
ದಾವಣಗೆರೆ: ದೇವನಗರಿ ಬಿಜೆಪಿಯಲ್ಲಿ ಲೋಕಸಭೆ ಚುನಾವಣೆಯಾದರೂ ಬಣ ರಾಜಕೀಯ ಮುಂದುವರಿಯುತ್ತಿದ್ದು, ಮಾಜಿ ಶಾಸಕ ರೇಣುಕಾಚಾರ್ಯ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಬಣಗಳು ಪರಸ್ಪರ ಕೆಸರೆಚಾಟ ಮಾಡುತ್ತಿದ್ದಾರೆ. ಈಗ ಅದು ದೇವಸ್ಥಾನದ ಘಂಟೆ ಹೊಡೆಯುವಷ್ಟು ಮುಟ್ಟಿದೆ.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧದ ಎಂ.ಪಿ. ರೇಣುಕಾಚಾರ್ಯ ಹೇಳಿಕೆಗೆ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಪ್ರತಿಕ್ರಿಯಿಸಿ, ‘ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಬಿಜೆಪಿಯ ರಾಜ್ಯ, ರಾಷ್ಟ್ರ ನಾಯಕರ ವಿರುದ್ಧ ಮಾತನಾಡಿಲ್ಲ ಎಂದಾದರೆ ನಗರ ದೇವತೆ ದುರ್ಗಾಂಬಿಕಾ ದೇವಿ ದೇವಾಲಯಕ್ಕೆ ಬಂದು ಗಂಟೆ ಹೊಡೆಯಲಿ’ ಎಂದು ಸವಾಲು ಹಾಕಿದ್ದಾರೆ.
ನಾನು ಬಿ.ಎಸ್. ಯಡಿಯೂರಪ್ಪ ಅವರ ಮಾನಸ ಪುತ್ರ ಎನ್ನುವ ರೇಣುಕಾಚಾರ್ಯ ಈ ಹಿಂದೆ ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧವೇ ಹೇಳಿಕೆ ನೀಡಿದ್ದರು. ಬಿ.ಎಲ್. ಸಂತೋಷ್, ನಳಿನ್ಕುಮಾರ್ ಕಟೀಲ್ ಸೇರಿದಂತೆ ರಾಜ್ಯ, ರಾಷ್ಟ್ರ ನಾಯಕರ ವಿರುದ್ಧ ಮಾತನಾಡಿದ್ದರು. ಅವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಜಿ.ಎಂ. ಸಿದ್ದೇಶ್ವರ ವಿರುದ್ಧ ಮಾತನಾಡುವ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಶಿವಯೋಗಿ ಸ್ವಾಮಿ ಎರಡು ವರ್ಷ ಪಕ್ಷದ ಕಚೇರಿಗೇ ಬರಲಿಲ್ಲ. ಯಡಿಯೂರಪ್ಪ ವಿರುದ್ಧವೇ ರಾಯಣ್ಣ ಬ್ರಿಗೇಡ್ ಕಟ್ಟಲು ಮುಂದಾದವರು ನೀವು. ನಾವು ಸ್ಥಾನ ಸಿಕ್ಕಿದರೂ ಸಿಗದಿದ್ದರೂ ಪಕ್ಷದ ನಾಯಕರ ಬಗ್ಗೆ ನಿಮ್ಮಂತೆ ಹೇಳಿಕೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ರೇಣುಕಾಚಾರ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಯಶವಂತರಾವ್, ‘ಬ್ಲಾಕ್ಮೇಲ್ ಮಾಡಿ ಸಚಿವನಾದವನು ನೀನು. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನೇ ಬದಲಾಯಿಸಿ ಎಂದು ಹೇಳಿದವನು ಯಾರು? ಅಂತಹವನಿಗೆ ಜಿ.ಎಂ. ಸಿದ್ದೇಶ್ವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ’ ಎಂದು ತಿರುಗೇಟು ನೀಡಿದರು. ರೇಣುಕಾಚಾರ್ಯ ಸುಮ್ಮನಿರದಿದ್ದರೆ ಈ ಹಿಂದೆ ನಾಯಕರ ವಿರುದ್ಧ ಹೇಳಿಕೆ ನೀಡಿರುವುದನ್ನು ದಾಖಲೆ ಸಮೇತ ರಾಜ್ಯ, ರಾಷ್ಟ್ರ ನಾಯಕರಿಗೆ ನೀಡಲಾಗುವುದು’ ಎಂದು ಎಚ್ಚರಿಸಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮುಡಾ ಹಗರಣ ಸಂಬAಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜೀನಾಮೆ ನೀಡಬೇಕು. ಹಿಂದೆ ಯಡಿಯೂರಪ್ಪ ವಿರುದ್ಧ ಆರೋಪ ಬಂದಾಗ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದ್ದರು. ಬಿಎಸ್ವೈ ರಾಜೀನಾಮೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಭಂಡತನ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 17 ತಿಂಗಳು ಕಳೆದಿದೆ. ಬಡವರು, ಹಿಂದುಳಿದವರಿಗೆ, ವಿದ್ಯಾರ್ಥಿಗಳಿಗೆ ಇರುವ ವಿವಿಧ ನಿಗಮ, ಮಂಡಳಿಗಳಿAದ ಸೌಲಭ್ಯಕ್ಕೆ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ದೂರಿದರು. ಮುಖಂಡರಾದ ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ರಾಜನಹಳ್ಳಿ ಶಿವಕುಮಾರ್, ಎಚ್.ಎಸ್.ಶಿವಕುಮಾರ್, ಜೀವನಮೂರ್ತಿ, ಎ.ವೈ. ಪ್ರಕಾಶ್, ಯಶೋದಾ ಯಗ್ಗಪ್ಪ, ಹನುಮಂತಪ್ಪ, ಎಂ.ಆರ್. ಮಹೇಶ್ ಇದ್ದರು.