
- ಡಿಸಿಸಿ ಬ್ಯಾಂಕ್ ಚುನಾವಣೆ, ಇಂದು ಉಮೇದುವಾರಿಕೆ ಸಲ್ಲಿಸಲು ಅಪರಾಹ್ನ 3 ಗಂಟೆ ಡೆಡ್ ಲೈನ್, ಇನ್ಮುಂದೆ ಅಸಲಿ ಆಟ ಶುರು…
- ಸೆಮಿಫೈನಲ್ ಮುಗಿಯಿತು…ಫೈನಲ್ ಗೆ ಲಗ್ಗೆ ಇಡೋರು ಯಾರು?…ಜನವರಿ 25 ಕ್ಕೆ ಹೈಸ್ಕೂಲ್ ಮೈದಾನದಲ್ಲಿ ರೋಚಕ ಪಂದ್ಯ.
- ಸದ್ಯ ಅಖಾಡಕ್ಕೆ 82 ಉಮೇದುವಾರಿಕೆ ಬಂದಿದ್ದು, ಘಟಾನುಘಟಿಗಳು ಅಖಾಡಕ್ಕೆ ಇಳಿದಿದ್ದಾರೆ.
- ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ, ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಜಕಾರಣಿಗಳು.
ನಂದೀಶ್ ಭದ್ರಾವತಿ ದಾವಣಗೆರೆ
ದಾವಣಗೆರೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಇಂದು ಕಡೆ ದಿನವಾಗಿದ್ದು, ರೋಚಕ ಹಣಾಹಣಿ ಇನ್ಮುಂದೆ ಶುರುವಾಗಲಿದೆ.
ಸದ್ಯ ಅಖಾಡಕ್ಕೆ 82 ಉಮೇದುವಾರಿಕೆ ಬಂದಿದ್ದು, ಘಟಾನುಘಟಿಗಳು ಅಖಾಡಕ್ಕೆ ಇಳಿದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಬೆಂಬಲಿಗರು 13 ಸ್ಥಾನಕ್ಕೆ ಹೆಚ್ಚು ನಾಮ ಪತ್ರ ಸಲ್ಲಿಸಿದ್ದಾರೆ. ಇನ್ನೂ ಬಿಜೆಪಿಯಲ್ಲಿ ಮಾಜಿ ನಿರ್ದೇಶಕರು ಹಾಗೂ ಹೊಸ ಮುಖಗಳು ಈ ಬಾರಿ ಎಂಟ್ರಿ ಕೊಟ್ಟಿವೆ.
ಜೊತೆಗಿದ್ದವರು ಇಂದು ಎದುರಾಳಿಗಳು

ಡಿಸಿಸಿ ಬ್ಯಾಂಕ್ ಪಕ್ಷ ರಹಿತವಾದರೂ ಕಾಂಗ್ರೆಸ್ -ಬಿಜೆಪಿಗೆ ನೇರ ಪೈಪೋಟಿ ಇದೆ. ಪ್ರತಿಯೊಬ್ಬರಿಗೂ ಚುನಾವಣೆ ಎದುರಿಸಬೇಕೆಂಬ ಇರಾದೆ ಇರುವ ಕಾರಣ ಸ್ನೇಹಿತರಾಗಿದ್ದವರು ಚುನಾವಣೆ ಸಂಬಂಧ ಎದುರಾಳಿಯಾಗಿದ್ದಾರೆ. ಅಲ್ಲದೇ ತಂಡ ಕಟ್ಟಿಕೊಂಡು ಮತದಾರರ ಮನೆ ಬಾಗಿಲಿಗೆ ಎಡ ತಾಕುತ್ತಿದ್ದಾರೆ.
ಅವರು ನಮ್ಮವರೋ, ಇವರು ನಮ್ಮವರೋ ಎನ್ನುವ ಮಾತು ಕಾಮನ್
ಡಿಸಿಸಿ ಬ್ಯಾಂಕ್ ಪಡಸಾಲೆಗೆ ಬರುವ ಸ್ಪರ್ಧಾಳುಗಳು ಅವರದ್ದು ಇಷ್ಟು ಡಿಲಿಗೇಟ್ಸ್ ಇದ್ದಾರೆ, ನಮ್ಮವರೋದ್ದು ಇಷ್ಟು ಡಿಲಿಗೇಟ್ಸ್ ಇದ್ದಾರೆ. ಎಲ್ಲ ಪ್ರತಿನಿಧಿಗಳು ನಮ್ಮ ಕಡೆ ಇದ್ದಾರೆ, ಅವರ ಕಡೆ ಯಾರು ಇಲ್ಲ..ಈ ಬಾರಿ ನಾವೇ ಗೆಲ್ಲೋದು..ನೋಡ್ತಾ ಇರೀ ಎನ್ನುವ ಮಾತುಗಳು ಚಹಾ ಹೀರುವ ವೇಳೆ, ಸಿಗರೇಟ್ ಹಚ್ಚುವ ವೇಳೆ, ಎಣ್ಣೆ ಟೇಬಲ್ ನಲ್ಲಿ ಕುಳಿತ ವೇಳೆ ಭಾರಿ ಚರ್ಚೆಯಾಗುತ್ತಿದೆ.
ಪ್ರತಿ ನಿಧಿ ಕಣ್ಣಾಮುಚ್ಚಾಲೆ ಆಟ
ಈ ಚುನಾವಣೆಗೆ ಸಂಘ-ಸಂಸ್ಥೆಗಳಿಂದ ಒಬ್ಬ ಪ್ರತಿನಿಧಿ ಮಾತ್ರ ಆಯ್ಕೆ ಮಾಡುವ ಕಾರಣ ಪ್ರತಿನಿಧಿಗಳೇ ದೇವರಾಗಿದ್ದಾರೆ. ಹಾಗಾಗಿ ಒಂದು ಕಡೆ ಕಾಣಿಸಿಕೊಂಡವರು, ಗೊತ್ತಿಲ್ಲದ ಹಾಗೆ ಇನ್ನೊಂದು ಕಡೆ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಸ್ಪರ್ಧಾಳುಗಳಿಗೆ ಯಾರು ನಮ್ಮವರು ಎಂಬ ಜಿಜ್ಞಾಸೆ ಮೂಡಿದೆ. ಸದ್ಯ ಪ್ರತಿನಿಧಿ ಕಣ್ಣಾಮುಚ್ಚಾಲೆ ಆಟ ಯಾರಿಗೂ ಗೊತ್ತಾಗುತ್ತಿಲ್ಲ.
ಪ್ರತಿನಿಧಿಗಳ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು
ಸ್ಪರ್ಧಾಳುಗಳು ಪ್ರತಿನಿಧಿಗಳ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಗುಪ್ತ ಜಾಗಗಳಲ್ಲಿ ಸಭೆ ನಡೆಯುತ್ತಿದೆ. ಅಲ್ಲದೇ ಎದುರಾಳಿ ಸೋಲಿಗೆ ಟಕ್ಕರ್ ಕೊಡಲು ಸ್ಪರ್ಧಾಳುಗಳು ತಮ್ಮದೇ ತಂತ್ರ ಎಣಿಯುತ್ತಿದ್ದಾರೆ. ಕೆಲವರು ಏನು ಗೊತ್ತಿಲ್ಲದೇ ಹಾಗೆ ಇದ್ದು, ಯಾರಿಗೂ ಗೊತ್ತಿಲ್ಲದೇ ಹಾಗೆ ಇದ್ದು, ಮಾಹಿತಿ ಸಂಗ್ರಹಿಸಿ ಚುನಾವಣೆ ಅಖಾಡಕ್ಕೆ ನಿಂತ ಎದುರಾಳಿಗೆ ಲೇಟ್ ಆಗಿ ಹೊಡೆದರೂ, ಲೇಟೇಸ್ಟ್ ಆಗಿ ಹೊಡೆಯಲೂ ವೇದಿಕೆ ಸಿದ್ದವಾಗುತ್ತಿದೆ.
ಯುವಕರ ಜತೆ ಹಿರಿಯ ಜೀವಿಗಳ ಸ್ಪರ್ಧೆ
ಡಿಸಿಸಿ ಬ್ಯಾಂಕ್ ನ ಈ ಚುನಾವಣೆಯಲ್ಲಿ ಅನುಭವಿ ಸಹಕಾರಿ ಹಿರಿಯ ಜೀವಗಳು ತಮ್ಮ ಅನುಭವ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಬಿಪಿ, ಶುಗರ್ ಸೇರಿದಂತೆ ಏನೇ ಕಾಯಿಲೆ ಇದ್ದರೂ, ಮತದಾರರ ಮನೆ ಬಾಗಿಲಿಗೆ ಎಗ್ಗಿಲ್ಲದೇ ಎಡತಾಕುತ್ತಿದ್ದಾರೆ. ಇವರಿಗೆ ಗೆಲುವೊಂದೇ ಮಾನದಂಡವಾಗಿದ್ದು, ಅನುಭವ ಆಧಾರದ ಮೇಲೆ ಚುನಾವಣೆ ನಡೆಸುತ್ತಿದ್ದಾರೆ. ಇನ್ನು ಯುವಕರು ಸಹ ಹಿರಿಯ ಜೀವಿಗಳ ಎದುರು ಸ್ಪರ್ಧೆ ಮಾಡುತ್ತಿದ್ದು, ಚುನಾವಣೆಗೆ ನಿಲ್ಲದ ಹಿರಿಯ ಜೀವಿಗಳ ಮಾರ್ಗದರ್ಶನ ಪಡೆಯುತ್ತಿದ್ದು, ಮಗ್ಗಲು ಮುಳ್ಳಾಗಿದ್ದಾರೆ.
ನಾಯಕರ ಮನೆ ಬಾಗಿಲಿಗೆ ಕದ ತಟ್ಟುತ್ತಿರುವ ಸ್ಪರ್ಧಾಳುಗಳು
ಕಾಂಗ್ರೆಸ್-ಬಿಜೆಪಿ ಬೆಂಬಲಿತ ಸ್ಪರ್ಧಾಳುಗಳು ನಾಯಕರ ಮನೆ ಬಾಗಿಲಿಗೆ ಎಡ ತಾಕುತ್ತಿದ್ದಾರೆ. ಅಲ್ಲದೇ ಬೆಂಬಲ ಕೋರುವಂತೆ ಕೇಳುತ್ತಿದ್ದಾರೆ. ಒಂದೇ ಪಕ್ಷದಲ್ಲಿ ಸ್ಪರ್ಧಾಳು ಹೆಚ್ಚು ಇರುವುದರಿಂದ ನಾಯಕರಿಗೆ ಯಾರಿಗೆ ಬೆಂಬಲ ಕೊಡಬೇಕೆಂಬ ಗೊಂದಲದಲ್ಲಿದ್ದಾರೆ. ಇನ್ನು ಕೆಲವರು ನಾಯಕರು ಏನೇ ಹೇಳಿದ್ರೂ ತಾವು ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳುತ್ತಿದ್ದಾರೆ.
ಇನ್ನೇನಿದ್ದರೂ ಎದುರಾಳಿ ನಾಮಪತ್ರ ಹಿಂತೆಗೆಯಲು ತಂತ್ರ
ಜನವರಿ 20 ಕ್ಕೆ ನಾಮ ಪತ್ರ ತೆಗೆದುಕೊಳ್ಳಲು ಹಿಂತೆಗೆಯಲು ಕೊನೆ ದಿನವಾದ ಕಾರಣ ಎದುರಾಳಿ ನಾಮಪತ್ರ ಹಿಂತೆಗೆಯಲು ತಂತ್ರ ಪ್ರತಿ ತಂತ್ರ ನಡೆಯುತ್ತಿದೆ. ಅಲ್ಲದೇ ಆಸೆ, ಆಮಿಷ, ಅಧಿಕಾರಗಳನ್ನು ನೀಡುವುದಾಗಿ ಬೇರೆಯವರ ಮೂಲಕ ಹೇಳಿಸಲಾಗುತ್ತಿದೆ. ಅಲ್ಲದೇ ಮನವೊಲಿಸುವ ಕಾರ್ಯ ಶುರುವಾಗಿದೆ.
ಡೆಲಿಗೇಟ್ಸ್ ಹಿಡಿದುಕೊಳ್ಳುವುದೇ ಸವಾಲು
ಸದ್ಯ ಡೆಲಿಗೇಟ್ಸ್ ಗೆ ಹೆಚ್ಚು ಡಿಮ್ಯಾಂಡ್ ಇದ್ದು, ಚುನಾವಣೆ ಬರುವ ತನಕ ಹಿಡಿದಿಟ್ಟುಕೊಳ್ಳುವುದು ಸ್ಪರ್ಧಾಳುಗಳಿಗೆ ಸವಾಲಾಗಿದೆ. ಅಲ್ಲದೇ ಪ್ರವಾಸ ಹೋಗುವ ವ್ಯವಸ್ಥೆಯನ್ನು ಸ್ಪರ್ಧಾಳುಗಳು ಮಾಡಲು ಮುಂದಾಗಿದ್ದಾರೆ
ಜನವರಿ 20ರ ನಂತರ ರೋಚಕ ಆಟ
ಜನವರಿ 20 ರ ನಂತರ ಅಸಲಿ ಆಟ ಶುರುವಾಗಲಿದೆ. ಕಣದಲ್ಲಿ ಉಳಿಯುವ ಹುರಿಯಾಳುಗಳು ತಮ್ಮ ಎದುರಾಳಿಯನ್ನು ಮಟ್ಟ ಹಾಕಲು ಸಿದ್ದರಾಗಲಿದ್ದು, ರೋಚಕ ಆಟ ನೋಡಲು ಪ್ರೇಕ್ಷಕರು ಕಾಯಬೇಕಾದ ಅನಿವಾರ್ಯತೆ ಇದೆ. ಒಟ್ಟಾರೆ ಅಖಾಡದಲ್ಲಿನ ಪೈಲ್ವಾನರು ಜಂಗಿ ಕುಸ್ತಿಗೆ ರೆಡಿಯಾಗುತ್ತಿದ್ದು, ಮಟ್ಟಿಯೊಳಗೆ ಯಾರು ಮಣ್ಣು ಮುಕ್ಕುತ್ತಾರೆ ಕಾದು ನೋಡಬೇಕು.