


ದಾವಣಗೆರೆ: ದಾವಣಗೆರೆ ಲೋಕಸಭೆ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್ ನಗರದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಈಗ ‘ವಿನಯ ನಡಿಗೆ ಹಳ್ಳಿ ಕಡೆಗೆ’ ಶೀರ್ಷಿಕೆಯಡಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಕುಮಾರ್ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಡಿ.18ರಿಂದ ಜ.12ರವರೆಗೆ 25 ದಿನಗಳ ಕಾಲ ಇದು ನಡೆಯಲಿದೆ ಎಂದರು.

ಎಲ್ಲಿಂದ ಪಾದಯಾತ್ರೆ
ಡಿ.18ರಂದು ಬೆಳಗ್ಗೆ 9ಕ್ಕೆ ಜಗಳೂರು ವಿಧಾನಸಭಾ ಕ್ಷೇತ್ರದ ಚಿಕ್ಕಉಜ್ಜನಿ ಗ್ರಾಮದಿಂದ ಪಾದಯಾತ್ರೆ ಆರಂಭವಾಗಲಿದೆ. ಅಲ್ಲಿನ ಜನಪ್ರತಿನಿ ಧಿಗಳು, ಮುಖಂಡರು, ಮಹಿಳೆಯರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ನಿತ್ಯ 15ರಿಂದ 20 ಕಿ.ಮೀಗಳಂತೆ ಪಾದಯಾತ್ರೆಯ ಮೂಲಕ 450 ಕಿ.ಮೀ ತೆರಳಿ, ವಾಸ್ತವ್ಯ ಹೂಡಲಾಗುವುದು. ಅಲ್ಲಿನ ಜನರೊಂದಿಗೆ ಸಂವಾದ ನಡೆಸಿ, ಸಮಸ್ಯೆಗಳನ್ನು ಅರಿತು ಸಾಧ್ಯವಾದಷ್ಟು ಸಹಾಯ ಮಾಡಲಾಗುವುದು ಎಂದರು.

ವಿನಯ ನಡಿಗೆ ಹಳ್ಳಿ ಕಡೆಗೆ’ ಎಂಬ ಶೀರ್ಷಿಕೆ ಏಕೆ
ಇತ್ತೀಚಿನ ದಿನಗಳ ರಾಜಕಾರಣಿಗಳಲ್ಲಿ ವಿನಯತೆ ಕಡಿಮೆಯಾಗಿದೆ..ರಾಜಕೀಯದಲ್ಲಿ ವಿನಯ ಮುಖ್ಯ. ಆದರೆ, ಅದು ಇತ್ತೀಚೆಗೆ ರಾಜಕಾರಣಿಗಳಲ್ಲಿ ಕಡಿಮೆಯಾಗಿದ್ದು, ಜನರಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ನಾನು ವಿನಯ ನಡಿಗೆ ಹಳ್ಳಿ ಕಡೆಗೆ’ ಎಂಬ ಶೀರ್ಷಿಕೆಯಡಿ ಸಮಸ್ಯೆಗಳನ್ನು ಆಲಿಸಲು ಹೊರಟಿದ್ದೇನೆವೆಂದರು.
ಹಳ್ಳಿಗಳಿಗೆ ಯಾಕೆ ಭೇಟಿ
ಪ್ರಸ್ತುತ ಜನರಿಗೆ ರಾಜಕಾರಣಿಗಳ ಮೇಲೆ ಭರವಸೆ ಹೋಗಿದೆ. ಆದ್ದರಿಂದ ವಿಶ್ವಾಸ ಮೂಡಿಸುವುದಕ್ಕಾಗಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಳ್ಳಿಗಳಿಗೆ ಭೇಟಿ ನೀಡಿ ಆರ್ಥಿಕ ಸಮಸ್ಯೆಯಿಂದಾಗಿ ಶಾಲೆ ಬಿಟ್ಟಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಲು ಸಹಾಯ ಮಾಡುತ್ತೇನೆ.
ಟಿಕೆಟ್ ಸಿಕ್ಕು, ಗೆಲುವು ಸಾಧಿಸಿ ಸಂಸದನಾಗಿ ಆಯ್ಕೆಯಾದರೆ ಭರವಸೆಗಳನ್ನು ಈಡೇರಿಸುತ್ತೇನೆ’ ಎಂದರು.
ಒಂದು ಕ್ಷೇತ್ರದಲ್ಲಿ ಕನಿಷ್ಠ 20 ಗ್ರಾಮ ಸಂಚಾರ
ಒಂದು ಕ್ಷೇತ್ರದಲ್ಲಿ ಕನಿಷ್ಠ 20 ಗ್ರಾಮಗಳಲ್ಲಿ ಸಂಚರಿಸಿ, ಕುಗ್ರಾಮ ಇಲ್ಲವೇ ಗಡಿಗ್ರಾಮಗಳಲ್ಲಿ ವಾಸ್ತವ್ಯ ಹೂಡಲಾಗುವುದು. ಗ್ರಾಮಗಳ ಜನರೊಂದಿಗೆ ಸಂವಾದ ನಡೆಸಿ ಆ ಗ್ರಾಮದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳುತ್ತೇನೆ. ಅಲ್ಲದೆ ಪಾದಯಾತ್ರೆ ಮೂಲಕ ಸಾಮಾಜಿಕ ಹಾಗೂ ರಾಜಕೀಯ ಜಾಗೃತಿ ಮೂಡಿಸುತ್ತೇನೆ ಎಂದು ವಿವರಣೆ ನೀಡಿದರು.
ಐಎಎಸ್ ಆಕಾಂಕ್ಷಿಗಳು ಪಾದಯಾತ್ರೆಗೆ ಬರುತ್ತಾರೆ
ಪಾದಯಾತ್ರೆಗೆ ಐಎಎಸ್ ಆಕಾಂಕ್ಷಿಗಳು ಬರುತ್ತಾರೆ..ಸುಮಾರು 224 ಜನ ಬರಬಹುದು. ಬ್ಯಾಚ್ ವೈಸ್ ಅವರನ್ನು ಕರೆಸುತ್ತೇನೆ. ಇದರಿಂದ ಅವರಿಗೆ ಪ್ರಾಕ್ಡಿಕಲ್ ಆಗಿ ಜನರ ಸಮಸ್ಯೆ ಅರ್ಥವಾಗುತ್ತದೆ. ಆದ್ದರಿಂದ ಐಎಎಸ್ ಆಕಾಂಕ್ಷಿಗಳನ್ನು ಜಾಗೃತಿ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಲೋಕಸಭೆಗೆ ಮೂವರು ಟಿಕೆಟ್ ಆಕಾಂಕ್ಷಿ
ಲೋಕಸಭೆಗೆ ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿನಯ್ ಕುಮಾರ್ , ‘ಕಾಂಗ್ರೆಸ್ ಅಭ್ಯರ್ಥಿ ಕುರಿತಂತೆ ಈಗಾಗಲೇ ಪ್ರಾಥಮಿಕ ಹಂತದ ಸಮೀಕ್ಷೇ ಮುಗಿದಿದೆ. ಮೂವರು ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರನ್ನು ಪರಿಗಣಿಸಲಾಗಿದೆ. ಪಕ್ಷದ ಜಿಲ್ಲಾ ನಾಯಕರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರೊಂದಿಗೆ ಈಗಾಗಲೇ ಮಾತನಾಡಿದ್ದು, ಯಾರಿಗೆ ಟಿಕೆಟ್ ಸಿಕ್ಕರೂ ನಾವೆಲ್ಲಾ ಒಟ್ಟಾಗಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಸುರೇಶ್ ಅರಿಶಿಘಟ್ಟ, ಕಾಂಗ್ರೆಸ್ ಯುವ ಮುಖಂಡರಾದ ಶರತ್, ಆಲೇಕಲ್ ಅರವಿಂದ್, ಕಲ್ಲೇಶ್ ಉಪಸ್ಥಿತರಿದ್ದರು