ಬೆಂಗಳೂರು:ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೀಟ್ಗಳ ಅಕ್ರಮ ಬ್ಲಾಕಿಂಗ್ ಪ್ರಕರಣ ಸಂಬಂಧ ಮೂರು ಪ್ರತಿಷ್ಠಿತ ಕಾಲೇಜಿಗೆ ಮಲ್ಲೇಶ್ವರಂ ಪೊಲೀಸರು ನೋಟಿಸ್ ನೀಡಿದ್ದಾರೆ.ಈ ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಮೆರಿಟ್ ಹಾಗೂ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಹಂಚಿಕೆಯಾಗಿರುವ ಸೀಟುಗಳ ಕುರಿತು ದಾಖಲಾತಿಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಏನಿದು ಪ್ರಕರಣ
ಸೀಟು ಹಂಚಿಕೆಯಲ್ಲಿ ಅಕ್ರಮ ಅನುಮಾನದ ಮೇರೆಗೆ ಕೆಇಎ ದೂರು ದಾಖಲಿಸಿತ್ತು. ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರಂ ಪೊಲೀಸರು ಕೆಇಎ ಗುತ್ತಿಗೆ ನೌಕರ ಸೇರಿದಂತೆ ದಂಧೆಯಲ್ಲಿ ಭಾಗಿಯಾಗಿದ್ದರೆ ಎನ್ನಲಾದ 10 ಜನರನ್ನು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಪ್ರಕರಣದಲ್ಲಿ ಕಾಲೇಜುಗಳ ಆಡಳಿತ ಮಂಡಳಿ ಕೆಲವರು ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಕೆಲ ಕಾಲೇಜು ಆಡಳಿತ ಮಂಡಳಿಗಳು ವಿಚಾರಣೆಗೆ ಹಾಜರಾಗಲು 1 ವಾರ ಸಮಯಾವಕಾಶ ಕೇಳಿದ್ದು, ಈ ವಾರಾಂತ್ಯದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ.
ಅಕ್ರಮ ಹೇಗೆ…?
52 ಎಂಜಿನಿಯರಿಂಗ್ ಅಭ್ಯರ್ಥಿಗಳ ಲಾಗಿನ್ ಐಡಿ, ಪಾಸ್ವರ್ಡ್ ಹಾಗೂ ಸಿಕ್ರೇಟ್ ಕೀಯನ್ನು ಅನಧಿಕೃತವಾಗಿ ಪಡೆದಿದ್ದ ಅಪರಿಚಿತರು, ಅಭ್ಯರ್ಥಿಗಳ ಪರವಾಗಿ ಆಫ್ಶನ್ ಎಂಟ್ರಿ ಮಾಡಿಸಿದ್ದರು. ಬಳಿಕ ಸರ್ಕಾರದ ಕೋಟಾದ ಎಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳು ಹಾಗೂ ಪ್ರಾಧಿಕಾರಕ್ಕೆ ವಂಚಿಸಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆಡಳಿತಾಧಿಕಾರಿ ಇಸಾಲುದ್ದೀನ್.ಜೆ.ಗಾಡಿಯಲ್ ನವೆಂಬರ್ 13ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ತನಿಖೆ ಕೈಗೊಂಡಾಗ ಆರೋಪಿಗಳು ಮೊಬೈಲ್, ಲ್ಯಾಪ್ಟಾಪ್ಗಳನ್ನು ಬಳಸಿಕೊಂಡು ಗೋವಾ, ಶಿವಮೊಗ್ಗ, ದಾವಣಗೆರೆ, ಕಡೂರು ಹಾಗೂ ಬೆಂಗಳೂರಿನಲ್ಲಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಭ್ಯರ್ಥಿಗಳೆಂದು ಬಿಂಬಿಸಿ ಕೆಇಎ ವೆಬ್ಸೈಟ್ನಲ್ಲಿ ಕಾಲೇಜು ಮತ್ತು ಕೋರ್ಸ್ ಆಯ್ಕೆ ಮಾಡಿರುವುದು ಪತ್ತೆಯಾಗಿತ್ತು. ಅದರನ್ವಯ ನಾಲ್ವರು ಆರೋಪಿತರನ್ನ ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವ ಓರ್ವ ಆರೋಪಿಯು ಅಭ್ಯರ್ಥಿಗಳ ಮಾಹಿತಿಯನ್ನು ಆರೋಪಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿತ್ತು.
ಈ ಮಾಹಿತಿ ಆಧರಿಸಿ ಆರೋಪಿಗಳಾದ ಹರ್ಷ(42), ಪ್ರಕಾಶ್ (42), ಪುನೀತ್(27), ಶಶಿಕುಮಾರ್(34), ಪುರುಷೋತ್ತಮ್ (24), ಅವಿನಾಶ್(35), ತಿಲಕ್(60) ರವಿಶಂಕರ್ (56), ನೌಶದ್ ಆಲಂ (42) ಹಾಗೂ ದಿಲ್ಶಾದ್ ಆಲಂ (33) ಎಂಬ ಆರೋಪಿಗಳನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದರು