ದಾವಣಗೆರೆ : ಸ್ನಾತಕೋತ್ತರ ಪದವಿ ಪಡೆದಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗಳಿಗೆ ಮುಂಬಡ್ತಿ ನೀಡಲು ಪಟ್ಟಿಯನ್ನು ಒದಗಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ರಾಜ್ಯದ ಶಿಕ್ಷಣ ಇಲಾಖೆಯ ಎಲ್ಲ ಜಿಲ್ಲಾ ಉನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿನ ಉಪನ್ಯಾಸಕರ ಹುದ್ದೆಗೆ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್-2 ಸಹಶಿಕ್ಷಕರ ವೃಂದದಿಂದ ಉಪನ್ಯಾಸಕರ ವೃಂದಕ್ಕೆ ಬಡ್ತಿ ನೀಡಲು ಸ್ನಾತಕೋತ್ತರ ಪದವಿ ಪಡೆದಿರುವ ಗ್ರೇಡ್-2 ಸಹಶಿಕ್ಷಕರುಗಳ ಮಾಹಿತಿಯನ್ನು ನೀಡಬೇಕು.ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರುಗಳಿಂದ ವಿವಿಧ ದಿನಾಂಕಗಳಂದು ಈ ಕಛೇರಿಗೆ ಸ್ವೀಕೃತವಾದ ಮಾಹಿತಿಯಂತೆ ಸ್ನಾತಕೋತ್ತರ ಪದವಿ ಪಡೆದಿರುವ ಶಿಕ್ಷಕರ ಮಾಹಿತಿಯನ್ನು ಕ್ರೋಢೀಕರಿಸಿ ಪಟ್ಟಿಯಲ್ಲಿ ನಮೂದಿಸಲಾಗಿದೆ.
ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ, ಜೇಷ್ಠತಾ ಪಟ್ಟಿಯ ಅನುಸಾರ ಸುಮಾರು 8344 ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದಿರುವ ಬಗ್ಗೆ ಮಾಹಿತಿ ಇರುತ್ತದೆ. ಆದರೆ ಜಿಲ್ಲೆಗಳಿಂದ ಬಂದಿರುವ ಮಾಹಿತಿಯಂತೆ ಶಿಕ್ಷಕರು ಅಂಕಪಟ್ಟಿಗಳನ್ನು ನೀಡಿರುವ ಮಾಹಿತಿಯಂತೆ 7704 ಶಿಕ್ಷಕರ ಮಾಹಿತಿಯನ್ನು ವಿಷಯವಾರು ನಮೂದಿಸಲಾಗಿರುತ್ತದೆ.ಉಳಿದಂತೆ ಎಲ್ಲಾ ಜಿಲ್ಲೆಗಳು ಸೇರಿ 640 ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಸಹಶಿಕ್ಷಕರ ಜೇಷ್ಠತಾ ಪಟ್ಟಿ ತಯಾರಿಸುವ ಸಮಯದಲ್ಲಿ ನಮೂದಿಸಲಾಗಿದೆ.
ಶಿಕ್ಷಕರಿಂದ ಅಂಕಪಟ್ಟಿ ದಾಖಲೆಗಳನ್ನು ನೀಡಿರುವ ಬಗ್ಗೆ ಜಿಲ್ಲೆ ಉಪನಿರ್ದೇಶಕರುಗಳು ಮಾಹಿತಿ ನೀಡಿಲ್ಲ. ಆದ್ದರಿಂದ ಈ ಪತ್ರದೊಂದಿಗೆ ಲಗತ್ತಿಸಿರುವ ಜಿಲ್ಲಾವಾರು ಪಟ್ಟಿಯಲ್ಲಿರುವ ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದಿರುವ ಬಗ್ಗೆ ವಿಷಯವಾರು ಮಾಹಿತಿಯನ್ನು 7 ದಿನಗಳೊಳಗಾಗಿ ಈ ಕಛೇರಿಗೆ ಮುದ್ದಾಂ ಸಲ್ಲಿಸಲು ತಿಳಿಸಿದೆ. ತಪ್ಪಿದ್ದಲ್ಲಿ ಮಾಹಿತಿಯನ್ನು ಸಲ್ಲಿಸದಿರುವ ಬಗ್ಗೆ ಮಾನ್ಯ ಆಯುಕ್ತರಿಗೆ ವರದಿ ಮಾಡಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.