ದಾವಣಗೆರೆ: ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಸೇರಿದಂತೆ ರಾಜ್ಯ ಸರ್ಕಾರ ನೀಡುವ ಎಲ್ಲ ಅನುದಾನ ಮತ್ತು ಇತರೆ ಸೌಲಭ್ಯಗಳನ್ನು ಡಿಸಿಸಿ ಬ್ಯಾಂಕ್ ಮೂಲಕ ಇನ್ನೂ ಹೆಚ್ಚಿನದಾಗಿ ನೀಡಲಾಗುವುದು ಎಂದು ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ನಡೆದ ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಮತದಾನದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ್ ನ ಎಲ್ಲ ಯೋಜನೆಗಳು ರೈತರಿಗೆ ನೇರವಾಗಿ ತಲುಪಬೇಕು. ಈ ಹಿಂದೆಯೂ ತಲುಪಿಸಲಾಗಿದೆ.ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ರೈತರ ಮನೆ ಬಾಗಿಲಿಗೆ ತಲುಪಿಸುವ ಇಂದು ಆಯ್ಕೆಯಾಗುವ ಹೊಸ ನಿರ್ದೇಶಕರು ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ರೈತಪರ ಕಾಳಜಿವುಳ್ಳ ಅಭ್ಯರ್ಥಿಗಳೇ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.ಪ್ರಾಮಾಣಿಕವಾಗಿ ಕೆಲಸ ಮಾಡುವವರೇ ಇಲ್ಲಿ ಇದ್ದಾರೆ.ಈ ಹಿಂದೆ ಗದಗ ಜಿಲ್ಲೆಯೊಂದಿಗೆ ಪೈಪೋಟಿ ನಡೆಸಿ ಕಷ್ಟಪಟ್ಟು ದಾವಣಗೆರೆಗೆ ಡಿಸಿಸಿ ಬ್ಯಾಂಕ್ ತರಲಾಯಿತು. ಈಗ ನಾವು ಅದನ್ನು ಉಳಿಸಿಕೊಂಡು ಹೋಗಬೇಕಲ್ಲದೇ ಅಭಿವೃದ್ಧಿ ಕೂಡ ಮಾಡಬೇಕಿದೆ ಎಂದರು.
ಅಂದು ರೂಪಾಯಿ ಕೂಡ ಠೇವಣಿ ಇರಲಿಲ್ಲ. ಕೋ ಆಪರೇಟಿವ್ ಬ್ಯಾಂಕ್‌ನವರು ಠೇವಣಿ ಇಟ್ಟರು . ಈ ಸಂದರ್ಭದಲ್ಲಿ ಅವರನ್ನು ನೆನಪು ಮಾಡಿಕೊಳ್ಳಬೇಕು.ಈಗ ಡಿಸಿಸಿ ಬ್ಯಾಂಕ್ ಮೂಲಕ ಇನ್ನು ಹೆಚ್ಚು ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.