ದಾವಣಗೆರೆ : ಹಾಸನದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಕ್ಷಣಕ್ಕೊಂದು ಟ್ವಿಸ್ಟ್ ಪಡ್ಕೊಂತಿದೆ. ಜೊತೆಗೆ ಈ ಪ್ರಕರಣ ದಿನೇ ದಿನೇ ತಾರಕಕ್ಕೇರ್ತಾಯಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗ್ತಾನೇ ಇವೆ. ಹಾಗಾದ್ರೆ ಈ ಪೆನ್‌ಡ್ರೈವ್ ಪ್ರಕರಣದಿಂದ ಯಾರಿಗೆ ಲಾಭ..? ಯಾರಿಗೆ ನಷ್ಟ ಗೊತ್ತಾ.?
ಹಾಸನ ಪೆನ್‌ಡ್ರೈವ್ ಪ್ರಕರಣ ಇದೀಗ ತಾರಕಕ್ಕೇರಿದೆ. ಪೆನ್‌ಡ್ರೈವ್ ಪ್ರಕರಣ ರುವಾರಿ ಯಾರು? ಎಂಬ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‌ನಿಂದ ಆರೋಪ ಪ್ರತ್ಯಾರೋಪ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ರಾಷ್ಟ್ರೀಯ ಮಟ್ಟದಲ್ಲೂ ಎರಡು ಪಕ್ಷದ ನಾಯಕರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದು, ಪರಸ್ಪರ ಪ್ರತಿಭಟನೆ, ದೂರು ಗಮನ ಸೆಳೆಯುತ್ತಿದೆ. ಪೆನ್‌ಡ್ರೈವ್ ವಿಚಾರವಾಗಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ದೇವರಾಜೇಗೌಡ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ಪೆನ್ ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರನ್ನು ಎಳೆದು ತಂದಾಗಲೇ ಇಲ್ಲೇನೋ ಮಸಲತ್ತಿದೆ ಎಂಬ ಗುಮಾನಿ ದಟ್ಟವಾಗಿತ್ತು. ಆದರೆ ದೇವರಾಜೇಗೌಡನ ಮಾತುಗಳ ಸ್ಕ್ರೀಪ್, ಡೈರೆಕ್ಷನ್ ಎಲ್ಲವೂ ಬಿಜೆಪಿ ಹೈಕಮಾಂಡಿನದ್ದು ಎಂದು ಬಹಿರಂಗವಾಗಿದೆ ಎಂದು ಆರೋಪ ಮಾಡಿದೆ.
ಅಷ್ಟೆ ಅಲ್ಲ, ಒಂದೇ ಏಟಿನಲ್ಲಿ ಜೆಡಿಎಸ್ ಪಕ್ಷವನ್ನು ಮುಳುಗಿಸುವುದರ ಜೊತೆಗೆ ಕಾಂಗ್ರೆಸ್ ನಾಯಕರನ್ನೂ ಟಾರ್ಗೆಟ್ ಮಾಡುವ ಮಹಾ ಕುತಂತ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು, ಆದರೆ ಕಾಂಗ್ರೆಸ್ ನಾಯಕರ ಕೂದಲು ಕೊಂಕಿಸಲು ಅಸಾಧ್ಯದ ಮಾತು ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು ಎಂದಿದೆ. ಇನ್ನ ಈ ಪೆನ್ ಡ್ರೈವ್ ಪ್ರಕರಣದ ಹಿಂದೆ ಬಿಜೆಪಿ ಹಾಗೂ ಬ್ರದರ್ ಸ್ವಾಮಿಯ ಬಹುದೊಡ್ಡ ಷಡ್ಯಂತ್ರ ಅಡಗಿದೆ. ಬಿಜೆಪಿ ಎಂಬ ಅನೈತಿಕ ರಾಜಕೀಯ ಪಕ್ಷಕ್ಕೆ ಕನಿಷ್ಠ ನೈತಿಕ ಪ್ರಜ್ಞೆ ಇಲ್ಲದಿರುವುದು ರಾಜಕೀಯ ಕ್ಷೇತ್ರಕ್ಕೆ ಕಳಂಕದಂತಾಗಿದೆ ಎಂದು ಆರೋಪ ಮಾಡಿದೆ.
ದೇವರಾಜೇಗೌಡ ಆಡಿಯೋ ವಾರ್
ಇನ್ನು ಈ ಪ್ರಕರಣದಲ್ಲಿ ಎಲ್ ಆರ್ ಶಿವರಾಮೇಗೌಡ ಹಾಗೂ ದೆವರಾಜೇಗೌಡ ನಡುವಿನ ಫೋನ್ ಸಂಭಾಷಣೆಯ ಆಡಿಯೋ ಬಿಡುಗಡೆಯೂ ಸಂಚಲನ ಮೂಡಿದೆ. ಈ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಕೈವಾಡ ಇದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನೇರವಾಗಿ ಆರೋಪ ಮಾಡಿದ್ದರು. ಆದರೆ ಇದನ್ನು ಡಿಕೆಶಿ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ದೇವರಾಜೇಗೌಡ ಆಡಿಯೋ ಬಿಡುಗಡೆ ಮಾಡಿದ್ದರು. ಈ ಆಡಿಯೋದಲ್ಲಿ ಡಿಕೆಶಿ ಜೊತೆಗೆ ಮಾತನಾಡಿದ್ದನ್ನು ಬಹಿರಂಗಪಡಿಸಿದ್ದರು. ಇದೀಗ ಮತ್ತೊಂದು ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋದಲ್ಲಿ ಎಲ್ ಆರ್ ಶಿವರಾಮೇಗೌಡ ಹಾಗೂ ದೇವರಾಜೇಗೌಡ ನಡುವಿನ ಸಂಭಾಷಣೆ ಇದೆ. ಇದರಲ್ಲಿ ಡಿಕೆ ಶಿವಕುಮಾರ್ ಅವರ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಈ ನಡುವೆ ಪೆನ್‌ಡ್ರೈವ್ ಪ್ರಕರಣದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ದೇವರಾಜೇಗೌಡ ಅವರನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ. ಆಡಿಯೋ ಬಿಡುಗಡೆಯ ಸಂದರ್ಭದಲ್ಲೇ ಅವರನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿರುವುದು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ. ಇದರ ಹಿಂದೆ ರಾಜಕೀಯ ಇದೆ ಎಂಬ ಆರೋಪವನ್ನು ಬಿಜೆಪಿ ಮಾಡುತ್ತಿದೆ.
ಒಂದು ಕಡೆಯಲ್ಲಿ ದೇವರಾಜೇಗೌಡ ಮೂಲಕ ಬಿಜೆಪಿ ಸಂಚು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದರೆ, ಮತ್ತೊಂದು ಕಡೆಯಲ್ಲಿ ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಪಾತ್ರದ ಬಗ್ಗೆ ಕೇಳಿಬರುತ್ತಿರುವ ಆರೋಪವನ್ನು ತಪ್ಪಿಸಲು ದೇವರಾಜೇಗೌಡ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಇನ್ನು ರಾಷ್ಟ್ರೀಯ ಮಟ್ಟದಲ್ಲೂ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ರಾಷ್ಟ್ರೀಯ ನಾಯಕರೂ ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಪ್ರಕರಣ ದಿನದಿಂದ ದಿನಕ್ಕೆ ತಿವ್ರ ರಾಜಕೀಯ ಟ್ವಿಸ್ಟ್ ಅಂಡ್ ಟರ್ನ್ಗಳನ್ನ ಪಡೆದುಕೊಳ್ತಾಯಿದೆ. ರಾಜ್ಯದಲ್ಲಿ ಎರಡು ಹಂತದ ಚುನಾವಣೆ ಮುಕ್ತಾಯಗೊಂಡರೂ ವೈಯಕ್ತಿಕ ನೆಲೆಯಲ್ಲಿ ಈ ಪ್ರಕರಣ ಸದ್ದು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಪಡೆದುಕೊಳ್ಳಲಿದೆ ಎಂಬುವುದು ಕುತೂಹಲ ಕೆರಳಿಸಿದೆ.
ಹಾಗಾದ್ರೆ ನಿಮ್ಮ ಪ್ರಕಾರ ಈ ಪೆನ್‌ಡ್ರೈವ್ ಪ್ರಕರಣದಿಂದ ಯಾರಿಗೆ ಲಾಭ.? ಯಾರಿಗೆ ನಷ್ಟ..?