ಜೋಗಫಾಲ್ಸ್, ಜು. 9: ಮುಂಗಾರು ಮಳೆ ಮಲೆನಾಡಿಗೆ ಹೊಸ ಕಳೆ ತಂದಿದೆ. ಸುಡು ಬಿಸಿಲಿಗೆ ಬತ್ತಿ ಹೋಗಿದ್ದ ನದಿ, ತೊರೆ, ಕೆರೆಕಟ್ಟೆಗಳಿಗೆ ಜೀವಕಳೆ ಬಂದಿದೆ. ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅದರಲ್ಲಿಯೂ ವಿಶ್ವವಿಖ್ಯಾತ ಜೋಗ ಜಲಪಾತ ಜಲಧಾರೆಯಿಂದ ಧುಮ್ಮಿಕ್ಕಿ ಹರಿಯಲಾರಂಭಿಸಿದೆ. ಮತ್ತೆ ಭೋರ್ಗರೆಯಲಾರಂಭಿಸಿದೆ.
ಶರಾವತಿ ಕಣಿವೆ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದ ಜೋಗ ಜಲಪಾತ ಮತ್ತೆ ಹಳೇಯ ವೈಭವಕ್ಕೆ ಮರಳಲಾರಂಭಿಸಿದೆ. ‘ಇರುವುದರೊಳಗೆ ಒಮ್ಮೆ ನೋಡು ಜೋಗದ ಗುಂಡಿ…’ ಎಂಬ ಕವಿವಾಣಿ ಪ್ರಸ್ತುತ ಅಕ್ಷರಶಃ ಸತ್ಯವಾಗಿದೆ!
ಜಲಧಾರೆಯ ವೈಭೋಗವು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.ಕ್ಷೀರ ಸಾಗರದಂತೆ ಬೀಳುವ ಜಲಧಾರೆ, ಸುತ್ತಲಿನ ಹಸಿರು, ಆಗಾಗ್ಗೆ ಜಲಪಾತ ಮುಚ್ಚಿಕೊಳ್ಳುವ ಇಬ್ಬನಿ, ಇದರ ಜೋತೆ ಮಳೆಯ ಹನಿ ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತಿದೆ. ಆಗಾಗ್ಗೆ ಬೀಳುವ ಮಳೆ, ಮಂಜು ಮುಸುಕಿದ ವಾತಾವರಣ, ಹಚ್ಚ ಹಸಿರಿನ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೊಬಗು ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಜೋಗದ ಜಲಧಾರೆಯ ವೈಭೋಗ ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರ ಸಂಖ್ಯೆಹೆಚ್ಚಾಗುತ್ತಿದೆ. ಇದೆಲ್ಲದರ ನಡುವೆ ಜೋಗ ಜಲಪಾತದ ಬಳಿ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ.