


ದಾವಣಗೆರೆ: ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಗಮನ ಸೆಳೆದ ಶಾಸಕ ಕೆ.ಎಸ್.ಬಸವಂತಪ್ಪ, ೨೦೧೫ರಲ್ಲಿ ಅಂದಿನ ಸರ್ಕಾರದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಪ್ರತ್ಯೇಕ ಹಾಲು ಒಕ್ಕೂಟ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಅಂದಿನಿಂದ ಈವರೆಗೂ ಅದು ಆರಂಭವಾಗಿಲ್ಲ ಎಂದರು.

ಮಾಯಕೊಂಡ ಕ್ಷೇತ್ರದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭ ಮಾಡಲು ಈಗಾಗಲೇ ಕಲ್ಪನಹಳ್ಳಿ ಗ್ರಾಮದಲ್ಲಿ ಜಮೀನು ಹಾಗೂ ರಸ್ತೆ ಸಂಪರ್ಕವನ್ನು ಒದಗಿಸಿಕೊಟ್ಟಿದ್ದೇವೆ. ಇದಕ್ಕೆ ಬೋರ್ಡ್ ನಿಗಮವೂ ಕೂಡ ಸಮ್ಮಿತಿ ನೀಡಿದೆ. ಹೀಗಾಗಿ ಕೂಡಲೇ ಆರಂಭಿಸಬೇಕೆಂದು ಸದನದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿದರು.

ದಾವಣಗೆರೆ ಜಿಲ್ಲೆಯಲ್ಲೇ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ ಅತೀ ಹೆಚ್ಚು ಸಹಕಾರ ಸಂಘಗಳನ್ನು ಹೊಂದಿವೆ. ಈ ಭಾಗದಲ್ಲಿ ಹಾಲು ಒಕ್ಕೂಟ ಆರಂಭಿಸಿದರೆ ರೈತರಿಗೆ ಅನುಕೂಲ ಆಗುತ್ತದೆ. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಿ ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸಬೇಕೆಂದು ಮನವಿ ಮಾಡಿದರು.
ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಕ್ಕೆ ಸದನದಲ್ಲಿ ಪ್ರತ್ರಿಕ್ರಿಯೆ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಹಿಂದೆ ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸಲು ಕ್ರಮಬದ್ಧವಾಗಿ ಮಾಡಿಲ್ಲ. ಇದರಿಂದ ಸಮಸ್ಯೆ ಆಗಿದೆ. ಈಗ ಕೆಎಂಎಫ್‌ಗೆ ಬಂದಿದ್ದು, ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.