ಶಿವಮೊಗ್ಗ: ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ಎಲ್ಲರೂ ಶಿಕ್ಷಣ ಪಡೆಯುವುದು ತುಂಬಾ ಅವಶ್ಯಕ ಎಂದು ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಿಂದ ಮಹರ್ಷಿ ಹಾತಿರಾಮ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನ ಅಕ್ಷರ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮೂಲ ಶಿಕ್ಷಣ ಮತ್ತು ಸಾಕ್ಷರತೆ ಕುರಿತು ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಹೆಣ್ಣು ಮಗುವಿಗೆ ಶಿಕ್ಷಣ ನೀಡುವುದು ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಎಂದು ತಿಳಿಸಿದರು.
ಶಿಕ್ಷಣ ಪಡೆಯುವುದರಿಂದ ಭವಿಷ್ಯದಲ್ಲಿ ನಿಮ್ಮ ಆಸಕ್ತಿ ಇರುವ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಹಕಾರಿಯಾಗುತ್ತದೆ. ಹೊಸ ಹೊಸ ಆಲೋಚನೆಗಳ ಮೂಲಕ ಉತ್ತಮ ದೇಶ ನಿರ್ಮಾಣ ಮಾಡುವಲ್ಲಿ ನಿಮ್ಮ ಕೊಡುಗೆ ನೀಡಬಹುದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ರೋಟರಿ ಸಂಸ್ಥೆಯು ಮಾಡುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಅವರು ರೋಟರಿ ಸೇವೆಗಳ ಕುರಿತು ಮಾತನಾಡಿ, ರೋಟರಿ ಸಂಸ್ಥೆಯು ಯಾವುದೇ ಫಲಾಪೇಕ್ಷೆಯಿಲ್ಲದೇ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಕಾರ್ಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಎಚ್.ಟಿ. ಗಿರೀಶ್ ಮಾತನಾಡಿ, ರೋಟರಿ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ, ಮಾಜಿ ಶಾಸಕ ಅಶೋಕ್ ನಾಯಕ್, ರೋಟರಿ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ಬಿ.ವಿ.ಈಶ್ವರ್, ರವಿ ಕೋಟೋಜಿ, ಧರ್ಮೇಂದ್ರ ಸಿಂಗ್, ಜೆ.ಪಿ.ಚಂದ್ರು, ಕಾರ್ಯಕ್ರಮ ಸಂಯೋಜಕರಾದ ಬಸವರಾಜ್, ರಾಜಶ್ರೀ ಬಸವರಾಜ್, ದೀಪಾ ಜಯಶೀಲ ಶೆಟ್ಟಿ, ಅನ್ಸ್ ಕ್ಲಬ್ಬಿನ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.