ದಾವಣಗೆರೆ: ದಾವಣಗೆರೆಯಲ್ಲಿ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಅವರು ಆಡಿದ್ದೆ ಆಟ ಎಂದುಕೊಂಡಿದ್ದಾರೆ. ಹೊಸದಾಗಿ ಬಂದಿರುವ ಎಸಿ ನಮ್ಮನ್ನು ಸಂಪರ್ಕಿಸಲೇ ಇಲ್ಲ ಎಂದು ಜಗಳೂರು ಶಾಸಕ ದೇವೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಸಭೆ ಮುಗಿದ ಬಳಿಕ ಮೊದಲು ದಾವಣಗೆರೆ ಎಸಿಗೆ ತರಾಟೆಗೆ ತೆಗೆದುಕೊಂಡರು. ಅವರು ಜಗಳೂರು ಶಾಸಕರನ್ನು ಭೇಟಿಯಾಗಿ ದೂರವಾಣಿ ಸಂಖ್ಯೆ ಪಡೆದುಕೊಳ್ಳಲು ಆಗಮಿಸಿದ ವೇಳೆ ನೀವು ಏನಾದ್ರು ಆಟ ಆಡಿದರೆ ಜನ ನುಗ್ಗಿಸಿ ಬಿಡ್ತಿನಿ ಹುಷಾರ್ ಎಂದರು.
ಅಧಿಕಾರಿಗಳು ಜಗಳೂರಿನಲ್ಲಿ ಒಬ್ಬ ಶಾಸಕನಿದ್ದಾನೆ ಎಂಬುದನ್ನೇ ಮರೆತಿದ್ದಾರೆ. ಜಿಲ್ಲಾಧಿಕಾರಿಯಿಂದ ಹಿಡಿದು ಸಿಇಒ ಸೇರಿದಂತೆ ಎಲ್ಲ ಅಧಿಕಾರಿಗಳು ಶಾಸಕರನ್ನು ಭೇಟಿ ಮಾಡಬೇಕು. ಅವರ ಕ್ಷೇತ್ರದ ಕಷ್ಟ, ಸುಖವನ್ನು ಕೇಳಬೇಕು ಎಂಬುದನ್ನು ಮರೆತಿದ್ದಾರೆ.
ನಮ್ಮದು ಹಿಂದುಳಿದ ಕ್ಷೇತ್ರವಾಗಿದ್ದರಿಂದ ನಮ್ಮ ಮಾತು ಯಾರು ಕೇಳುವುದಿಲ್ಲ. ಕೆಡಿಪಿ ಸಭೆಗೆ ನಾನು ಭಾಗಿಯಾದರೆ ಅದು ವ್ಯರ್ಥ” ಎಂದು ಜಗಳೂರು ಶಾಸಕ ಬಿ.ದೇವೆಂದ್ರಪ್ಪ ತೀವ್ರ ಬೇಸರ ವ್ಯಕ್ತಪಡಿಸಿ ಕೆಡಿಪಿ ಸಭೆಯಿಂದ ಹೊರನಡೆಯಲು ಮುಂದಾಗಿದ್ದರು. ಈ ವೇಳೆ ಶಾಸಕ ಕೆ.ಎಸ್. ಬಸವಂತಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ್ರು ತಡೆದು ಕೂರಿಸಿದರು.
ಈ ಸಭೆ ಆರಂಭದಲ್ಲೇ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಜಗಳೂರಿನ ಕಾಂಗ್ರೆಸ್ ಶಾಸಕ ಬಿ. ದೇವೇಂದ್ರಪ್ಪ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡು, ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಬೇಸರಗೊಂಡು ಹೊರ ನಡೆಯಲು ಮುಂದಾಗಿದ್ದರು. ಅಧಿಕಾರಿಗಳು ನಮ್ಮಮಾತು ಕೇಳುತ್ತಿಲ್ಲ” ಎಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲೇ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಳಿ ಅಳಲು ತೋಡಿಕೊಂಡರು.
ಶಾಸಕರ ಆರೋಪವೇನು?
ಸಭೆಯಲ್ಲಿ ಮಾತನಾಡಿದ ಶಾಸಕ ಬಿ.ದೇವೆಂದ್ರಪ್ಪ, ”ಜಿಲ್ಲೆಯ ಉನ್ನತಾಧಿಕಾರಿಗಳಲ್ಲಿ ಒಬ್ಬ ಶಾಸಕ ಕೂಡಾ ಇದ್ದಾನೆ ಎನ್ನುವುದು ಮರೆತು ಬಿಟ್ಟಿದ್ದು, ಸೌಜನ್ಯಕ್ಕಾದರೂ ಭೇಟಿ ಮಾಡುತ್ತಿಲ್ಲ. ನಮ್ಮ ಕ್ಷೇತ್ರದ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಾನು ಶಾಸಕನಾಗಿ ಒಂದು ವರ್ಷ ಆಗಿದೆ. ನಮ್ಮ ಕ್ಷೇತ್ರದ ಕೆಲಸಗಳು ನಡೆಯುತ್ತಿಲ್ಲ. ಹಿಂದುಳಿದ ಕ್ಷೇತ್ರದ ಬಗ್ಗೆ ಉದಾಸೀನ ಮಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಬಿ.ದೇವೆಂದ್ರಪ್ಪ ಮಾತಿಗೆ ಧ್ವನಿ ಗೂಡಿಸಿದ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳ ನಡೆ ತೀವ್ರವಾಗಿ ಖಂಡಿಸಿದರು. ಮಧ್ಯೆ ಪ್ರವೇಶಿದ ಹೊನ್ನಾಳಿ ಶಾಸಕ ಶಾಂತನಗೌಡ ಎಲ್ಲವನ್ನು ಸರಿಪಡಿಸುವುದಾಗಿ ಹೇಳಿ ಶಾಸಕ ಬಿ.ದೇವೆಂದ್ರಪ್ಪ ಅವರನ್ನು ತಡೆದು ಕೂರಿಸಿದರು. ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸರಿಪಡಿಸುವೆ ಎಂದು ಭರವಸೆ ನೀಡಿದ ನಂತರ ಬಿ. ದೇವೇಂದ್ರಪ್ಪ ಸಭೆಯಲ್ಲಿ ಭಾಗಿಯಾದರು.