ನಂದೀಶ್ ಭದ್ರಾವತಿ ದಾವಣಗೆರೆ
ಚುನಾವಣೆ ಅಂದ್ರೆ ಸಾಕು ಝಣ, ಝಣ ಕಾಂಚಾಣ ಇದ್ದೇ ಇರುತ್ತೇ…ಅದರಲ್ಲೂ ರಾತ್ರಿ ವೇಳೆ ಹಣ ಸಾಗಾಟ ತುಸು ಜೋರಾಗಿಯೇ ಇರುತ್ತದೆ…ಇನ್ನು ಲೋಕಸಭೆ ಚುನಾವಣೆ ಅಂದ್ರೆ ಕೇಳಬೇಕಾ?…ಒಂದಿಷ್ಟುಹಣದ ವಹಿವಾಟು ಜೋರಾಗಿಯೇ ಇರುತ್ತದೆ..ಆದ್ರೆ ದಾವಣಗೆರೆಯಲ್ಲಿ ಇಂತಹ ಆಟಕ್ಕೆ ಕಡಿವಾಣ ಹಾಕಲಾಗುತ್ತಿದೆ..ಅಷ್ಟಕ್ಕೂ ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ..
ದಾವಣಗೆರೆ ಅಂದ್ರೆ ಸಾಕು ರಾಜ್ಯದ ಎರಡನೇ ರಾಜಧಾನಿ, ಅಷ್ಟೇ ಅಲ್ಲದೇ ಮಧ್ಯ ಕರ್ನಾಟಕದ ಹೆಬ್ಬಾಗಿಲು ಇನ್ನು ಮುಂದುವರಿದು ಹೇಳಬೇಕೆಂದರೆ ಅದೃಷ್ಟದ ಊರು. ಸುತ್ತ ಹರಿಯುವ ತುಂಗಭದ್ರಾ ನದಿ, ಮೆಕ್ಕೆಜೋಳ, ಭತ್ತ, ಅಡಕೆ ಇಲ್ಲಿನ ಪ್ರಧಾನ ಬೆಳೆ, ಎರಡು ಮೆಡಿಕಲ್ ಕಾಲೇಜು, ಎಂಜಿನಿಯರ್ ಕಾಲೇಜು ದಾವಣಗೆರೆಯ ಕವಲು ನಾಡಿಗಳು. ದಿನಕ್ಕೆ ಕೋಟಿಗಟ್ಟಲೇ ವ್ಯವಹಾರ..ಅದರಲ್ಲೂ ಇಲ್ಲಿನ ರಾಜಕಾರಣ ಯಾವಾಗಲೂ ಹೈ ವೋಲ್ಟೇಜ್ ಆಗಿಯೇ ಇರುತ್ತದೆ. ಇನ್ನು ಲೋಕಸಭೆ ಚುನಾವಣೆ ಇರೋದ್ರಿಂದ ಹಣದ ವ್ಯವಹಾರ ಜೋರಾಗಿಯೇ ಇದೆ. ಆದ್ದರಿಂದ ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಉಮಾ ಪ್ರಶಾಂತ್ ನೈಟ್ ಶಿಫ್ಟ್ ಮಾಡುವ ಮೂಲಕ ಅಕ್ರಮ ಹಣ ವರ್ಗಾವಣೆಗೆ ಬ್ರೇಕ್ ಹಾಕಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ 72 ಚೆಕ್ ಪೋಸ್ಟ್ ಗಳಿದ್ದು, ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ದಾವಣಗೆರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ವಹಿಸುತ್ತಿದೆ. ಈವರೆಗೂ ಲಕ್ಷಾಂತರ ರೂ. ಹಣಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಕಾರ್ಯಾಚರಣೆಯಲ್ಲಿ ರಾಜ್ಯದಲ್ಲಿ ಉತ್ತಮ ಸ್ಥಾನ ಪಡೆದಿದೆ.
ಈಗಾಗಲೇ ಪಾಲಿಸಬೇಕಾದ ನಿಯಮಗಳ ಬಗ್ಗೆ ಅಧಿಕಾರಿಗಳಿಗೆ ಎಸ್ಪಿ ಉಮಾ ಪ್ರಶಾಂತ್ ಸೂಚಿಸಿದ್ದು, ರಾತ್ರಿ 11 ಗಂಟೆ ನಂತರ ಚೆಕ್ ಪೋಸ್ಟ್ ಗಳಿಗೆ ವಿಸಿಟ್ ಮಾಡಿ ಅಧಿಕಾರಿಗಳನ್ನು ನಿದ್ದೆಯಿಂದ ಎಬ್ಬರಿಸಿ ಕೆಲಸ ಮಾಡುವಂತೆ ಸೂಚಿಸುತ್ತಿದ್ದಾರೆ.
ಬೇಕಾಬಿಟ್ಟಿಯಾಗಿ ಓಡಾಡುವವರು, ಅನುಮಾನಸ್ಪದ ವ್ಯಕ್ತಿಗಳು, ಕಾರು, ಬೈಕ್ ಚಾಲನೆ ಮಾಡುವಾಗ ಮುಖಗವಸು ಧರಿಸದವರನ್ನು ಸಹ ಇವರು ತಪಾಸಣೆ ಮಾಡುತ್ತಿದ್ದಾರೆ. ಅಲ್ಲದೇ ಯಾವ ಮುಲಾಜಿಗೂ ಒಳಗಾಗದೇ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಬೇಕೆಂದು ಅಧೀನ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.
ದಾವಣಗೆರೆಯಿಂದ ಹುಬ್ಬಳ್ಳಿ, ಚಿತ್ರದುರ್ಗ, ಹಾವೇರಿ, ಬೆಂಗಳೂರು, ಚನ್ನಗಿರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಹೋಗಬಹುದಾಗಿದ್ದು, ಜಿಲ್ಲಾ ಗಡಿ ಭಾಗ ಚೆಕ್ ಪೋಸ್ಟ್ ಆರಂಭಿಸಲಾಗಿದೆ. ಕಂದಾಯ, ಪೋಲಿಸ್, ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಇವರು ಜಿಲ್ಲೆಯಿಂದ ಹೊರಹೋಗುವ ಮತ್ತು ಆಗಮಿಸುವ ಎಲ್ಲ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕು. ಹಣ, ಮದ್ಯ, ದಾಖಲೆ ಇಲ್ಲದ ವಸ್ತುಗಳು ಕಂಡು ಬಂದರೆ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿ ವಾಹನ ತಪಾಸಣೆ ಮಾಡಿದ ವರದಿಯನ್ನು ವಹಿಯಲ್ಲಿ ದಾಖಲಿಸಬೇಕು ಎಂದು ಚೆಕ್ ಪೋಸ್ಟ್ ಸಿಬ್ಬಂದಿಯವರಿಗೆ ಸೂಚಿಸಿದ್ದಾರೆ ಇದೇ ವೇಳೆ ನೋಂದಣಿ ಮಾಡಿದ ವಾಹನಗಳ ವಿವರಗಳನ್ನು ಖುದ್ದಾಗಿ ಪರಿಶೀಲಿಸುತ್ತಿದ್ದಾರೆ.
ಚುನಾವಣೆ ಅಕ್ರಮ ತಡೆಗೆ ಎಸ್ಪಿ ನೈಟ್ ಶಿಫ್ಟ್
ಎಸ್ಪಿ ಉಮಾಪ್ರಶಾಂತ್ ಒಬ್ಬ ಅಧಿಕಾರಿಯಾಗಿ ಬೆಳಗ್ಗೆ ನಾನಾ ಮೀಟಿಂಗ್, ಮತದಾನ ಜಾಗೃತಿ, ಕ್ರೈಂ ಸೇರಿದಂತೆ ಇತರೆ ಕಾರ್ಯಗಳನ್ನು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸಾರಕ್ಕಿಂತ ಚುನಾವಣೆ ಕೆಲಸಗಳನ್ನು ಜವಾಬ್ದಾರಿಯುತವಾಗಿ ಮಾಡುತ್ತಿದ್ದಾರೆ. ಎಲ್ಲರೂ ಹಾಯಾಗಿ ಮಲಗಿದರೆ ರಾತ್ರಿ ವೇಳೆ ಚೆಕ್ ಪೋಸ್ಟ್ ಗೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ತಾವೇ ಕಾರ್ಯನಿರ್ವಹಿಸುತ್ತಿದ್ದಾರೆ…ಈ ಮೂಲಕ ಚೆಕ್ ಪೋಸ್ಟ್ ನಲ್ಲಿ ಪುಲ್ ಅಲರ್ಟ್ ಆಗಿದ್ದಾರೆ. ಒಟ್ಟಾರೆ ಲೇಡಿ ಸಿಂಗಂ ಎಂದೇ ಖ್ಯಾತಪಡೆದಿರುವ ಉಮಾ ಪ್ರಶಾಂತ್ ಮನೆ, ಸಂಸಾರ ಬಿಟ್ಟು ನಾನಾ ಒತ್ತಡಗಳ ನಡುವೆ ಕೆಲಸ ಮಾಡುತ್ತಿರುವುದಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.