ದಾವಣಗೆರೆ : ಮಂಡ್ಯ ರಾಜಕಾರಣ ಅಂದ್ರೆ ಇಡೀ ಇಂಡ್ಯಾನೇ ತಿರುಗಿ ನೋಡುತ್ತೆ ಅನ್ನೋ ಮಾತಿದೆ. ಅದೇ ರೀತಿ 2019ರಲ್ಲಿ ಅಂದಿನ ಸಿಎಂ ಆಗಿದ್ದ ಹೆಚ್ಡಿಕೆ ತಮ್ಮ ಮಗನನ್ನ ಅಖಾಡಕ್ಕಿಳಿಸಿದ್ರೆ, ನಟ ಅಂಬರೀಷ್ ಅವರು ತೀರಿಕೊಂಡಿದ್ದ ಅನುಕಂಪದ ಅಲೆಯಲ್ಲಿ ಸುಮಲತಾ ಅವರು ಸ್ಪರ್ಧಿಸಿದ್ರು.
ಆ ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೂ ಸುಮಲತಾ ಗೆದ್ದು ಬೀಗಿದ್ರು. ಅಂದಿನ ಸಿಎಂ ಹೆಚ್ಡಿಕೆ ಮೀಸೆ ಮಣ್ಣಾಗಿತ್ತು. ಆದ್ರೀಗ ಬದಲಾದ ಕಾಲಘಟ್ಟದಲ್ಲಿ ಎಲ್ಲವೂ ಬದಲಾಗಿದೆ. ಸುಮಲತಾ ಕಣದಿಂದ ಹೊರಗಿದ್ದು, ವಾರ್ ಒನ್ ಸೈಡ್ ಆಗೋಗಿದೆ. ಗೆಲ್ಲೋದು ನಾನೇ.. ರೊಟ್ಟಿ ತಾನಾಗೇ ಜಾರಿ ತುಪ್ಪಕ್ಕೆ ಬಿದ್ದಿದೆ ಅಂತೇಳಿ ಮಾಜಿ ಸಿಎಂ ಹೆಚ್ಡಿಕೆ ಭಾವಿಸಿರಬಹುದು.
ಆದ್ರೆ ಸುಮಲತಾ ಸೈಡ್ಕೊಟ್ರೂ, ಮಂಡ್ಯ ಜನ ಹೆಚ್ಡಿಕೆಗೆ ಗೇಟ್ಪಾಸ್ ಕೊಡ್ತಾರಾ ಅನ್ನೋ ಅನುಮಾನ ಇದೀಗ ದುತ್ ಅಂತ ಎದ್ದು ಕೂತಿದೆ. ಹಾಗಾದ್ರೆ ಮಂಡ್ಯದಲ್ಲಿ ಮಾಜಿ ಸಿಎಂಗೆ ಸೋಲಿನ ಭೀತಿ ಶುರುವಾಗಿರೋದ್ಯಾಕೆ ಗೊತ್ತಾ.?
ಮಂಡ್ಯ.. ಈ ಹಿಂದೆ ಜೆಡಿಎಸ್ನ ಭದ್ರಕೋಟೆಯಾಗಿತ್ತು. ಆದ್ರೆ 2019ರಲ್ಲಿ ಜೆಡಿಎಸ್ ಭದ್ರಕೋಟೆಯನ್ನ ಛಿದ್ರ ಮಾಡಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದು ಬೀಗಿದ್ರು.. ಆ ಗೆಲುವು ಜೆಡಿಎಸ್ ನಾಯಕರಿಗೆ ಅರಗಿಸಿಕೊಳ್ಳೋದಕ್ಕೆ ಸಾಧ್ಯವೇ ಆಗಿರ್ಲಿಲ್ಲ. ಅಂಥದ್ದೊಂದು ಆಘಾತವನ್ನ ಸುಮಲತಾ ಕಳೆದ ಚುನಾವಣೆಯಲ್ಲಿ ಕೊಟ್ಟಿದ್ರು. ಹೀಗಾಗಿ ಮಂಡ್ಯವನ್ನ ಮತ್ತೆ ಜೆಡಿಎಸ್ ತೆಕ್ಕೆಗೆ ತಗೋಬೇಕು ಅಂತಾನೇ ಕುಮಾರಸ್ವಾಮಿ ಬಿಜೆಪಿ ಜೊತೆ ಲೋಕಸಭಾ ಚುನಾವಣಾ ದೋಸ್ತಿ ಕುದುರಿಸಿಕೊಂಡಿರೋದು.. ನಿಮಗೆ ಗೊತ್ತಿರ್ಲಿ, ಜೆಡಿಎಸ್ ಬಿಜೆಪಿ ಜೊತೆ ದೋಸ್ತಿ ಮಾಡ್ಕೊಂಡಿಲ್ಲ ಅಂದ್ರೂ ಒಂದೆರಡು ಸೀಟು ಗೆಲ್ಲೋದು ಗ್ಯಾರಂಟಿ ಇತ್ತು.
ಆದ್ರೀಗ ದೋಸ್ತಿ ಮಾಡ್ಕೊಂಡಿರೋ ಜೆಡಿಎಸ್ಗೆ ಸಿಕ್ಕಿರೋದು ಎಷ್ಟು ಕ್ಷೇತ್ರಗಳ ಟಿಕೆಟ್, ಕೇವಲ ಮೂರು. ಹಾಸನ ಹೆಂಗಿದ್ರೂ ಜೆಡಿಎಸ್ ತೆಕ್ಕೆಯಲ್ಲಿತ್ತು. ಈಗ ಮಂಡ್ಯದ ಜೊತೆಗೆ ಕೋಲಾರ ಟಿಕೆಟ್ ಜೆಡಿಎಸ್ ಗಿಟ್ಟಿಸಿಕೊಂಡಿದೆ. ಅಲ್ಲಿಗೆ ನೀವೇ ಯೋಚ್ನೆ ಮಾಡಿ, ಮಂಡ್ಯ ಕ್ಷೇತ್ರದ ಟಿಕೆಟ್ಗಾಗಿ ಹೆಚ್ಡಿಕೆ ಎಷ್ಟೆಲ್ಲಾ ಸರ್ಕಸ್ ಮಾಡಿದ್ರು ಅನ್ನೋದನ್ನ.
ಹೀಗೆ ವ್ಯವಸ್ಥಿತವಾಗಿ ಬಿಜೆಪಿ ಜೊತೆ ದೋಸ್ತಿ ಕುದುರಿಸಿದ್ದ ಹೆಚ್ಡಿಕೆ ಸುಮಲತಾ ಅವರ ಜೊತೆ ಸಂಘರ್ಷಕ್ಕಿಳಿಯದೇ ಸಲೀಸಾಗಿ ಅವರನ್ನ ಅಖಾಡಕ್ಕಿಳಿಯದಂತೆ ನೋಡಿಕೊಂಡಿದ್ರು. ಆದ್ರೆ ಸುಮಲತಾ ಸೈಡ್ಲೈನ್ ಆದ್ರೂ ಮಾಜಿ ಸಿಎಂ ಹೆಚ್ಡಿಕೆಗೆ ಬರಸಿಡಿಲು ಬಡೆಯುವಂತಾ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾಯಿದೆ. ಅದುವೇ ಮಂಡ್ಯ ಜಾತಿ ಲೆಕ್ಕಾಚಾರ..
ಇದೇ… ಇದೊಂದೇ ಜಾತಿ ಲೆಕ್ಕಾಚಾರದ ಫೋಟೋ ನೋಡಿ, ದಳಪತಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿರೋದು. ದಳಪತಿಗಳು ಬಿಜೆಪಿ ಜೊತೆ ಕೈ ಜೋಡಿಸಿದ್ದರಿಂದ ಇಷ್ಟು ದಿನ ಜೆಡಿಎಸ್ ಬೆನ್ನಿಗಿದ್ದ ಅಹಿಂದ ಮತಗಳು ಕಾಂಗ್ರೆಸ್ ಬೆನ್ನಿಗೆ ಸಾಲಿಡ್ಡಗಿ ಬಂದು ನಿಂತಿವೆ.. ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹೆಚ್ಡಿಕೆಗಿಂತ ಹೆಚ್ಚು ಮತಗಳನ್ನ ಪಡೆದು ಸುಲಭವಾಗಿ ಗೆಲ್ತಾರೆ ಅನ್ನೋ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡ್ತಾಯಿದೆ. ಅದು ಹೇಗೆ ಅಂದ್ರಾ.?
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪಟ್ಟಿಯ ಪ್ರಕಾರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 7,89,420 ಒಕ್ಕಲಿಗ ಮತದಾರರಿದ್ದಾರೆ. ಇವರಲ್ಲಿ ಶೇಕಡಾ 75 ರಷ್ಟು ಮತದಾನ ನಡೆದರೆ 5,92,065 ಮತಗಳಾಗುತ್ತವೆ. ಇದರಲ್ಲಿ HD ಕುಮಾರಸ್ವಾಮಿ ಅವರರಿಗೆ ಶೇಕಡಾ 70 ರಷ್ಟು ಮತಗಳು ಹೋಗುತ್ತವೆ. ಅಂದರೆ 4,14,446 ಮತಗಳು ಸೇರುತ್ತವೆ. ಉಳಿದ 30% ಅಂದರೆ 1,77,620 ಮತಗಳು ಸ್ಟಾರ್ ಚಂದ್ರು ಅವರಿಗೆ ಸೇರಲಿವೆ. ಇದೇ ರೀತಿ ಮಂಡ್ಯ ಅಖಾಡದಲ್ಲಿ ಪರಿಶಿಷ್ಟ ಜಾತಿ/ ಪಂಗಡದ 3,03,601 ಮತಗಳಿವೆ. ಇದರಲ್ಲಿ ಕುಮಾರಸ್ವಾಮಿಗೆ 25 ಪರ್ಸೆಂಟ್ ಮತಗಳು, ಸ್ಟಾರ್ ಚಂದ್ರುಗೆ 75 ಪರ್ಸೆಂಟ್ ಮತಗಳು ಬೀಳೋ ಸಾಧ್ಯತೆ ಇದೆ. ಇದೇ ರೀತಿ ಲಿಂಗಾಯತರ 60 ಪರ್ಸೆಂಟ್ ಮತಗಳನ್ನ ಹೆಚ್ಡಿಕೆ ಸೆಳೆದ್ರೆ, ಬ್ರಾಹ್ಮಣರ ಶೇಕಡ 90 ರಷ್ಟು ಮತಗಳನ್ನ ಸೆಳೆಯಬಹುದು.
ಆದ್ರೆ ಮಂಡ್ಯದಲ್ಲಿ 1,29,145 ಮುಸ್ಲಿಂ ಮತಗಳಿದ್ದು, ಇದ್ರಲ್ಲಿ ಶೇಕಡ 95 ಪರ್ಸೆಂಟ್ ಮತಗಳು ಸ್ಟಾರ್ ಚಂದ್ರು ಬೆನ್ನಿಗೆ ನಿಂತಿವೆ. ಅದೇ ರೀತಿ ಕುರುಬ, ಗಂಗಾಮಸ್ಥರ ಮತಗಳು ಶೇಕಡ 80ರಷ್ಟು ಸ್ಟಾರ್ ಚಂದ್ರು ಪಾಲಾಗೋ ಸಾಧ್ಯತೆ ಇದೆ. ಹೀಗೆ ಒಟ್ಟಾರೆ ಮಂಡ್ಯ ಲೋಕಸಭಾ ಕ್ಷೇತ್ರದ ಜಾತಿ ಲೆಕ್ಕಾಚಾರ ನೋಡಿದ್ರೆ ಕೆಲವೇ ಸಾವಿರ ಮತಗಳ ಅಂತರದಿಂದ ಯಾರುಬೆಕಾದರೂ ಗೆಲ್ಲಬಹುದು ಅಂತೇಳಿ ಈ ಜಾತಿ ಲೆಕ್ಕಾಚಾರದ ವರದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾಯಿದೆ.
ಹಾಗೊಮ್ಮೆ ಈ ಜಾತಿ ಲೆಕ್ಕಾಚಾರ ವರ್ಕೌಟ್ ಆಗಿ ಸ್ಟಾರ್ ಚಂದ್ರು ಗೆದ್ರೆ ಮಾಜಿ ಸಿಎಂ ಹೆಚ್ಡಿಕೆಗೆ ಮತ್ತೆ ಮರ್ಮಾಘಾತವಾದಂತೆಯೇ ಲೆಕ್ಕ.. ಕಳೆದ ಸಲ ಇದೇ ಮಂಡ್ಯದಲ್ಲಿ ನಿಂತು ಹೆಚ್ಡಿಕೆ ಮಗ ನಿಖಿಲ್ ಸೋತಿದ್ರು. ಈಗ ಅಪ್ಪ ಸೋತಿದ್ದಾರೆ ಅನ್ನೋ ಮೆಸೇಜ್ ಪಾಸ್ ಆಗುತ್ತೆ. ಜೊತೆಗೆ ಮಂಡ್ಯ ಜನ ಜೆಡಿಎಸ್ ಪಕ್ಷವನ್ನ ತಮ್ಮ ಕ್ಷೇತ್ರದಿಂದ ಕಿತ್ತೆಸೆದಿದ್ದಾರೆ ಅನ್ನೋ ಸಂದೇಶ ಕೂಡ ರವಾನೆಯಾದಂತಾಗಿದೆ.
ಹಾಗಾದ್ರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಈ ಜಾತಿ ಸಮೀಕ್ಷಾ ವರದಿಯ ಬಗ್ಗೆ ನೀವೇನಂತಿರಾ? ಸುಮ ಸೈಡ್ಕೊಟ್ರೂ, ಹೆಚ್ಡಿಕೆಗೆ ಮಂಡ್ಯ ಮತದಾರರು ಗೇಟ್ಪಾಸ್ ಕೊಡ್ತಾರಾ?…ಗೊತ್ತಿಲ್ಲ