ಶಿವಮೊಗ್ಗ: ಜನರ ನಂಬಿಕೆಗೆ ಪಾತ್ರವಾಗಿ ಸಂಸ್ಥೆಯನ್ನು ಮುನ್ನಡೆಸುವುದು ಅತ್ಯಂತ ಮುಖ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಸಹ್ಯಾದ್ರಿ ಚಿಟ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಹ್ಯಾದ್ರಿ ಚಿಟ್ಸ್ ಸಂಸ್ಥೆಯು 26 ವರ್ಷಗಳಿಂದ ಜನರ ನಂಬಿಕೆಗೆ ಪಾತ್ರವಾಗಿ, ಮಾಸಿಕ 5.50 ಕೋಟಿ ರೂ. ಗಿಂತ ಹೆಚ್ಚು. ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ ಸಂಗತಿ. ಸಂಸ್ಥೆಯು ವಾರ್ಷಿಕ 100 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಸಹ್ಯಾದ್ರಿ ಚಿಟ್ಸ್ ಸಂಸ್ಥೆಯ ಚೇರ್ಮನ್ ಬದ್ರಿನಾಥ್ ಮಾತನಾಡಿ, 25 ವರ್ಷದ ಉದ್ಯಮದ ಅನುಭವ ಹೊಂದಿರುವ ಗೋಪಿನಾಥ್ ಅವರು ಅತ್ಯುತ್ತಮ ಆಡಳಿತಗಾರರು. 18 ವರ್ಷಗಳಿಂದ ಚೇಂಬರ್ ಆಫ್ ಕಾಮರ್ಸ್ ಸದಸ್ಯ ಸ್ಥಾನದಿಂದ ಎಲ್ಲ ರೀತಿ ಜವಾಬ್ದಾರಿಯನ್ನು ನಿಭಾಯಿಸುತ್ತಾ ಬಂದಿದ್ದು, ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಿಜಕ್ಕೂ ಅವರ ಸೇವೆಗೆ ಸಂದ ಪ್ರತಿಫಲ.ಶಿವಮೊಗ್ಗ ಹಬ್ಬ ಮತ್ತು ಈ-ವೇಸ್ಟ್ ಮ್ಯಾನೇಜ್ಮೆಂಟ್ ಗುರಿ ತಲುಪಬೇಕು ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಗೋಪಿನಾಥ್ ಹಾಗೂ ಉಪಾಧ್ಯಕ್ಷರಾಘಿ ಆಯ್ಕೆಯಾದ ಸಹ್ಯಾದ್ರಿ ಚಿಟ್ಸ್ ಸಂಸ್ಥೆಯ ನಿರ್ದೇಶಕ ಜಿ.ವಿಜಯಕುಮಾರ್ ಅವರಿಗೆ ಸಹ್ಯಾದ್ರಿ ಚಿಟ್ಸ್ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಜಿ.ವಿಜಯಕುಮಾರ್ ಮಾತನಾಡಿ, ಶಿವಮೊಗ್ಗ ನಗರದ ಹತ್ತಾರು ಸಂಘ ಸಂಸ್ಥೆಗಳಲ್ಲಿ ನಾನು ತೊಡಗಿಸಿಕೊಂಡಿದ್ದು, ನನಗೆ ಅತ್ಯುತ್ತಮ ಎನಿಸಿದ ಸಂಸ್ಥೆ ಎಂದರೆ ಅದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ. ಏಕೆಂದರೆ, ಇದು ಎಲ್ಲ ಸಂಘಗಳಿಗೂ ಮಾತೃ ಸಂಸ್ಥೆಯಾಗಿದ್ದು, ಉದ್ಯಮಿಗಳು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತದೆ. ಇದರಿಂದ ನಮಗೆ ಕೆಲಸ ಮಾಡಲು ಸ್ಪೂರ್ತಿ ಸಿಗುವುದರ ಜತೆಗೆ ಮುಂದಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಸಹ್ಯಾದ್ರಿ ಚಿಟ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್ ಮಾತನಾಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಗೋಪಿನಾಥ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಜಯಕುಮಾರ್ ಅವರು ಸಂಘದ ಏಳಿಗೆಗೆ ಕೆಲಸ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಲಿ ಎಂದು ಹಾರೈಸಿದರು. ಶಿವರಾಜ್ ಉಡುಗಣಿ, ಸಹ್ಯಾದ್ರಿ ಚಿಟ್ಸ್ ನಿರ್ದೇಶಕರು ಮತ್ತು ಸಿಬ್ಬಂದಿ ಹಾಜರಿದ್ದರು.