
ಶಿವಮೊಗ್ಗ: ನವ ಕರ್ನಾಟಕ ನಿರ್ಮಾಣ ಆಂದೋಲನ ಶಿವಮೊಗ್ಗ, ರೈತ ಚಳವಳಿ, ದಲಿತ ಚಳವಳಿ, ಕನ್ನಡ ಭಾಷಾ ಚಳವಳಿ, ಮಹಿಳಾ ಚಳವಳಿ, ವಿದ್ಯಾರ್ಥಿ – ಯುವಜನರ ಚಳವಳಿಗಳು ರೂಪಿಸಿರುವ ಪ್ರಾದೇಶಿಕ ರಾಜಕೀಯ ಪಕ್ಷದ ಮುನ್ನೋಟವನ್ನು ಜನರ ನಡುವೆ ಜನತಾ ಪ್ರಣಾಳಿಕೆ ಬಿಡುಗಡೆ ಮತ್ತು ಚರ್ಚೆಯನ್ನು ಮಾ.2 ರಂದು ಬೆಳಗ್ಗೆ 10.30 ಕ್ಕೆ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ರೈತ ಮತ್ತು ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಮಂಜುನಾಥ ಗೌಡ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಿಂದ ಉಚಿತ ವಿದ್ಯುತ್ ಅನ್ನು ರೈತಾಪಿ ವಲಯಕ್ಕೆ ಕೊಡುವುದು ಸೇರಿದಂತೆ ಇತರೆ ಅಂಶಗಳನ್ನು ಒಳಗೊಂಡಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ನೀಡಿದ ಸಲಹೆಗಳನ್ನು ಆಲಿಸಿ, ಕಾರ್ಯಕರ್ತರು ಮುಂದಿಡುವ ಆಭಿಪ್ರಾಯಗಳನ್ನು ಮುಖಾಮುಖಿಯಾಗಿ ಚರ್ಚಿಸಲು ಎಲ್ಲಾ ರಾಜ್ಯ ನಾಯಕರು ಆಗಮಿಸಲಿದ್ದಾರೆ. ಕರ್ನಾಟಕ ಚರಿತ್ರೆಯಲ್ಲಿ ಮೊದಲ ಬಾರಿಗೆ ಎಲ್ಲಾ ಜನರ ನಡುವೆ ಚರ್ಚಿಸಿ, ರೂಪಿಸಲ್ಪಟ್ಟು, ಜನರಿಂದಲೇ ಹುಟ್ಟಿಬಂದ ಈ ಜನತಾ ಪ್ರಣಾಳಿಕೆಯನ್ನು ಬೃಹತ್ ಸಮಾವೇಶದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಜನತಾ ಪ್ರಣಾಳಿಕೆಯನ್ನು ಅನುಷ್ಟಾನಕ್ಕೆ ತರಲು ರಾಜಕೀಯ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದರು.
ಡಿ.ಎಸ್.ಈಶ್ವರಪ್ಪ ಮಾತನಾಡಿ, ಬುದ್ಧಿ ಜೀವಿಗಳು, ಹಿರಿಯರಿಗೆ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಬೇಕು. ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷ ರೂಪುಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಪ್ರಣಾಳಿಕೆ ಚರ್ಚೆ ನಡೆಸಲಾಗುವುದು. ನಮ್ಮ. ಜೀವನ ರೂಪು ರೇಷಗಳನ್ನು ರೂಪಿಸಲು ಸಾಕಷ್ಟು ಕಾರ್ಯಕ್ರಮಗಳು ಇದ್ದರೂ ಸಹ ಇದೊಂದು ಕಾರ್ಯಕ್ರಮ ವಿಶೇಷ ಪ್ರಣಾಳಿಕೆಯ ಚರ್ಚೆಯನ್ನು ಹೊಂದಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯೋಗೀಶ್, ಶಫಿಉಲ್ಲಾ ಉಪಸ್ಥಿತರಿದ್ದರು.

