ಶಿವಮೊಗ್ಗ: ವಿದ್ಯಾಭ್ಯಾಸದ ಜತೆಯಲ್ಲಿ ಮಕ್ಕಳು ಪರಿಪೂರ್ಣತೆ ಹೊಂದಲು ಹಾಗೂ ಪ್ರತಿಭೆ ಅನಾವರಣಗೊಳಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಶ್ರೀನಿಧಿ ಎಜುಕೇಷನ್ ಸಂಸ್ಥೆಯ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 2024- 25ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ಕ್ರೀಡೆ, ಸಾಂಸ್ಕೃತಿಕ ಆಸಕ್ತಿ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದ ಸಮಯ ವ್ಯರ್ಥ ಮಾಡುತ್ತಾರೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ತೋರಿಸಬೇಕು. ನಮ್ಮಲ್ಲಿ ಮಾನಸಿಕ ಸ್ಥಿರತೆ ವೃದ್ಧಿಸುವ ಜತೆಯಲ್ಲಿ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಟಿ.ಡಿ.ಆರ್.ಶ್ರೀಕಂಠಯ್ಯ ಮಾತನಾಡಿ, ವಿದ್ಯಾರ್ಥಿಗಳು ಜೀವನ ಕೌಶಲ್ಯ, ಸಂಸ್ಕಾರ ಹಾಗೂ ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕ ಡಿ.ಬಿ.ಸತೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಾಸ್ತವ ಘಟನೆಗಳೊಂದಿಗೆ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕರಿಗೆ ಸನ್ಮಾನಿಸಲಾಯಿತು. ರುದ್ರಗೌಡ ಮರ್ಕಳ್ಳಿ, ಪಾರ್ವತಮ್ಮ, ಮೀನಾಕ್ಷಮ್ಮ, ಜಯಲಕ್ಷ್ಮೀ, ಗಣೇಶ್ ಅವರಿಗೆ ಸನ್ಮಾನಿಸಲಾಯಿತು.
ಶ್ರೀನಿಧಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಕಡಿದಾಳ್ ಗೋಪಾಲ್ ಅಧ್ಯಕ್ಷತೆ ವಹಿಸಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು. ಖಜಾಂಚಿ ಕಿಮ್ಮನೆ ದೇವಪ್ಪ, ಇನ್ನರ್‌ವ್ಹೀಲ್ ಜಿಲ್ಲಾ ಉಪಾಧ್ಯಕ್ಷ ಶಬರಿ ಕಡಿದಾಳ್, ಆಡಳಿತಾಧಿಕಾರಿ ಟಿ.ಪಿ.ನಾಗರಾಜ, ಗುರುಮೂರ್ತಿ ಗೌಡ, ಮುಖ್ಯಶಿಕ್ಷಕರು, ಶಿಕ್ಷಕರು, ಉಪಸ್ಥಿತರಿದ್ದರು. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.