
ಶಿವಮೊಗ್ಗ,ಜೂ.6: ಸಹಜ ಸಮೃದ್ಧ ಸಂಸ್ಥೆ, ಕೆಳದಿ ಶಿವಪ್ಪನಾಯಕ ಕೃಷಿ ವಿ.ವಿ. ಇವರ ಸಂಯುಕ್ತಾಶ್ರಯದಲ್ಲಿ ಜೂ.8 ಮತ್ತು 9ರಂದು ವೀರಶೈವ ಕಲ್ಯಾಣ ಮಂಟಪ್ಪದಲ್ಲಿ ದೇಸೀ ಬೀಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಬಿ.ಎಂ.ಮಲ್ಲಿಕಾರ್ಜುನ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ದೇಸೀಯ ತಳಿಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಹೈಬ್ರಿಡ್ ಬೀಜಗಳು ಬಂದ ಮೇಲೆ ಅನಿವಾರ್ಯವಾಗಿ ಕೀಟ ನಾಶಕ, ರಾಸಾಯನಿಕ ಕ್ರಿಮಿ ನಾಶಕಗಳನ್ನು ಬಳಸಬೇಕಾಗಿದೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳು ಸಾವಯವ ಕೃಷಿಕರು ಸೇರಿಕೊಂಡು ದೇಸಿ ಬೀಜಕ್ಕೆ ಆದ್ಯತೆ ನೀಡಿ, ನಮ್ಮ ರೈತರಿಗೆ ಮತ್ತು ತೋಟಗಾರಿಕೆ ಬೆಳೆಗಾರರಿಗೆ ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಬೀಜಮೇಳವನ್ನು ಆಯೋಜಿಸಿದ್ದೇವೆ ಎಂದರು.
ಉಳಿವು ಪೌಂಡೇಶ್ನ್ನ ಡಾ.ಸೀಮಾ ಮಾತನಾಡಿ, ಸಾವಯವ ಕೃಷಿಗೆ ನಾವು ಆದ್ಯತೆ ನೀಡಬೇಕಾಗಿದೆ. ನಮ್ಮ ಎಲ್ಲಾ ಆಹಾರ ಇಂದು ವಿಷಭರಿತವಾಗಿದೆ. ಅದನ್ನು ವಿಷಮುಕ್ತ ಮಾಡಬೇಕಾಗಿದೆ. ಭೂಮಿಯನ್ನೇ ವಿಷವನ್ನಾಗಿ ಮಾಡಲಾಗುತ್ತಿದೆ. ಇದು ತಪ್ಪಾಬೇಕಾಗಿದೆ. ಮಾನವರಿಗೆ ಒಳ್ಳೆಯ ಆಹಾರ ಸಿಗಬೇಕಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಸಾವಯವ ಕೃಷಿ ಮತ್ತು ದೇಸಿಯ ಬೀಜಕ್ಕೆ ಆದ್ಯತೆ ನೀಡಲಾಗಿದೆ. ಆ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶವನ್ನು ಸಾವಯವ ಕೃಷಿಕರು ಮತ್ತು ಅನೇಕ ಸಂಘ ಸಂಸ್ಥೆಗಳು ಒಟ್ಟಾಗಿ ಈ ಕೆಲಸ ಮಾಡುತ್ತಿದ್ದೇವೆ ಎಂದರು.
ನಿವೃತ್ತ ಪ್ರೊಫೆಸರ್ ಡಾ.ಎ.ವಿ.ಪ್ರದೀಪ್ ಮಾತನಾಡಿ, ಜೂ.8ರಿಂದ ಎರಡು ದಿನಗಳ ಕಾಲ ನಡೆಯುವ ದೇಸಿ ಬೀಜೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಬಸವಕೇಂದ್ರದ ಶ್ರೀಮರುಳಸಿದ್ದಸ್ವಾಮೀಜಿ, ಕೃಷಿ ವಿ.ವಿ. ಉಪಕುಲಪತಿ ಡಾ. ಜಗದೀಶ್ ಆರ್.ಸಿ., ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್, ಸಾವಯವ ಸಂಶೋಧನ ಕೇಂದ್ರದ ಸಂಯೋಜಕ ಡಾ. ಎಸ್.ಪ್ರದೀಪ್, ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ ಹೊಸಪಾಳ್ಯ, ಐಕಾಂತಿಕ ಸಂಸ್ಥೆಯ ರಾಘವ, ಸಾವಯವ ಪೌಷ್ಠಿಕ ಶಂಕರ ಎಂ.ದೇವೇಂದ್ರಪ್ಪ, ನಂದೀಶ್ ಉಪಸ್ಥಿತರಿರುವರು ಎಂದರು.
ಮೇಳದಲ್ಲಿ ಸುಮಾರು 15ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ. ರಾಜ್ಯದ ವಿವಿಧ ಕಡೆಗಳಿಂದ ರೈತರು ತಾವೇ ನಿರ್ಮಿಸಿದ ದೇಸಿ ಬೀಜಗಳನ್ನು ಪ್ರದರ್ಶನ ಮಾಡುವುದಲ್ಲದೆ ಮಾರಾಟ ಕೂಡ ಮಾಡುತ್ತಾರೆ. ಭತ್ತ, ತರಕಾರಿ, ಸಿರಿದಾನ್ಯ ಬೀಜಗಳು, ಹಣ್ಣುಗಳ ಬೀಜಗಳು ಇಲ್ಲಿ ದೊರೆಯುತ್ತವೆ, ಜೊತೆಗೆ ಆಹಾರ ಮಳಿಗೆಗಳನ್ನು ಕೂಡ ತೆರೆಯಲಾಗುತ್ತದೆ. ಎಲ್ಲವೂ ದೇಸಿತನದಲ್ಲಿ ಇರುತ್ತದೆ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಕುಮಾರನಾಯ್ಡು, ದಿನೇಶ್ ಹೊಸನಗರ, ಸಂತೋಷ್ ಮುಂತಾದವರು ಇದ್ದರು.



