


ಬೆಂಗಳೂರು : ಮನುಷ್ಯ ಗಡ್ಡೆಗೆಣಸುಗಳನ್ನು ತಿಂದುಕೊಂಡಿದ್ದ ಕಾಲದಲ್ಲಿಯೂ ಯಾವುದನ್ನು ತಿನ್ನಬೇಕು? ಯಾವುದನ್ನು ತಿನ್ನಬಾರದು? ಎಂಬ ಜ್ಞಾನ ಬೇಕೇ ಬೇಕಿತ್ತು. ಕಾಡಿನಲ್ಲಿ ಸಿಗುವ ಎಲ್ಲಾ ಗೆಡ್ಡೆಗೆಣಸು ಅಥವಾ ಹಣ್ಣುಗಳು ತಿನ್ನಲು ಯೋಗ್ಯವಾದವುಗಳಲ್ಲ. ಕೆಲವು ವಿಷಪೂರಿತ ಗಡ್ಡೆಹಣ್ಣುಗಳೂ ಇವೆ. ಹಾಗಾಗಿ,ಯಾವುದು ಯೋಗ್ಯ ಎಂಬುದನ್ನು ಅರಿತುಕೊಳ್ಳುವ ಜ್ಞಾನ ಬೇಕೇ ಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಧುಸೂಧನ್ ಭದ್ರಾವತಿ ಅಭಿಪ್ರಾಯ ಪಟ್ಟರು.
ನಗರದ ರಾಜಾಜಿನಗರದಲ್ಲಿನ ಸರಕಾರಿ ಶಾಲೆಯಲ್ಲಿ ಸುಮಧು ಟ್ರಸ್ಟ್ ಹಮ್ಮಿಕೊಂಡಿದ್ದ ಪುಸ್ತಕ ವಿತರಣೆಯಲ್ಲಿ ಭಾಗವಹಿಸಿ ಮಾತನಾಡಿದರು

ಬದುಕಿನ ವಿವೇಚನೆ ತಿಳಿಸುವುದೇ ವಿದ್ಯೆ. ವಿದ್ಯೆ ಎಂಬುದು ನಮ್ಮೊಳಗೆ ನಾವು ಬೆಳೆಸಿಕೊಳ್ಳುವ, ನಮ್ಮನ್ನು ನಾವು ಬೆಳೆಸಿಕೊಳ್ಳುವ ವಿಶೇಷವಾದ ಬುದ್ದಿಯ ರೂಪ. ಬದುಕನ್ನು ರೂಪಿಸಿಕೊಳ್ಳಲು ಬೇಕಾಗುವ ವಿಶೇಷವಾದ ಪರಿಕರ ಈ ವಿದ್ಯೆ ಎಂದರು.

ಸಮಾಜದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಆದರೆ ವಿದ್ಯೆ ಸಂಪಾದನೆ ಮಾಡೋದಕ್ಕೆ ಆಗೋದಿಲ್ಲ. ಕೋಟಿ ಸಂಪಾದನೆಕ್ಕಿಂತ ಮೇಟಿ ವಿದ್ಯೆಗೆ ಜ್ಞಾನಾರ್ಜನೆ ಬೇಕು. ಹಾಗಾಗಿ ಮಕ್ಕಳು ಈಗಿನಿಂದಲೇ ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಸುಮಧು ಟ್ರಸ್ಟ್ ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಬದಲಾಗಿ ಸಾಮಾಜಿಕ ಕಳಕಳಿಯಿಂದ ಉಚಿತ ಪುಸ್ತಕ ನೀಡಲಾಗುತ್ತಿದೆ. ಇನ್ನು ಒಂದು ಸಂಸ್ಕಾರ, ಒಂದು ಸನ್ನಡತೆ, ಒಂದು ಸದ್ವಿಚಾರ, ಒಂದು ಸುಖಜೀವನ, ಒಂದು ಸುಂದರ ದಾಂಪತ್ಯ, ಒಂದು ಸರಳ ಸಂಸಾರ, ಒಂದು ಶಕ್ತಿಯುತ ಸಮಾಜ, ಒಂದು ವಿಶೇಷವಾದ ದೇಶ ಆಮೇಲೆ ಜಗತ್ತು ಎಲ್ಲವಕ್ಕೂ ವಿದ್ಯೆ ಎಂಬ ಸಾಧನ ಅಗತ್ಯ ಎಂದು ಮಕ್ಕಳಿಗೆ ತಿಳಿ ಹೇಳಿದರು.
ಗೆಲುವಿಗೆ ಮೊದಲು ಆತ್ಮವಿಶ್ವಾಸ ಬೇಕು. ಈ ಆತ್ಮವಿಶ್ವಾಸ ಹೆಚ್ಚಲು ಅಥವಾ ಸರಿಯಾದ ಮಾರ್ಗದಲ್ಲಿ ಗುರಿ ತಲುಪಲು ವಿದ್ಯೆ ಬೇಕು. ಈ ವಿದ್ಯೆ ಬದುಕನ್ನು ಹಸನಾಗಿಸುವಲ್ಲಿ ಒಂದಲ್ಲ, ಸಾವಿರ ದಾರಿ ತೋರುತ್ತದೆ. ವಿದ್ಯೆಯ ವಿಶೇಷ ಗುಣವೆಂದರೆ ಅದು ಕೇವಲ ಒಬ್ಬನ ಜೀವನವನ್ನು ಕಟ್ಟಿಕೊಡುವುದಷ್ಟೇ ಅಲ್ಲ, ಒಂದು ದೇಶದ ಬೆಳವಣಿಗೆಯನ್ನೂ ಆ ದೇಶದ ಸಂಸ್ಕೃತಿಯನ್ನೂ ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ವಿದ್ಯೆ ಸಂಪತ್ತೂ ಹೌದು ಸಂಸ್ಕಾರವೂ ಹೌದು.
ವಿದ್ಯೆ ಎಂಬುದು ಮನುಷ್ಯನ ವಿಶೇಷವಾದ ರೂಪ;
ಮತ್ತು ಅದು ಅವನ ಬಚ್ಚಿಡಲ್ಪಟ್ಟ ಹಣ. ವಿದ್ಯೆಯೇ ಅವನಿಗೆ ಸುಖಾಸುಖಗಳನ್ನೂ ಕೀರ್ತಿಯನ್ನೂ ಉಂಟು ತಂದುಕೊಡುತ್ತದೆ. ಅದು ಅವನ ಗುರುಗಳಿಗೆ ಗುರು! ಪರದೇಶಗಳಿಗೆ ಹೊರಟಾಗ ಅದೇ ಅವನ ಬಂಧು. ಅದೇ ಅವನಿಗೆ ಪರದೈವ.ವಿದ್ಯೆ ಇಲ್ಲದವನು ಪಶುವಿಗೆ ಸಮಾನ. ಮುಂದಿನ ದಿನಗಳಲ್ಲಿ ನಿಮ್ಮಲ್ಲಿ ಯಾರು ಬೇಕಾದರೂ ಉನ್ನತ ಹುದ್ದೇಗೆ ಏರಬಹುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸುಮಧು ಟ್ರಸ್ಟ್ ಖಜಾಂಜಿ ಸುಮ ಮಧುಸೂದನ್, ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಸ್ಥಳೀಯ ಮುಖಂಡರು, ಗಂಗಪ್ಪ, ಕದಿರಪ, ತಿರುಮಲಪ್ಪ, ನರಸಿಂಹ ಹಾಗೂ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.