
ದಾವಣಗೆರೆ : ಪರಿಪೂರ್ಣ ಬದುಕಿನ ಶತಮಾನದ ಪಯಣದಲ್ಲಿ ಅರ್ಧ ಸೆಂಚುರಿಯನ್ನು ದಾಟಿರುವ ಇವರು ಹುಟ್ಟಿದ್ದು 1971ರ ಕಾಲಘಟ್ಟದಲ್ಲಿ, ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮದ ಶ್ರೀ ಮುರುಗೇಂದ್ರಪ್ಪ ಮತ್ತು ಶ್ರೀಮತಿ ನೇತ್ರಾವತಿ ದಂಪತಿಗೆ ಇವರು ಹಿರಿಯ ಪುತ್ರ ಎಂ.ಎ. (ಸಮಾಜಶಾಸ್ತ್ರ) ಎಂ.ಫಿಲ್ (ಎಲ್ ಎಲ್ .ಬಿ.) ಶಿಕ್ಷಣ ಪಡೆದ ನಂತರ ಬದುಕಿನ ಹೋರಾಟದ ಆನಂಧಿಕ ಹಂತದಲ್ಲಿ ಫೈನಾನ್ಸ್ ಕಂಪನಿಯೊಂದನ್ನು ಆಯ್ಕೆ ಮಾಡಿಕೊಂಡಿದ್ದರು.
ಆನಂತರದಲ್ಲಿ ಶಿಕ್ಷಣ ಕ್ಷೇತ್ರದ ನಂಟು ಬೆಸೆಯಿತು. ಈ ಕ್ಷೇತ್ರದ ಬಗ್ಗೆ ಮಹತ್ವಾಕಾಂಕ್ಷೆ ಏನೂ ಇರಲಿಲ್ಲ. ಆದರೆ ತನ್ನ ಪ್ರಯತ್ನ ಜ್ಞಾನವಿಕಾಸದ ಶಿಕ್ಷಣ ಮೊರಕಿಸಿಕೊಡಬೇಕೆಂಬ ಆದರ್ಶದ ಗುರಿಯತ್ತ ಸಾಗುವುದಾಗಿತ್ತು. 2004ರಲ್ಲಿ ದಾವಣಗೆರೆಯಲ್ಲಿ ಶ್ರೀಕಾರಗೊಂಡ ಶ್ರೀ ಸೋಮೇಶ್ವರ ವಿದ್ಯಾಲಯ ಕೆ.ಎಂ.ಸುರೇಶ್ ರವರ ಸಾಹಸ ಜೀವನದ ಆರಂಭಿಕ ಘಟ್ಟ.
ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ, ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಷ್ಟೊತ್ತುವ ಹೊಂಗನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಚ್.ಕೆ.ಜಿ.ಯಿಂದ 10ನೇ ತರಗತಿಯವರೆಗೆ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಈ ಕೇಂದ್ರವು ಪ್ರೇರಣಾದಾಯಕ ಅವಕಾಶವನ್ನು ನೀಡುವಲ್ಲಿ ಸಫಲತೆಯನ್ನು ಕಂಡಿದೆ.


2012 ರಿಂದ ಗ್ರಾಮೀಣ ಭಾಗವಾಗಿರುವ ಗೋಣಿವಾದ (ಕಾರಿಗನೂರು ಸಮೀಪ) ದಲ್ಲೂ ವಸತಿಯುತ ಶಾಲೆಗೆ ನಾಂದಿಯನ್ನು ಹಾಡಲಾಗಿದೆ. ಸಧ್ಯದಲ್ಲಿಯೇ ಇಲ್ಲಿ ಪಿಯುಸಿ ಶಿಕ್ಷಣದ ಕಲಿಕೆಗೂ ಅವಕಾಶ ಕಲ್ಪಿಸಲಾಗುವುದು.
ಶಿಕ್ಷಣದ ಪ್ರಗತಿಯಲ್ಲಿ ಪ್ರತಿ ವರ್ಷವೂ ಶೇ 10 ರಷ್ಟು ಫಲಿತಾಂಶದ ಗುರಿ ತಲುಪುವಿಕೆ ಮುಂದುವರಿದಿದೆ. ‘ಸೋಮೇಶ್ವರೋತ್ಸವ’ದ ಹೆಸರಿನಲ್ಲಿ ಸಾಂಸ್ಕೃತಿಕ ಹಬ್ಬದ ಆಕರ್ಷಣೆಯೂ ಜನಮೆಚ್ಚುಗೆಗೆ ಪಾತ್ರವಾಗಿದೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕ ಮಾನ್ಯರಿಗೆ ಪ್ರತಿ ವರ್ಷವೂ ಗೌರವಿಸುವ ಕಾರ್ಯಕ್ರಮವೂ ಚಾಚೂ ತಪ್ಪದ ಮುನ್ನಡೆಯನ್ನು ಕಂಡಿದೆ. ವಿದ್ಯಾಭ್ಯಾಸವೆಂದರೆ ಅಂಕ ಗಳಿಕೆಯ ಸರ್ಟಿಫಿಕೇಟ್ ಪಡೆಯುವುದಕ್ಕಷ್ಟೇ ಸೀಮಿತವಾಗದೆ ಜ್ಞಾನವಿಕಾಸದ ಗುರಿಯತ್ತ ಸಾಗುವಂತಹುದಾಗಿರಬೇಕು.
ನಾಡಿನ ಗಣ್ಯರು, ಮಠಾಧೀಶರು, ಶಿಕ್ಷಣ ತಜ್ಞರು ವಿಶೇಷ ಸಂದರ್ಭಗಳಲ್ಲಿ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಮತ್ತು ಮಹತ್ತಿನ ಗುರಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿರುವುದು ಸಂಸ್ಥಾಪಕರ ಉತ್ಸಾಹವನ್ನು ನೂರ್ಮಡಿಗೊಳಿಸಿದೆ. ಈಚೆಗೆ ಆರೋಗ್ಯ ಕ್ಷೇತ್ರದತ್ತ ಆಸಕ್ತಿ ವಹಿಸುವ ಮೂಲಕ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ಸಾರ್ವಜನಿಕರಿಗೆ ಒದಗಿಸುವ ಪ್ರಯತ್ನವೂ ಸಾಕಾರಗೊಂಡಿದೆ.
ರಾಜಕೀಯ ಎಲ್ಲರ ಬದುಕಿನ ಒಂದು ಭಾಗ ಎನ್ನುವುದನ್ನು ಇವರು ಕೂಡ ನಂಬಿಕೊಂಡಿರುವ ಹಿನ್ನೆಲೆಯಲ್ಲಿ ತಮಗಿಷ್ಟದ ಪಕ್ಷವೊಂದರ ಪದಾಧಿಕಾರಿಯಾಗಿ, ಪರಿಷ್ಠರ ಆದೇಶದ ಪಾಲಕರಾಗಿ ತಮಗೊದಗಿದ ಅವಕಾಶವನ್ನು ಜವಾಬ್ದಾರಿಯುತವಾಗಿ ಮತ್ತು ನಿಷ್ಠೆಯಿಂದ ನಿಭಾಯಿಸುವ ಮನೋಧರ್ಮವನ್ನು ರೂಢಿಸಿಕೊಂಡಿದ್ದಾರೆ.
ಪತ್ನಿ ಶ್ರೀಮತಿ ವೀಣಾರೊಂದಿಗೆ ಮಕ್ಕಳಾದ ರಮ್ಯಾ ಮತ್ತು ಮಂಜೂಷರೊಂದಿಗಿನ ಚೊಕ್ಕ ಕುಟುಂಬದ ಸಾರಥ್ಯ ಇವರದು. ಸಾಧನೆಗೆ ಮಿತಿ ಎಂಬುದಿಲ್ಲ. ಆರೋಗ್ಯಪೂರ್ಣ ವಯಸ್ಸಿನೊಂದಿಗೆ ಮುಂಬರುವ ದಶಕಗಳನ್ನು ಎತ್ತರದ ಪ್ರಗತಿಗೆ ಕೊಂಡೊಯ್ಯಲು ಕೆ.ಎಂ.ಸುರೇಶ್ ಅವರ ಪ್ರಯತ್ನ ಪೂರಕವಾಗಲೆಂಬ ಆಶಯ ನಮ್ಮದು.
ಇಂತಹ ಸಾಧಕೋತ್ತಮರಿಗೆ “2024 ರ ವರ್ಷದ ವ್ಯಕ್ತಿ” ಪುರಸ್ಕಾರಕ್ಕೆ ‘ಜಿಲ್ಲೆ ಸಮಾಚಾರ’ ಪತ್ರಿಕಾ ಬಳಗವು ಸಂತೋಷದೊಂದಿಗೆ ಪ್ರದಾನಿಸಲು ಕಾರ್ಯೋನ್ಮುಖವಾಗಿದೆ. ಗಣ್ಯರ ಸಮ್ಮುಖವು 2025ರ ಫೆಬ್ರವರಿ 13ರ (ಹದಿನೆಂಟನೇ ವರ್ಷದ) ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.