ದಾವಣಗೆರೆ : ಅನ್ಯಕೋಮಿನ ಯುವಕರ ಜೊತೆ ಚಿತ್ರಮಂದಿರಕ್ಕೆ ಬಂದಿದ್ದ ದಲಿತ ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ ಮಾಡಿದ್ದ ಇಬ್ಬರು ಯುವಕರನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ ಘಟನೆ ಇನ್ನು ಮಾಸಿಲ್ಲ. ಈಗ ನಗರದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿದ್ದು, ಹುಡುಗನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜಾಲಿ ನಗರದ ನಿವಾಸಿ ಶ್ರೀನಿವಾಸ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ಈತನನ್ನು ಸದ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದ್ದು, ಹಿಂದೂ ಸಂಘಟನೆಗಳು ಆಕ್ರೋಶಗೊಂಡಿವೆ.
ಏನಿದು ಘಟನೆ : ದಾವಣಗೆರೆ ಯರಗುಂಟೆ ಬಳಿಯಿಂದ ದೇವರಾಜ್ ಅರಸ್ ಬಡಾವಣೆಯಿಂದ ಜಾಲಿ ನಗರಕ್ಕೆ ಯುವಕ ಶ್ರೀನಿವಾಸ ಎಂಬಾತ ಮನೆಗೆ ಹೊರಟಿದ್ದ. ಇದೇ ದಾರಿಯಲ್ಲಿ ಅನ್ಯ ಕೋಮಿನ ಯುವತಿಯೊಬ್ಬರು ಡ್ರಾಫ್ ಕೇಳಿದ್ದಾರೆ. ಆಗ ಯುವಕ ಅನ್ಯ ಕೋಮಿನ ಯುವತಿ ಪರಿಚಯವಿದ್ದ ಕಾರಣ ಮನೆಗೆ ಬಿಡಲು ಬೈಕ್ ನಲ್ಲಿ ಕೂರಿಸಿಕೊಂಡಿದ್ದಾನೆ. ನಂತರ ಹೋಗುವಾಗ ಆರ್ ಟಿಒ ಕಚೇರಿ ಬಳಿ ಅನ್ಯ ಕೋಮಿನ ಯುವಕರು ನಮ್ಮ ಸಮಾಜದ ಯುವತಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗುತ್ತಿಯಾ ಎಂದು ಶ್ರೀನಿವಾಸನನ್ನು ತಡೆದು ಬೈಕ್ ಕಸಿದುಕೊಂಡಿದ್ದಾರೆ.
ಬಳಿಕ ನಗರದ ಹೊರವಲಯದ ತಾಜ್ ಶಾದಿಮಹಲ್ ಬಳಿ ಕರೆದುಕೊಂಡು ಹೋಗಿ ಸಾಕಷ್ಟು ಜನರು ಹಲ್ಲೆ ಮಾಡಿದ್ದಾರೆ. ಬಳಿಕ ಆತನನ್ನು ದಾವಣಗೆರೆಯ ಬನಶಂಕರಿಯ ರಸ್ತೆಯಲ್ಲಿ ಸತ್ತಿದ್ದಾನೆ ಎಂದು ಬಿಸಾಕಿ ಹೋಗಿದ್ದಾರೆ. ನಂತರ ಆತನಿಗೆ ಎಚ್ಚರವಾಗಿ ಮನೆಗೆ ಪೋನ್ ಮಾಡಿದಾಗ ವಿಷಯ ಗೊತ್ತಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಮಣಿ ಸರ್ಕಾರ್ ಹೇಳಿದ್ದಾರೆ.
ಪರಿಶೀಲನೆ ಮಾಡುತ್ತೇವೆ ಎಂದಷ್ಟೇ ಹೇಳಿದ ಎಸ್ಪಿ
ಘಟನಾ ಸಂಬಂಧ ಎಸ್ಪಿ ಉಮಾ ಪ್ರಶಾಂತ್ ಪರಿಶೀಲನೆ ಮಾಡುತ್ತೇವೆ ಎಂದಷ್ಟೇ ಹೇಳಿದ್ದಾರೆ..ಇನ್ನು ಹಲ್ಲೆಗೊಳಗಾದ
ಶ್ರೀನಿವಾಸರ ಹೇಳಿಕೆ ಆಧರಿಸಿ ಪೊಲೀಸರು…ಸಿಸಿ ಟಿವಿ ಪರಿಶೀಲನೆ ಸೇರಿದಂತೆ ಆರೋಪಿಗಳ ಹುಡುಕಾಟಕ್ಕೆ ತಲಾಷ್ ನಡೆಸಿದ್ದಾರೆ. ಒಟ್ಟಾರೆ ಇಷ್ಟು ದಿನ ಮಂಗಳೂರು, ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದ್ದ ಘಟನೆ ದಾವಣಗೆರೆಯಲ್ಲಿ ನಡೆಯುತ್ತಿದ್ದು, ಪೊಲೀಸರು ಅಲರ್ಟ್ ಆಗಬೇಕಿದೆ.