ದಾವಣಗೆರೆ : ಮಾತಾಡೋಕೆ ಬರಲ್ಲ, ಅವರು ಅಡುಗೆ ಮಾಡೋಕೆ ಲಾಯಕ್ಕು ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಖಡಕ್ ತಿರುಗೇಟು ಕೊಟ್ಟಿದ್ದಾರೆ.
ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣ, ವಿದ್ಯಾನಗರ ಉದ್ಯಾನವನ ಹಾಗೂ ನಗರದ ಹಲವು ಮುಖಂಡರ ಮನೆಗಳಿಗೆ ಖುದ್ದು ಭೇಟಿ ನೀಡಿ ಮತಯಾಚಿಸಿ ಮಾತನಾಡಿದ ಅವರು, ನಾವು ಯಾರನ್ನೂ ಕೀಳಾಗಿ ನೋಡಬಾರದು, ಎಲ್ಲರಲ್ಲೂ ಅವರದ್ದೇ ಆದ ಶಕ್ತಿ, ಸಾಮರ್ಥ್ಯ ಇರುತ್ತದೆ. ಒನಕೆ ಒಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಸಾವಿತ್ರಿ ಬಾಯಿ ಫುಲೆ ಸೇರಿದಂತೆ ಅನೇಕ ಮಹಿಳೆಯರು ಇಂದಿಗೂ ಅವರ ಸಾಧನೆಯಿಂದ ಜೀವಂತವಾಗಿದ್ದಾರೆ. ಸಣ್ಣ ಮಕ್ಕಳಿಗೆ ಅವರ ಬಗ್ಗೆ ಕತೆಗಳನ್ನು ಹೇಳುತ್ತೇವೆ. ಅವರೆಲ್ಲ ಅಡುಗೆ ಮಾಡುವುದಕ್ಕೆ ಮಾತ್ರ ಲಾಯಕ್ಕಾಗಿದ್ದರೆ ಇತಿಹಾಸ ಪುಟಗಳಲ್ಲಿ ಅವರ್ಯಾರು ಇರುತ್ತಿರಲಿಲ್ಲ ಎಂದರು.
ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಸರಿಯಾದ ಉತ್ತರ ಕೊಡಬೇಕು ಅಂದರೆ ಸಾರ್ವಜನಿಕರು ನನ್ನನ್ನು ಗೆಲ್ಲಿಸುವ ಮೂಲಕ ಅಡುಗೆ ಮಾಡುವುದು ಮಾತ್ರವಲ್ಲ. ಸಂಸತ್ತಿನಲ್ಲಿ ಕೂತು ಅಧಿಕಾರವನ್ನು ಮಾಡ್ತಾರೆ, ಅಭಿವೃದ್ಧಿಯನ್ನೂ ಮಾಡ್ತಾರೆ ಅನ್ನೋದನ್ನು ಸಾಬೀತುಪಡಿಸಬೇಕು. ದಾವಣಗೆರೆ ಬಿಜೆಪಿಯ ಚುನಾವಣಾ ಫಲಿತಾಂಶ ಅವರಿಗೆ ಉತ್ತರವಾಗಬೇಕು ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಯುವಕ-ಯುವತಿಯರ ಜೊತೆ ಕ್ರಿಕೆಟ್ ಆಟವಾಡಿ, ಬೌಲಿಂಗ್ ಮಾಡಿದ ಗಾಯಿತ್ರಿ ಸಿದ್ದೇಶ್ವರ್ ಅವರು ಪ್ರಧಾನಿ ನರೇಂದ್ರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ವಿದ್ಯಾನಗರದಲ್ಲಿ ವಾಯು ವಿಹಾರಿಗಳ ಜೊತೆ ವಾಕ್ ಮಾಡಿ ಸಮಾಲೋಚನೆ ನಡೆಸಿದರು.
ಮಾಜಿ ಶಾಸಕ ಟಿ.ಗುರುಸಿದ್ದನಗೌಡ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ನಗರದ ಉದ್ಯಮಿ ರಮೇಶ್, ಮಂಜುನಾಥ ಕಾಲೇಜಿನ ಕಾರ್ಯದರ್ಶಿ ದ್ಯಾಮಣ್ಣನವರ್, ಪಾಲಿಕೆ ಸದಸ್ಯೆ ಗೀತಾ ಬಿ. ದಿಳ್ಯಪ್ಪ, ಲೋಕಿಕೆರೆ ಕೆಂಚಪ್ಪ, ಕುಮಾರ್ ಜುವೆಲರ್ಸ್ ಮಾಲೀಕರಾದ ಸಿ.ಕೆ.ಸಿದ್ದಪ್ಪ, ಶ್ಯಾಗಲೆ ಮಹಾದೇವಪ್ಪ, ಕಸಾಪ ಮಾಜಿ ಅಧ್ಯಕ್ಷರಾದ ಕುರ್ಕಿ ಮಂಜುನಾಥ್, ಮಹೇಶ್, ಡಾ.ಗಾಯಿತ್ರಿ, ಆಂಜನೇಯ ಬಡಾವಣೆ ಬೂತ್ ಅಧ್ಯಕ್ಷ ಅರುಣ್, ಛಾಯಾ ಶ್ರೀಧರ್, ವಿಜಯ್ ಕುಮಾರ್ ಸೇರಿದಂತೆ ಹತ್ತಾರು ಬೂತ್ ಅಧ್ಯಕ್ಷರು, ಕಾರ್ಯಕರ್ತರು, ಅಭಿಮಾನಿಗಳ ನಿವಾಸಕ್ಕೆ ಭೇಟಿ ನಿಡಿ ಚರ್ಚೆ ನಡೆಸಿ ಮತಯಾಚನೆ ಮಾಡಿದರು.
ಮಾಜಿ ಶಾಸಕ ಬಸವರಾಜ್ ನಾಯ್ಕ್ , ರೈತ ಮೋರ್ಚಾ ರಾಜ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಜಿ.ಎಸ್.ಅನಿತ್ ಕುಮಾರ್, ಬಿ.ಎಸ್.ಜಗದೀಶ್, ಲಕ್ಷ್ಮಣ್, ಪಾಲಿಕೆ ಸದಸ್ಯರಾದ ಗೀತ ದಿಳ್ಳಪ್ಪ, ವೀಣಾ ನಂಜಪ್ಪ, ಶಿವಕುಮಾರ್, ಪ್ರೇಮಮ್ಮ ನನ್ನಯ್ಯ ಸೇರಿದಂತೆ ಬಿಜೆಪಿ ಮುಂಖಡರು ಕಾರ್ಯಕರ್ತರು ಇದ್ದರು.