿ) ಮುತ್ತೈದೆಯರು ಗಂಗೆ ಪೂಜೆ ಮಾಡಿದರು. ಸೋಬಾನೆ ಪದಗಳು, ಮಂಗಳಾರತಿ ಪದಗಳು ಅಲ್ಲಿನ ವಾತಾವರಣಕ್ಕೆ ದೈವಿಕತೆಯ ಮಾಯಾ ಸ್ಪರ್ಶವನ್ನು ಸೃಷ್ಟಿಸುತ್ತಿದ್ದವು. ಈ ಗಂಗಮ್ಮನ ಪೂಜೆ ಊರಿನ ಎಲ್ಲರ ಮನಸ್ಸನ್ನೂ ಒಂದುಗೂಡಿಸುತ್ತಿತ್ತು. ಇಂತಹ ಉಲ್ಲಾಸದ ಆಚರಣೆಯ ನಡುವಿನಿಂದ ಭಿನ್ನಭೇದವಿಲ್ಲದ ಹೂಗುಚ್ಚವೊಂದು ಅರಳಿ ಪರಿಮಳಿಸುತ್ತಿತ್ತು.
ಒಟ್ಟಾರೆ ಇದೆಲ್ಲವನ್ನೂ ಭಾವನಾತ್ಮಕವಾಗಿ ನೋಡಿದರೆ, ನಮ್ಮೆಲ್ಲರ ಭೌತಿಕ ಮತ್ತು ಆಂತರಿಕ ಸೌಂದರ್ಯದಂತೀರುವ ಈ ಕೆರೆ ಮೂಡಲ್ ಕುಣಿಗಲ್ ಕೆರೆ! ನೋಡೋರಿಗೊಂದು ಐಭೋಗ!ದಂತಿತ್ತು.
…