ದಾವಣಗೆರೆ : ರಾಜ್ಯ ಲೋಕಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿರೋ ಕ್ಷೇತ್ರಗಳಲ್ಲಿ ಚಿಕ್ಕೋಡಿ ಕೂಡ ಒಂದು.. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅಖಾಡಕ್ಕಿಳಿದಿದ್ರೆ, ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮತ್ತೆ ಕಣಕ್ಕಿಳಿದಿದ್ದಾರೆ. ಆದ್ರೆ ಸದ್ಯದ ಟ್ರೆಂಡಿಂಗ್ ನೋಡಿದ್ರೆ ಈ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಅಬ್ಬರ ಆರ್ಭಟ ಹೆಚ್ಚಾಗಿದೆ.. ಅಂದ್ರೆ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ಸುನಾಮಿ ಅಲೆ ಎದ್ದಿದೆ. ಹಾಗಾದ್ರೆ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಮತ್ತು ಅಣ್ಣಾ ಸಾಹೇಬ್ ಜೊಲ್ಲೆ ಅವರ ನಡುವಿನ ಫೈಟ್ ಹೇಗಿದೆ.?
ಚಿಕ್ಕೋಡಿಯಲ್ಲಿ ಸದ್ಯದ ಟ್ರೆಂಡಿಂಗ್ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿ ಪರ ಹೆಚ್ಚು ಪ್ರಚಾರ ಮತ್ತು ಜನ ಪರ ಅಲೆ ಎದ್ದಿದೆ. ಇದ್ರ ಹೊರತಾಗಿಯೂ ಬಿಜೆಪಿ ಕೂಡ ಕಾಂಗ್ರೆಸ್ಗೆ ಟಫ್ ಫೈಟ್ ಕೊಡೋಕೆ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಯಾಕಂದ್ರೆ ಚಿಕ್ಕೋಡಿಯಲ್ಲಿ ಎರಡೂ ಪ್ರಬಲ ರಾಜಕೀಯ ಕುಟುಂಬಗಳ ನಡುವೆ ಹಣಾಹಣಿ ನಡೀತಾಯಿದೆ.
ನಿಮಗೆ ಗೊತ್ತಿರ್ಲಿ, ಈ ಹಿಂದೆ ಕಾಂಗ್ರೆಸ್ ಪಕ್ಷ ಹಿರಿಯ ಮುಖಂಡರನ್ನೇ ಹೆಚ್ಚಾಗಿ ಕಣಕ್ಕಿಳಿಸುತ್ತಿತ್ತು. ಆದ್ರೆ ಇದೇ ಮೊದಲ ಸಲ ಯುವಕರಿಗೆ ಮಣೆ ಹಾಕಿದ್ದು, ಹೊಸ ಪ್ರಯೋಗಕ್ಕೆ ಮುಂದಾಗಿದೆ. ಚಿಕ್ಕೋಡಿಯಲ್ಲಿ PWD ಸಚಿವ ಮತ್ತು KPCC ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪುತ್ರಿ, ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇವರ ವಯಸ್ಸು ಕೇವಲ 26 ವರ್ಷ ಅಷ್ಟೇ. ಒಂದು ವೇಳೆ ಇವರು ಗೆದ್ದರೆ ದೇಶದ ಅತಿ ಕಿರಿಯ ಸಂಸದರಲ್ಲಿ ಒಬ್ಬರಾಗಲಿದ್ದಾರೆ. ಇತ್ತ ಬಿಜೆಪಿ ಚಿಕ್ಕೋಡಿಯಲ್ಲಿ ಮತ್ತೆ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನೇ ಕಣಕ್ಕಿಳಿಸಿದೆ. ನಿಮಗೆ ಗೊತ್ತಿರ್ಲಿ, ಅಣ್ಣಾ ಸಾಹೇಬ್ ಜೊಲ್ಲೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಕಾಶ್ ಹುಕ್ಕೇರಿ ವಿರುದ್ಧ 1.17 ಲಕ್ಷ ಮತಗಳ ಅಂತರದಿಂದ ಗೆದ್ದಿದ್ರು. ಚಿಕ್ಕೋಡಿಯಲ್ಲಿ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಜನಪ್ರಿಯ ನಾಯಕರಾಗಿ ಅಣ್ಣಾ ಸಾಹೇಬ್ ಜೊಲ್ಲೆ ಹೊರಹೊಮ್ಮಿದ್ದಾರೆ. ಅವರು ಸಹಕಾರಿ ಸಂಘಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಹಲವಾರು ಘಟಕಗಳನ್ನು ನಡೆಸುವ ಜನಪ್ರಿಯ ಜೊಲ್ಲೆ ಗ್ರೂಪ್ ಆಫ್ ಕಂಪನಿಗಳ ಮುಖ್ಯಸ್ಥರಾಗಿದ್ದಾರೆ. ಮಾಜಿ ಸಚಿವೆಯಾಗಿರುವ ಅವರ ಪತ್ನಿ ಶಶಿಕಲಾ ಜೊಲ್ಲೆ ನಿಪ್ಪಾಣಿ ಶಾಸಕರಾಗಿದ್ದು, ಕ್ಷೇತ್ರದಾದ್ಯಂತ ತಳಮಟ್ಟದ ಜನರೊಂದಿಗೆ ಕುಟುಂಬ ಉತ್ತಮ ಸಂಪರ್ಕ ಹೊಂದಿದೆ.
ಲಿಂಗಾಯತ ಸಮುದಾಯದ ಅಣ್ಣಾ ಸಾಹೇಬ್ ಜೊಲ್ಲೆ, ಈ ಸಲವೂ ಕಳೆದ ಸಲದಂತೆ ಮೋದಿ ವೇವ್ನಲ್ಲಿ ಗೆದ್ದು ಬರೋ ಕನಸು ಕಂಡಿದ್ದಾರೆ. ಆದ್ರೆ ಚಿಕ್ಕೋಡಿ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಹಲವು ಬಿಜೆಪಿ ಸ್ಥಳೀಯ ಮುಖಂಡರು ಮತ್ತೆ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ಕೊಟ್ಟಿದ್ದಂತೆ ಮುನಿಸಿಕೊಂಡಿದ್ದಾರೆ. ಜೊತೆಗೆ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನ ಸೋಲಿಸೋಕೆ ಒಳ ಏಟು ಕೊಡೋ ಸಾಧ್ಯತೆ ಇದೆ.
ಇನ್ನ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳೀ ಸ್ಟ್ರೆಂಥ್ ಏನು ಅಂತ ನೋಡೋದಾದ್ರೆ ಪ್ರಿಯಾಂಕಾ ಜಾರಕಿಹೊಳಿಗೆ ಅವರ ಕುಟುಂಬವೇ ಅತಿದೊಡ್ಡ ಸ್ಟ್ರೆಂಥ್.. ಚಿಕ್ಕೋಡಿ ಈ ಹಿಂದೆ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಈ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ದೊಡ್ಡ ಮತವರ್ಗವಿದೆ. ಈ ಮತಗಳೇ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಮತ್ತೊಂದೆಡೆ, ಕಳೆದ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆ.
ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಭಾರೀ ಬೆಂಬಲ ಪಡೆದಿದ್ದಾರೆ. ಗಡಿ ಪ್ರದೇಶದ ಮರಾಠಿ ಜನರೊಂದಿಗೆ ಅವರ ಸಂಪರ್ಕವಿದೆ, ಇದು ಸತೀಶ್ ಜಾರಕಿಹೊಳಿ ಮಗಳಿಗೆ ಹೆಚ್ಚುವರಿ ಪ್ರಯೋಜನವಾಗಿದೆ. ಇಷ್ಟೇ ಅಲ್ಲ, ಸತೀಶ್ ಜಾರಕಿಹೊಳಿ ಇಬ್ಬರು ಸಹೋದರರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಹಾಲಿ ಶಾಸಕರಾಗಿರುವುದರಿಂದ ಅನೇಕ ಸಾಂಪ್ರದಾಯಿಕ ಬಿಜೆಪಿ ಮತಗಳು ಕಾಂಗ್ರೆಸ್ಗೆ ಹೋಗುವ ಸಾಧ್ಯತೆಯೂ ಇದೆ.
ಅಂದ್ರೆ ಚಿಕ್ಕೋಡಿಯಲ್ಲಿ ಜಾರಕಿಹೊಳಿ ಕುಟುಂಬದ ನಾಯಕರು ಪಕ್ಷಾತೀತವಾಗಿ ಒಂದಾಗೋ ಸಾಧ್ಯತೆ ಇದೆ. ಆದರೆ, ವಿಶೇಷವಾಗಿ ಕುರುಬ ಸಮುದಾಯದ ಹಿರಿಯ ನಾಯಕರಿಗೆ ಪಕ್ಷದ ಟಿಕೆಟ್ ನಿರಾಕರಿಸಿರುವುದು ಕಾಂಗ್ರೆಸ್ ಪಕ್ಷದ ಕುರುಬ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.
ಅದೇನೇ ಇದ್ರೂ ಸದ್ಯದ ಟ್ರೆಂಡಿಂಗ್ ಪ್ರಕಾರ ಚಿಕ್ಕೋಡಿಯ ಮತದಾರರು ಬದಲಾವಣೆ ಬಯಸುತ್ತಿದ್ದಾರೆ.. ಜೊತೆಗೆ ಯುವಕರಿಗೆ ಅಧಿಕಾರ ಕೊಟ್ಟು ನೋಡಲು ಬಯಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಾಯಿವೆ. ಇದು ಸದ್ಯದ ಟ್ರೆಂಡಿಂಗ್ ಆಗಿದ್ದು, ಮುಂದಿನ ದಿನಗಳಲ್ಲಿ ಈ ಟ್ರೆಂಡಿಂಗ್ ಹೀಗೆ ಉಳಿಯುತ್ತಾ.? ಇಲ್ಲ, ಬದಲಾಗುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.