ದಾವಣಗೆರೆ : ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ರಾಜ್ಯದ ಕೆಲವು ಬಿಜೆಪಿ ಮುಖಂಡರಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಪಕ್ಷದ ವರಿಷ್ಠರು ಎಚ್ಚೆತ್ತುಕೊಂಡಿದ್ದಾರೆ. ಪಕ್ಷವನ್ನು ಬಿಕ್ಕಟ್ಟಿಗೆ ಸಿಲುಕಿಸುವ ಮುನ್ನವೇ ಪರಿಸ್ಥಿತಿಯನ್ನು ತಣ್ಣಗಾಗಿಸಲು ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭಾನುವಾರ ನವದೆಹಲಿಗೆ ಬಂದು ಮಾತನಾಡುವಂತೆ ಹೈಕಮಾಂಡ್ ಸೂಚಿಸಿದೆ. ಹಾಗಾದ್ರೆ ರೆಬೆಲ್ ನಾಯಕರು ಡೆಲ್ಲಿಗೆ ಹೋಗುತ್ತಿರುವುದ್ಯಾಕೆ? ಹೈಕಮಾಂಡ್ ಕೊಡುತ್ತಾ ಖಡಕ್ ಎಚ್ಚರಿಕೆ? ಈ ಕುರಿತು
ರಾಜ್ಯ ಬಿಜೆಪಿ ಸದ್ಯಕ್ಕಂತು ಮನೆಯೊಂದು ಮೂರು ಬಾಗಿಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಅವರದ್ದೇ ಪಕ್ಷದ ನಾಯಕರು ಬಹಿರಂಗವಾಗಿ ಟೀಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಳಗಾವಿಯ ಖಾಸಗಿ ರೆಸಾರ್ಟ್ನಲ್ಲಿ ಜಾರಕಿಹೊಳಿ, ಯತ್ನಾಳ್ ಅವರಲ್ಲದೆ ಮಾಜಿ ಶಾಸಕ ಪ್ರತಾಪ್ ಸಿಂಹ, ಜಿಎಂ ಸಿದ್ದೇಶ್ವರ, ಅಣ್ಣಾಸಾಹೇಬ ಜೊಲ್ಲೆ ಸಭೆ ನಡೆಸಿದ್ದರು. ವಿಜಯೇಂದ್ರ ಅವರು ಇತ್ತೀಚೆಗೆ ನಡೆಸಿದ ಬಿಜೆಪಿಜೆಡಿಎಸ್ ಮೈಸೂರು ಪಾದಯಾತ್ರೆಗೆ ಪ್ರತಿಯಾಗಿ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಸಭೆಯಲ್ಲಿ ನಿರ್ಧರಿಸಿದ್ದರು.
ಹೈಕಮಾಂಡ್‌ಗೆ ಬಲವನ್ನು ಸಾಬೀತುಪಡಿಸಲು ದೆಹಲಿ ಭೇಟಿಗೆ ಮುಂಚಿತವಾಗಿ ಗುಂಪು ಸಾಧ್ಯವಾದಷ್ಟು ನಾಯಕರನ್ನು ಸೆಳೆಯುತ್ತಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಎತ್ತಿ ಹಿಡಿಯುವುದು ಬಳ್ಳಾರಿ ಪಾದಯಾತ್ರೆಯ ಉದ್ದೇಶವಾಗಿದ್ದರೂ, ನಿಜವಾದ ಕಾರಣ ಗುಂಪಿನ ಬಲವನ್ನು ತೋರಿಸುವುದಾಗಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 21ರಂದು ಬೆಂಗಳೂರಿನಲ್ಲಿ ಮತ್ತೆ ಸಭೆ ನಡೆಸಲು ಬಣ ಯೋಜಿಸಿತ್ತು. ಆದರೆ ಬಿಜೆಪಿ-ಆರ್‌ಎಸ್‌ಎಸ್ ನಾಯಕರು ಜಾರಕಿಹೊಳಿ ಮತ್ತು ಯತ್ನಾಳ್‌ಗೆ ಸಮನ್ಸ್ ನೀಡಿದ ನಂತರ ಅದನ್ನು ರದ್ದುಗೊಳಿಸಲಾಯಿತು. ಬೆಂಗಳೂರಿನಲ್ಲಿ ಬಂಡಾಯ ಸಭೆಯ ಮುಂದಿನ ದಿನಾಂಕವನ್ನು ಶೀಘ್ರ ನಿರ್ಧರಿಸಲಾಗುವುದು ಎಂದು ಜಾರಕಿಹೊಳಿ ಬೆಂಬಲಿಗರು ಹೇಳುತ್ತಿದ್ದಾರೆ.
ಯತ್ನಾಳ್ ಸೇರಿದಂತೆ ಹಲವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮನ್ನು ನಿರ್ಲಕ್ಷಿಸಿದ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ಗುಂಪಿನ ಮೂಲಗಳು ತಿಳಿಸಿವೆ. ಪ್ರತಾಪ್‌ಸಿಂಹ ಮತ್ತು ಸಿದ್ದೇಶ್ವರಗೆ ಟಿಕೆಟ್ ನಿರಾಕರಿಸಿದರೆ, ಇತರರು ಚುನಾವಣಾ ಸಮಯದಲ್ಲಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಅಂದುಕೊಂಡಿದ್ದಾರೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ನಾಯಕತ್ವವನ್ನು ದೀರ್ಘಕಾಲದಿಂದ ವಿರೋಧಿಸುತ್ತಿರುವ ಯತ್ನಾಳ್, ಗುರುವಾರ ತಮ್ಮ ಗುಂಪನ್ನು ಬಿಜೆಪಿಯ ಬಂಡಾಯ ಅಥವಾ ಅತೃಪ್ತ ನಾಯಕರೆಂದು ಕರೆಯಬಾರದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಕರೆಯಬೇಕು ಎಂದಿದ್ದರು. ಯತ್ನಾಳ್ ಮತ್ತು ಜಾರಕಿಹೊಳಿ ನವದೆಹಲಿ ಭೇಟಿ ನಿರ್ಣಾಯಕವಾಗಿದ್ದು, ಇದು ಬಳ್ಳಾರಿ ಪಾದಯಾತ್ರೆ ಮತ್ತು ಬೆಂಗಳೂರು ಸಭೆಯ ಭವಿಷ್ಯವನ್ನು ನಿರ್ಧರಿಸುತ್ತದೆ.
ಒಂದು ವೇಳೆ ಹೈಕಮಾಂಡ್ ಒಪ್ಪಿಗೆ ನೀಡಲು ನಿರಾಕರಿಸಿದರೆ, ಮೆರವಣಿಗೆ ಮತ್ತು ಸಭೆ ಎರಡೂ ರದ್ದಾಗುತ್ತದೆ. ಆದರೆ ಇಬ್ಬರು ನಾಯಕರು ವರಿಷ್ಠರನ್ನು ಭೇಟಿಯಾದಾಗ, ಅವರು ಖಂಡಿತವಾಗಿಯೂ ವಿಜಯೇಂದ್ರ ಅವರ ನಾಯಕತ್ವದೊಂದಿಗೆ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಕೊನೆಗೂ ಎಚ್ಚೆತ್ತುಕೊಂಡಿದ್ದು ಬಂಡಾಯ ಎದ್ದ ನಾಯಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.