ದಾವಣಗೆರೆ : ಕಾಂಗ್ರೆಸ್ ಸರಕಾರ ಹಾಲು, ಆಲ್ಕೋಹಾಲ್ ದರ ಹೆಚ್ಚಳ ಮಾಡಿರುವುದರಿಂದ ಶ್ರಮಿಕರು ಪರದಾಡುವ ಸ್ಥಿತಿ ಎದುರಾಗಿದೆ ಎಂದು ದಲಿತ ಮುಖಂಡ ಆಲೂರು ನಿಂಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ವಿಜಯದೊಂದಿಗೆ ಮಾತನಾಡಿ, ಶ್ರಮಿಕ ವರ್ಗ ದಿನದ ದುಡಿಮೆ ನೆಚ್ಚಿಕೊಂಡಿದ್ದು, ಅಂದಿನ ಖರ್ಚು ಅಂದೇ ಉಪಯೋಗಿಸಬೇಕಿದೆ. ಇತ್ತ ತರಕಾರಿ ದರ ಗಗನಕ್ಕೆ ಏರಿದೆ. ಇನ್ನೊಂದು ಕಡೆ ಮದ್ಯದ ದರ ಹೆಚ್ಚಿದೆ. ಈಗ ಹಾಲಿನ ದರವನ್ನು ಸರಕಾರ ಹೆಚ್ಚಿದ್ದು, ಶ್ರಮಿಕ ವರ್ಗ ಹೇಗೆ ದುಡಿಮೆ ಮಾಡಬೇಕೆಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಸರಕಾರ ಹಾಲಿನ ಪ್ರೋತ್ಸಾಹ ದರವನ್ನು ನೀಡಿಲ್ಲ. ಇನ್ನೊಂದು ಕಡೆ ತರಕಾರಿ ದರ ಹೆಚ್ಚಳವಾದರೂ, ದಲ್ಲಾಳಿಗಳಿಗೆ ಹೆಚ್ಚಿನ ಹಣ ಸಿಗುತ್ತಿದೆ. ಅಲ್ಲದೇ ಪೆಟ್ರೋಲ್ ದರ ಹೆಚ್ಚಾಗಿ ಇರುವ ಕಾರಣ ಸಾರಿಗೆ ವೆಚ್ಚ ಏರಿದೆ. ಅಲ್ಲದೇ ಬೆಳಗ್ಗೆಯಿಂದ ಕೆಲಸ ಮಾಡಿ ಕಡಿಮೆ ಹಣ ಕೊಟ್ಟು ಮದ್ಯ ಕುಡಿಯುತ್ತಿದ್ದ ಶ್ರಮಿಕ ವರ್ಗ ಈಗ ಹೆಚ್ಚಿನ ಹಣ ಕೊಟ್ಟು ಮದ್ಯ ಸೇವಿಸಬೇಕಿದೆ. ಇನ್ನು ಹಾಲಿನ ದರ ಹೆಚ್ಚಾಗಿರುವ ಕಾರಣ ಶ್ರಮಿಕ ವರ್ಗ, ಮದ್ಯಮ ವರ್ಗವ್ಯಥೆ ಪಡಬೇಕಾಗಿದೆ.
ಒಂದು ಕಡೆ ಗ್ರಾಹಕರಿಗೆ ದರದ ಹೊರೆ ಎಳೆಯುತ್ತಿರುವ ಸರಕಾರ ರೈತರಿಗೆ ಸಿಗಬೇಕಾದ ನಿಜವಾದ ದರ ನೀಡುತ್ತಿಲ್ಲ. ಬೆಳೆ ನಷ್ಟ, ಹವಾಮಾನ ವೈಫರೀತ್ಯ ಸೇರಿದಂತೆ ಇನ್ನಿತರ ಸಂಕಷ್ಟವನ್ನು ರೈತ ಎದುರಿಸುತ್ತಿದ್ದು, ಅವನ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಈ ನಡುವೆ ಗೊಬ್ಬರ, ಬಿತ್ತನೆ ಬೀಜದ ದರ ಕೂಡ ಏರಿದ್ದು, ಅನ್ನದಾತ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಅಲ್ಲದೇ ಎಲ್ಲ ರೈತರು ಅಡಕೆಗೆ ಮೊರೆ ಹೋಗಿರುವ ಕಾರಣ ಬೆಳೆ ಬೆಳೆಯೋರೇ ಇಲ್ಲವಾಗಿದ್ದಾರೆ. ಇನ್ನಾದರೂ ಸರಕಾರ ಇತ್ತ ಗಮನಹರಿಸಿ ಶ್ರಮಿಕ ಮಧ್ಯಮ ವರ್ಗದವರ ಹಿತ ಕಾಪಾಡಬೇಕಿದೆ ಎಂದು ಆಲೂರು ನಿಂಗರಾಜ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.