ದಾವಣಗೆರೆ : ದೇವನಗರಿ ದೇವತೆ ದುಗ್ಗಮ್ಮ ಜಾತ್ರೆ ಆರಂಭಕ್ಕೆ ಇಂದು (ಮಾ.17) ಅಧಿಕೃತವಾಗಿ ಚಾಲನೆ ಸಿಗಲಿದೆ. ಭಾನುವಾರ ರಾತ್ರಿ ಜಾತ್ರೆ ನಿಮಿತ್ತ ಸಾರು ಹಾಕಲಾಗುತ್ತದೆ. ಬೆಳಗಿನಿಂದಲೇ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.
ಎರಡು ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯಲಿದ್ದು, ನೆಂಟರಿಸ್ಟರು ಈಗಾಗಲೇ ದಾವಣಗೆರೆಗೆ ಬರುತ್ತಿದ್ದಾರೆ.ಈಗಾಗಲೇ ಸಿದ್ಧತೆ ನಡೆಸಿರುವ ಜನ ಜಾತ್ರೆ ಸಾರು ಹಾಕುವುದನ್ನು ಕಾಯುತ್ತಿದ್ದಾರೆ. ಸಾರು ಹಾಕಿದ ನಂತರ ಜಾತ್ರಾ ಪೂಜಾ ಚಟುವಟಿಕೆ ಶುರುವಾಗಲಿವೆ. ಸೋಮವಾರ ಬಿಡುವು ಇರಲಿದೆ. ಮಾ.19ರ ಮಂಗಳವಾರ ಬೆಳಗ್ಗೆ ದಾಸೋಹದ ಮಹೋಪಕರಣ ಸಮಾರಂಭೋತ್ಸವ ಹಾಗೂ ರಾತ್ರಿ ಶ್ರೀಅಮ್ಮನವರಿಗೆ ಭಕ್ತಿ ಸಮರ್ಪಣೆ ಇರಲಿದೆ. ತದ ನಂತರ ರಾತ್ರಿ 9 ಗಂಟೆಯಿಂದ ಸಾಂಸ್ಕೃತಿಕ ಮೇಳ, ಡೊಳ್ಳು ಕುಣಿತ, ಸಿಡಿ ಮದ್ದಿನ ಪ್ರದರ್ಶನ ಜತೆಗೆ ಬೆಳ್ಳಿ ರಥದಲ್ಲಿ ಅಮ್ಮನವರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ದುರ್ಗಾಂಬಿಕಾ ದೇವಿ ಜಾತ್ರೆ ಭಾನುವಾರ ರಾತ್ರಿ ಜಾತ್ರೆಗೆ ಸಾರು ಹಾಕಲಾಗುತ್ತದೆ. ಬುಧವಾರ ಬೆಳಗ್ಗೆ ಚರಗ ಚೆಲ್ಲುವುದು, ಮಹಾ ಪೂಜೆ ಸಮಾರಂಭ ನಡೆಯಲಿದೆ. ಮಂಗಳವಾರ ರಾತ್ರಿ ನಡೆಯುವ ದೇವಿಯ ಮೆರವಣಿಗೆ ವೇಳೆಗಾಗಲೇ ಭಕ್ತರು ಜಮಾಯಿಸಿ ಜಾತ್ರೆ ಕಳೆಗಟ್ಟಿರುತ್ತದೆ. ರಾತ್ರಿಯಿಡಿ ನಾನಾ ಧಾರ್ಮಿಕ ಆಚರಣೆ ನಡೆಯಲಿವೆ.
ಮಾ.20 ಕ್ಕೆ ಚರಗ ಚೆಲ್ಲುವ ಕಾರ್ಯಕ್ರಮ
ಮಾ.20ರ ಬುಧವಾರ ಮುಂಜಾನೆಯೇ ದುಗ್ಗಮ್ಮ ಮಹಾಪೂಜಾ ಸಮಾರಂಭ ನಡೆಯಲಿದೆ. ಚರಗ ಚೆಲ್ಲುವ ಕಾರ್ಯ ನಡೆಯಲಿದೆ. ಭಕ್ತರ ಮನೆಗಳಲ್ಲಿ ಮಾಂಸಾಹಾರ ಜಾತ್ರೆಯ ಊಟಕ್ಕೆ ಸಿದ್ಧತೆ ಆರಂಭವಾಗಿ ಸಂಜೆ ಹೊತ್ತಿಗೆ ಇಡೀ ಊರು ಜಾತ್ರೆಯಲ್ಲಿ ಮುಳುಗೇಳಲಿದೆ. ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನಕ್ಕೆ ದೇವಳಕ್ಕೆ ಆಗಮಿಸುವರು. ಉರುಳು ಸೇವೆ ಸೇರಿದಂತೆ ನಾನಾ ಆಚರಣೆ ಜರುಗಲಿದ್ದು ಇದಕ್ಕೆ ಎಲ್ಲ ಸಿದ್ಧತೆಗಳು ಈಗಾಗಲೇ ಆರಂಭ ಆಗಿದ್ದು, ಇಡೀ ದಾವಣಗೆರೆ ದೇವಿ ದರ್ಶನ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ.