ಶಿವಮೊಗ್ಗ: ರಾಜ್ಯಪಾಲರಿಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರನ್ನು ಕೂಡಲೇ ಬಂಧಿಸಬೇಕು ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸರ್ಕಾರದ ಒಂದು ಭಾಗವೇ ಆಗಿದ್ದಾರೆ. ಟೀಕಿಸುವ ಭರದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುವುದು ತರವಲ್ಲ. ಅದರಲ್ಲೂ ಐವನ್ ಡಿಸೋಜ ಅವರು ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರು ಐವನ್ ಅಲ್ಲ, ಐವಾನ್ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡರು ಇವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿಯೂ ಇಲ್ಲ, ಖಂಡಿಸಿಯೂ ಇಲ್ಲ. ಗಲಾಟೆಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ನಿಜವಾಗಿಯೂ ರಾಷ್ಟ್ರದ್ರೋಹಿ ಪಟ್ಟ ಕಟ್ಟಿ ಜೈಲಿಗೆ ಕಳಿಸಬೇಕಾಗಿದೆ. ಇವರನ್ನು ಪಕ್ಷದಿಂದ ಕಾಂಗ್ರೆಸ್ ಮುಖಂಡರು ಉಚ್ಚಾಟನೆ ಮಾಡಬೇಕು. ಮತ್ತು ವಿಧಾನ ಪರಿಷತ್ ಸದಸ್ಯತ್ವದಿಂದ ವಜಾ ಮಾಡಬೇಕು ಎಂದರು.
ಬಾಂಗ್ಲಾದಲ್ಲಿ ಆದಂತೆ ಕರ್ನಾಟಕದಲ್ಲೂ ನಾವು ಮಾಡುತ್ತೇವೆ ಎಂಬ ಅರ್ಥ ಬರುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆಯಾಗಿದೆ. ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ಕರ್ನಾಟಕದಲ್ಲೂ ಇದೇ ಕೆಲಸವನ್ನು ನಾವು ಮಾಡುತ್ತೇವೆ ಎಂಬುದು ಐವನ್ ಡಿಸೋಜರ ಹೇಳಿಕೆಯಲ್ಲಿದೆ ಎಂದರು.