ದಾವಣಗೆರೆ : ಗಣೇಶನ ಹಬ್ಬ ಇನ್ನೇನೂ ಒಂದು ದಿನ ಇದ್ದು, ಮನೆಯಲ್ಲಿ ಗಣಪತಿ ಕೂರಿಸುವ ವಿಚಾರದಲ್ಲಿ ಅನೇಕರಿಗೆ ಗೊಂದಲ ಇದ್ದೇ ಇದೆ. ಮನೆಯಲ್ಲಿ ಗಣೇಶನನ್ನು ಕೂರಿಸುವಾಗ ಯಾವ ರೀತಿ ಮೂರ್ತಿ ತರಬೇಕು, ತಂದರೆ ಯಾವ ದಿಕ್ಕಿಗೆ ಕೂರಿಸಬೇಕು ಎಂಬುದಕ್ಕೆ ಇಲ್ಲಿದೆ ಉತ್ತರ.
ವಾಸ್ತುಶಾಸ್ತ್ರದ ಪ್ರಕಾರ, ಗಣೇಶ ವಿಗ್ರಹ ಅಥವಾ ಮೂರ್ತಿಯನ್ನು ಮನೆಯಲ್ಲಿ ಇರಿಸುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಗಣಪತಿಯನ್ನು ಮನೆಯಲ್ಲಿ ಇರಿಸುವುದರಿಂದ ಮನೆಯೊಳಗೆ ಋಣಾತ್ಮಕ ಅಥವಾ ನಕಾರಾತ್ಮಕ ಶಕ್ತಿಗಳು ಬರುವುದಿಲ್ಲ, ಇರುವುದೂ ಇಲ್ಲ. ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಆದಾಗ್ಯೂ ವಾಸ್ತು ಪ್ರಕಾರ, ಗಣೇಶ ವಿಗ್ರಹವನ್ನು ಮನೆಯಲ್ಲಿ ಇಡುವಾಗ ದಿಕ್ಕು ತಿಳಿದಿರುವುದು ಮುಖ್ಯ. ಯಾಕೆಂದರೆ ತಪ್ಪಾದ ದಿಕ್ಕಿನಲ್ಲಿ ಗಣಪತಿಯನ್ನು ಕೂರಿಸಿದರೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ವಾಸ್ತು ಪ್ರಕಾರ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಎಲ್ಲಿ ಇಡಬೇಕು, ಮನೆಗೆ ಯಾವ ದಿಕ್ಕಿಗೆ ಒಳ್ಳೆಯದು? ಎಲ್ಲಿ ಇರಿಸಬಾರದು? ಮನೆಗೆ ಯಾವ ರೀತಿಯ ಗಣೇಶ ಮೂರ್ತಿ ತರಬೇಕು? ಯಾವ ರೀತಿಯ ಗಣೇಶ ಮೂರ್ತಿ ಇಡಬಾರದು? ಹೀಗೆ ಹತ್ತು ಹಲವು ಪ್ರಶ್ನೆಗಳು ಅನೇಕರನ್ನು ಕಾಡುತ್ತಿರಬಹುದು.
ಎಲ್ಲಿ ಪ್ರತಿಷ್ಠಾಪಿಸಬಾರದು
ವಾಸ್ತು ಶಾಸ್ತ್ರದ ಪ್ರಕಾರ ಗಣೇಶನ ಮೂರ್ತಿಯನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಅಂದರೆ ಈಶಾನ್ಯ ದಿಕ್ಕಿನಲ್ಲಿ ಇಡುವುದು ಸೂಕ್ತ. ಮನೆಯ ದಕ್ಷಿಣ ದಿಕ್ಕಿನಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಬಾರದು. ಹಾಗೆಯೇ ಶೌಚಾಲಯ, ಕಸದ ತೊಟ್ಟಿಗಳು, ಸ್ಟೋರ್ ರೂಂಗಳು, ಮೆಟ್ಟಿಲುಗಳ ಕೆಳಗೆ ಇತ್ಯಾದಿಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು.
ಯಾವ ರೀತಿಯ ಗಣೇಶನ ಮೂರ್ತಿ ಮನೆಗೆ ಒಳ್ಳೆಯದು
ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ಗಣೇಶನ ಮೂರ್ತಿಯನ್ನು ತರುವಾಗ ಆ ವಿಗ್ರಹ ಅಥವಾ ಮೂರ್ತಿಯ ಭಂಗಿಯನ್ನು ಗಮನಿಸುವುದನ್ನು ಮರೆಯಬೇಡಿ. ಲಲಿತಾಸನದಲ್ಲಿ ಕುಳಿತಿರುವ ಗಣೇಶನ ಚಿತ್ರ ಅಥವಾ ವಿಗ್ರಹವನ್ನು ತರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಮುದ್ರೆಯು ಶಾಂತಿಯನ್ನು ಪ್ರತಿನಿಧಿಸುತ್ತದೆ. ಅಲ್ಲದೆ, ಒರಗಿರುವ ಭಂಗಿಯಲ್ಲಿರುವ ಗಣೇಶನ ಚಿತ್ರ ಅಥವಾ ಪ್ರತಿಮೆಯನ್ನು ತರಬಹುದು. ಏಕೆಂದರೆ ಗಣೇಶನ ಅಂತಹ ಭಂಗಿಯು ಐಷಾರಾಮಿ, ಸೌಕರ್ಯ ಮತ್ತು ಸಂಪತ್ತನ್ನು ಪ್ರತಿನಿಧಿಸುತ್ತದೆ.
ಸೊಂಡಿಲು ಯಾವ ದಿಕ್ಕಿನಲ್ಲಿರಬೇಕು
ಮನೆಯಲ್ಲಿ ಗಣೇಶ ಮೂರ್ತಿಯನ್ನು ತರುವಾಗ ಸೊಂಡಿಲು ಯಾವ ದಿಕ್ಕಿನಲ್ಲಿದೆ ಎಂಬುದನ್ನು ಗಮನಿಸಿ. ವಾಸ್ತು ಶಾಸ್ತ್ರದ ಪ್ರಕಾರ ಗಣೇಶನ ಸೊಂಡಿಲು ಎಡಭಾಗದಲ್ಲಿರಬೇಕು. ಅಂತಹ ಮೂರ್ತಿಯನ್ನು ಮನೆಗೆ ತರಬೇಕು. ಏಕೆಂದರೆ ಈ ದಿಕ್ಕು ಯಶಸ್ಸು, ಧನಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಗಣೇಶನ ವಿಗ್ರಹವನ್ನು ಮನೆಗೆ ತರುವಾಗ ಆ ಗಣೇಶನ ಕೈಯಲ್ಲಿ ಮೋದಕ ಮತ್ತು ಮೂಷಿಕ ವಾಹನ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಮೋದಕವು ಗಣಪತಿಗೆ ಪ್ರಿಯವಾದ ಆಹಾರವಾಗಿದೆ, ಮೂಷಿಕವು ನಮ್ಮ ಮನಸ್ಸು ಮತ್ತು ದೈಹಿಕ ಬಯಕೆಗಳನ್ನು ಪ್ರತಿನಿಧಿಸುವ ವಾಹನವಾಗಿದ್ದು, ತಪ್ಪದೇ ಈ ನಿಯಮಗಳನ್ನು ಪಾಲಿಸಿ.