ದಾವಣಗೆರೆ:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ನಡೆಯುವ ಇ–ಟೆಂಡರ್ ಪ್ರಕ್ರಿಯೆಯನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಜಿಲ್ಲಾ ರೈತರ ಒಕ್ಕೂಟದ ಸದಸ್ಯರು ಮನವಿ ಮಾಡಿದ್ದಾರೆ.
ಎಪಿಎಂಸಿ ಆವರಣದಲ್ಲಿ ಇ–ಟೆಂಡರ್ ವ್ಯವಸ್ಥೆ ಜಾರಿಗೊಳಿಸಿದ ಪರಿಣಾಮವಾಗಿ ಭತ್ತ ಮತ್ತು ಮೆಕ್ಕೆಜೋಳದ ಬೆಲೆ ಏರಿಕೆ ಕಂಡಿದೆ. ಆದರೆ, ಈ ಫಲ ಗ್ರಾಮೀಣ ಪ್ರದೇಶದಲ್ಲಿ ವಹಿವಾಟು ನಡೆಸುವ ರೈತರಿಗೆ ಸಿಗುತ್ತಿಲ್ಲ. ಗ್ರಾಮದಲ್ಲಿಯೇ ಧಾನ್ಯ ಮಾರಾಟ ಮಾಡುವ ರೈತರಿಗೂ ಈ ಸೌಲಭ್ಯ ಸಿಗಬೇಕು ಎಂದು ಒಕ್ಕೂಟದ ನಿಯೋಗ ಎಪಿಎಂಸಿ ಕಾರ್ಯದರ್ಶಿ ಎಚ್.ಸಿ.ಎಂ.ರಾಣಿ ಅವರಿಗೆ ಸೋಮವಾರ ಕೋರಿಕೆ ಸಲ್ಲಿಸಿತು.
ಗ್ರಾಮೀಣ ಪ್ರದೇಶದ ಕಣ ಅಥವಾ ಕಾಂಕ್ರೀಟ್ ರಸ್ತೆಗಳಲ್ಲಿ ರಾಶಿ ಹಾಕಿರುವ ಧಾನ್ಯದ ಮಾದರಿ ಸಂಗ್ರಹಿಸಿ ನಿತ್ಯ ಬೆಳಿಗ್ಗೆ 9ಕ್ಕೆ ಎಪಿಎಂಸಿಗೆ ತರುವ ವ್ಯವಸ್ಥೆ ರೂಪಿಸಬೇಕು. ಇದಕ್ಕೆ ಸಂಖ್ಯೆ ನಿಗದಿಪಡಿಸಿ ಇ–ಟೆಂಡರ್ ಪ್ರಕ್ರಿಯೆಗೆ ಒಳಪಡಿಸಬೇಕು ಎಂದರು.
ಜಿಲ್ಲಾ ರೈತರ ಒಕ್ಕೂಟದ ನಿಯೋಗದಲ್ಲಿ ಕೊಳೇನಹಳ್ಳಿ ಬಿ.ಎಂ.ಸತೀಶ್, ಬೆಳವನೂರು ನಾಗೇಶ್ವರರಾವ್, ಲೋಕಿಕೆರೆ ನಾಗರಾಜ್, ವಿಜಯಲಕ್ಷ್ಮಿ ಮಾಚಿನೇನಿ, ಎ.ವೈ.ಪ್ರಕಾಶ್, ಧನಂಜಯ ಕಡ್ಲೆಬಾಳ್, ಗೋಣಿವಾಡ ಮಂಜುನಾಥ, ರುದ್ರಕಟ್ಟೆ ಪರಮೇಶ್ವರಪ್ಪ, ಮಾಜಿ ಮೇಯರ್ ವಸಂತಕುಮಾರ್ ಇದ್ದರು