ನಂದೀಶ್ ಭದ್ರಾವತಿ, ಶಿವಮೊಗ್ಗ
ಉಕ್ಕಿನ ನಗರಿ ಎಂದೇ ಖ್ಯಾತಿ ಪಡೆದಿರುವ ಭದ್ರಾವತಿಯಲ್ಲಿ ಈಗ ವೀರಶೈವ ಮಹಾಸಭಾ ಲಿಂಗಾಯಿತ ಚುನಾವಣೆ ಅಖಾಡ ಜೋರಾಗಿದೆ.
ಜು.21ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಹಳೇನಗರದ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 1525 ಮಂದಿ ಮತದಾನದ ಹಕ್ಕು ಹೊಂದಿದ್ದು, ಸಂಜೆ 5 ಗಂಟೆ ನಂತರ ಮತ ಎಣಿಕೆ ನಡೆಯಲಿದೆ.
ಅಧ್ಯಕ್ಷ ಸ್ಥಾನಕ್ಕೆ ವಾಗೀಶ್ ಜೇಡಿಕಟ್ಟೆ ಮತ್ತು ವಿಜಯ್ ಕುಮಾರ್ ಸ್ಪರ್ಧಿಸಿದ್ದು, ಅಖಾಡದಲ್ಲಿಪಟ್ಟು ಹಾಕಲು ಇಬ್ಬರು ಕೂಡ ಜೋರಾಗಿದ್ದಾರೆ.
ಈ ಬಾರಿ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. ಸದ್ಯ ಭದ್ರಾವತಿಯಲ್ಲಿ ವೀರಶೈವ ಮಹಾಸಭಾ ಚುನಾವಣೆ ಮಾತುಗಳೇ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಗುಪ್ತ ಸಭೆ, ಮಾತುಕತೆ, ರಾಜಕೀಯ ಮುಖಂಡರ ಭೇಟಿ, ಮನೆ ಮನೆಗೆ ಮತಪ್ರಚಾರ ಸೇರಿದಂತೆ ಇತರೆ ತಂತ್ರಗಳು ಜೋರಾಗಿಯೇ ನಡೆಯುತ್ತಿದೆ. ಅದರೊಳಗೂ ಕಾಂಗ್ರೆಸ್, ಬಿಜೆಪಿ ಎಂಬ ಸಣ್ಣ ಹುಳು ಕೂಡ ತೂರಿಕೊಂಡಿದೆ. ಅತ್ತ ಸಂಸದ ಬಿ.ಬೈ.ರಾಘವೇಂದ್ರ, ಇತ್ತ ಬಿ.ಕೆ.ಸಂಗಮೇಶ್ ಇಬ್ಬರು ಕೂಡ ಲಿಂಗಾಯಿತ ಮುಖಂಡರಾಗಿರುವ ಕಾರಣ ಇಬ್ಬರು ರಾಜಕೀಯ ನಾಯಕರು ಸಹ ಭದ್ರಾವತಿ ವೀರಶೈವ ಮಹಾಸಭಾ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ ಇಲ್ಲಿ ಪಕ್ಷ ಬಾರದೇ ಹೋದರೂ, ವೈಯಕ್ತಿಕ ಪ್ರತಿಷ್ಠೆ ಮಹತ್ವ ಪಡೆದುಕೊಂಡಿದೆ.
ಲಿಂಗಾಯಿತ ಸಮಾಜ ಸಂಘಟನೆಗಾಗಿ ಹಾನಗಲ್ ಕುಮಾರಸ್ವಾಮಿ ವೀರಶೈವ ಲಿಂಗಾಯಿತ ಮಹಾಸಭಾ ಸ್ಥಾಪಿಸಿದ್ದರು. ಅದರಂತೆ ಇಲ್ಲಿ ನಾಯಕರು ತಮ್ಮ ಅಸ್ಥಿತ್ವ ಕಾಪಾಡಾಡಿಕೊಳ್ಳಲು ಸೆಣಸಾಟ ನಡೆಸುತ್ತಿದ್ದಾರೆ.
ಈ ಹಿಂದೆ 20 ನಿರ್ದೇಶಕ ಸ್ಥಾನಕ್ಕೆ 43 ಮಂದಿ ನಾಮಪತ್ರ ಸಲ್ಲಿಸಿದ್ದರು. ಮಹಾಸಭಾ ತಾಲೂಕು ಘಟಕದಲ್ಲಿ ಅಧ್ಯಕ್ಷ ಸ್ಥಾನ ಹಾಗೂ 20 ನಿರ್ದೇಶಕ ಸ್ಥಾನವಿದ್ದು, ಈ ಪೈಕಿ 7 ನಿರ್ದೇಶಕ ಸ್ಥಾನ ಮಹಿಳಾ ಮೀಸಲಾತಿ ಹೊಂದಿವೆ. ಚುನಾವಣೆಗೆ ಸ್ಪರ್ಧಿಸಿ ಒಟ್ಟು 28 ಪುರುಷ ಹಾಗು 15 ಮಹಿಳೆಯರು ನಾಮಪತ್ರ ಸಲ್ಲಿಸಿದ್ದರು.
ಇದೇ ಮೊದಲ ಬಾರಿಗೆ ಚುನಾವಣೆ
ಭದ್ರಾವತಿಯಲ್ಲಿ ಸುಮಾರು ವರ್ಷಗಳ ಕಾಲ ವೀರಶೈವ ಮಹಾಸಭಾ ಚುನಾವಣೆ ಬಹುತೇಕ ಅವಿರೋಧವಾಗಿಯೇ ನಡೆಯುತ್ತಿತ್ತು. ಅದರಂತೆ ಪ್ರಥಮ ಅಧ್ಯಕ್ಷರಾಗಿ ಬೆಲ್ಲದವರಾಜಣ್ಣ, ಸಿದ್ದಲಿಂಗಯ್ಯ, ನಂದಿನಿ ಮಲ್ಲಿಕಾರ್ಜುನ್, ಸುರೇಶಯ್ಯ, ಎನ್.ಸಿ.ಪ್ರಕಾಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.ಅಲ್ಲದ
ಈ ಹಿಂದೆ ಪರಿಷತ್ ಅಧ್ಯಕ್ಷ ಹಾಗು ನಿರ್ದೇಶಕ ಸ್ಥಾನಗಳಿಗೆ ಬಹುತೇಕ ಅವಿರೋಧ ಆಯ್ಕೆ ನಡೆಯುತ್ತಿತ್ತು. ಆದರೆ ಈ ಬಾರಿ ಪೈಪೋಟಿ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಭದ್ರಾವತಿಯಲ್ಲಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅದರಂತೆ ವಾಗೀಶ್ ಜೇಡಿಕಟ್ಟೆ ಮತ್ತು ವಿಜಯ್ ಕುಮಾರ್ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ.
ಶಾಸಕ ಸಂಗಮೇಶ್ ಸಂಧಾನ ನಡೆಸಿದರೂ ಫಲವಿಲ್ಲ
ಶಾಸಕ ಸಂಗಮೇಶ್ ಇಬ್ಬರ ನಡುವೆ ಸಂಧಾನ ನಡೆಸಲು ಸಾಕಷ್ಟು ಪ್ರಯತ್ನವಾಗಲಿಲ್ಲ. ಅಂತಿಮವಾಗಿ ಚುನಾವಣೆಯೇ ನಡೆಯಲಿ ಎಂಬ ನಿರ್ಧಾರಕ್ಕೆ ಬರಲಾಗಿದ್ದು, ಈಗ ಚುನಾವಣೆ ಅಖಾಡ ಸಿದ್ದವಾಗಿದ್ದು, ಸ್ಪರ್ಧಾಳುಗಳು ಮತ ಬೇಟೆಯಲ್ಲಿ ತೊಡಗಿದ್ದಾರೆ.
ಅಡ ಕತ್ತರಿಯಲ್ಲಿ ಶಾಸಕ ಸಂಗಮೇಶ್
ಶಾಸಕ ಸಂಗಮೇಶ್ ಗೆ ಇಬ್ಬರು ಸ್ಪರ್ಧಾಳುಗಳು ಬೇಕಾಗಿರುವ ಕಾರಣ ಯಾರಿಗೆ ಬೆಂಬಲ ನೀಡಬೇಕೆಂಬ ಗೊಂದಲಕ್ಕೆ ಬಿದ್ದಿದ್ದಾರೆ. ಇಲ್ಲಿ ಶಾಸಕ ಸಂಗಮೇಶ್ ಬೆಂಬಲ ಯಾರಿಗೆ ಇರುತ್ತದೆಯೋ ಅವರು ಜಯಗಳಿಸುವ ಸಾಧ್ಯತೆ ಹೆಚ್ಚಿದ್ದು, ಇನ್ನು ಸಾವಿರ ರೂಪಾಯಿ ಮೆಂಬರ್ ಆಗಿರುವ ಮತದಾರರು ತಾಲೂಕಿನಲ್ಲಿಯೂ ಮತದಾನ ಮಾಡುವ ಅರ್ಹತೆ ಇದ್ದು, ಇವರ ಬೆಂಬಲವೂ ಬೇಕಿದೆ.
ಸ್ಪರ್ಧೆಯಿಂದ ದೂರ ಸರಿದ ಹಿಂದಿನ ಅಧ್ಯಕ್ಷ ಪ್ರಕಾಶ್
ಈ ಹಿಂದಿನ ಅಧ್ಯಕ್ಷ ಪ್ರಕಾಶ್ ಈ ಬಾರಿ ಅಧ್ಯಕ್ಷಿಯ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಇವರಿಗೂ ಸ್ಪರ್ಧೆ ಮಾಡುವ ಉತ್ಸಾಹವಿದ್ದರೂ, ಬೆಂಬಲ ಸಿಗದ ಕಾರಣ ಅವರು ಈ ಬಾರಿ ಸ್ಪರ್ಧೆ ಮಾಡಿಲ್ಲ. ಬದಲಾಗಿ ಅವರಿಗೆ ಬೇಕಾದವರ ಪರ ಪ್ರಚಾರ ನಡೆಸುತ್ತಿದ್ದಾರೆ.
ಸ್ಪರ್ಧಾಳು ವಾಗೀಶ್ ಅಜೆಂಡಾ ಏನು?
ಸ್ಪರ್ಧಾಳು ವಾಗೀಶ್ ತನ್ನ ವೈಯಕ್ತಿಕ ಅಜೆಂಡಾ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಪ್ರತ್ಯೇಕ ಸಭಾ ಭವನ, ಆರೋಗ್ಯ ವಿಮೆ, ವೀರಶೈವ ಲಿಂಗಾಯಿತ ಮಹಾಸಭಾದ ಎಲ್ಲ ಒಳ ಪಂಗಡಗಳಿಗೆ 2 ಎ ಮೀಸಲಾತಿಗಾಗಿ ಹೋರಾಟ, ಬಡ ಮಕ್ಕಳ ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ, ರಾಜಕೀಯ, ಸಾಮಾಜಿಕ, ಧಾರ್ಮಿಕವಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿ ಮತದಾರರನ್ನು ಸೆಳೆಯುತ್ತಿದ್ದಾರೆ.
ಮನೆ-ಮನೆಗೆ ಭೇಟಿ
ಒಟ್ಟು 1135 ಮತದಾರರು ಇದ್ದು, ತಂಡೋಪತಂಡವಾಗಿ ಮತದಾರರ ಮನೆಗಳಿಗೆ ಅಭ್ಯರ್ಥಿಗಳು ಹೋಗುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಮತ ಬೇಟೆಗೆ ಹೋಗುಬ ಅಭ್ಯರ್ಥಿಗಳು ತಂಡವಾಗಿ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಮತದಾರರನ್ನು ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ. ಒಟ್ಟಾರೆ ಭದ್ರಾವತಿ ವಿಧಾನಸಭಾದ ವೀರಶೈವಮಹಾಸಭಾ ಲಿಂಗಾಯಿತ ಅಧ್ಯಕ್ಷ ಚುನಾವಣೆಗೆ ಈಗ ಕಿಕ್ ಬರುತ್ತಿದ್ದು, ಪ್ರತಿಷ್ಠೆಗಾಗಿ ಮತದಾರ ಪ್ರಭು ಓಲೈಕೆ ನಡೆಯುತ್ತಿದ್ದು ಕ್ರ್ಲೈಮೆಕ್ಸ್ ನಲ್ಲಿ ಏನಾಗುತ್ತದೆ ಎಂದು ಕಾದುನೋಡಬೇಕಿದೆ.