ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ನೀನು ಗೆದ್ದೇ ಗೆಲ್ಲುತ್ತೀಯಾ ಎಂದು ಗೊರವಯ್ಯ ಅವರು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಗೆ ಅಭಯ ನೀಡಿದರು.
ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಜಿ. ಬಿ. ವಿನಯ್ ಕುಮಾರ್ ಅವರು ಆಗಮಿಸಿದರು. ಈ ವೇಳೆ ಎದುರಾದ ಗೊರವಯ್ಯ ಅವರು ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಆಗುವ ಮುನ್ಸೂಚನೆ ಇದೆ. ಜಯ ಸಿಕ್ಕೇ ಸಿಗುತ್ತದೆ. ನಿನ್ನ ಕೆಲಸ ನೀನು ಮುಂದುವರಿಸು. ಈಗಾಗಲೇ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಿದ್ದೀಯಾ. ಎಲ್ಲಾ ಕಡೆಗಳಲ್ಲಿಯೂ ಚರ್ಚೆಯಾಗುತ್ತಿದೆ ಎಂದು ಗೊರವಯ್ಯ ಅವರು ಹೇಳಿದರು.
ಬನ್ನಿಕೋಡು ಗ್ರಾಮದಲ್ಲಿ ವಿನಯ್ ಕುಮಾರ್ ಜೊತೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿದ ಗೊರವಯ್ಯ ಅವರು ಈ ಭವಿಷ್ಯ ಹೇಳುತ್ತಿದ್ದಂತೆ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು, ಗ್ರಾಮಸ್ಥರು ಪಕ್ಷೇತರ ಅಭ್ಯರ್ಥಿ ಪರ ಜೈಕಾರ ಹಾಕಿದರು. ಘೋಷಣೆಗಳನ್ನು ಕೂಗಿ ಸಂತಸಪಟ್ಟರು.
ನಿನ್ನಲ್ಲಿ ಸಾಮರ್ಥ್ಯ ಇದೆ. ಶಕ್ತಿ ಇದೆ. ಹೋರಾಡುವ ಛಲ ಇದೆ. ನೀನು ಗೆದ್ದರೆ ಹೊಸ ಭವಿಷ್ಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಸಂಬಂಧಿಕರು, ಸ್ನೇಹಿತರು, ಹಿತೈಷಿಗಳು ಬೆಂಬಲ ನೀಡಿದ್ದಾರೆ. ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಚುನಾವಣೆ ಎದುರಿಸುವ ಎಲ್ಲಾ ರೀತಿಯ ಸಾಮರ್ಥ್ಯ ಕಂಡು ಬರುತ್ತಿದೆ. ಮುಖದಲ್ಲಿ ಗೆಲುವಿನ ವಿಶ್ವಾಸ ಕಾಣುತ್ತಿದೆ. ಮುಂದಿಟ್ಟ ಹೆಜ್ಜೆ ಹಿಂದೆ ಇಡಬೇಡ. ಮುಂದುವರಿ. ಖಂಡಿತವಾಗಿಯೂ ಬೀರಲಿಂಗೇಶ್ವರ ಆಶೀರ್ವಾದ ಮಾಡುತ್ತಾನೆ. ಗೆಲುವು ನಿನ್ನದಾಗುತ್ತದೆ ಎಂದು ಗೊರವಯ್ಯ ಹೇಳಿದರು.