
ದಾವಣಗೆರೆ : ಶಿಗ್ಗಾವಿ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಎದುರಾಗಿದ್ದ ಬಂಡಾಯ ಥಂಡಾವಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಫಿಲ್ಡ್ಗೆ ಎಂಟ್ರಿ ಕೊಡುವ ಮೂಲಕ ಬಂಡಾಯ ತಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಲು ಮುಂದಾಗಿದ್ದು ಎನ್ಡಿಎಗೆ ಟಕ್ಕರ್ ನೀಡುತ್ತಿದ್ದಾರೆ.ಹಾಗಾದ್ರೆ ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಮಗನಿಗೆ ಕಾಯ್ದಿದೆನಾ ಅಗ್ನಿ ಪರೀಕ್ಷೆ? ಇಬ್ಬರು ಮಾಜಿ ಸಿಎಂ ಪುತ್ರರ ಕತೆಯೇನು? ಈ ಕುರಿತು ಮಹತ್ವದ ಸ್ಟೋರಿ ಇಲ್ಲಿದೆ.
ರಾಜ್ಯ ರಾಜಕಾರಣದಲ್ಲಿ ಸದ್ಯ ಚುನಾವಣೆಯದ್ದೆ ಸದ್ದು. ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಬಗ್ಗೆ ಮೂರೂ ಪಕ್ಷಗಳು ಗಮನ ಹರಿಸಿವೆ. ಬಿಜೆಪಿ ಹಾಗೂ ಜೆಡಿಎಸ್ ಎನ್ಡಿಎ ಒಕ್ಕೂಟ ಮಾಡಿಕೊಂಡು ಬಿಜೆಪಿ ಎರಡು ಹಾಗೂ ಜೆಡಿಎಸ್ ಒಂದು ಕಡೆ ಸ್ಪರ್ಧೆ ಮಾಡಿವೆ. ಆದರೆ, ಕಾಂಗ್ರೆಸ್ ಮೂರೂ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದ್ದು ಸರ್ಕಾರ ಇರುವ ಕಾರಣ ತನ್ನ ಶಕ್ತಿ ಮೀರಿ ಕೆಲಸ ಮಾಡಲು ಮುಂದಾಗಿದೆ. ವಿಪಕ್ಷಗಳು ಸರ್ಕಾರದ ವೈಫಲ್ಯ ಹಿಡಿದು ಹೋರಾಟ ಮಾಡುತ್ತಿವೆ.
ಇದರ ನಡುವೆ ಶಿಗ್ಗಾವಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಂಡಾಯ ಎದುರಾಗಿತ್ತು. ಇದು ಸರ್ಕಾರಕ್ಕೆ ತಲೆ ತಂದಿದ್ದು ಮಾತ್ರವಲ್ಲ ಮುಸ್ಲಿಂ ಮತಗಳು ವಿಭಜನೆಯಾಗಲಿವೆ ಎನ್ನುವ ಆತಂಕಕೂಡ ಮನೆ ಮಾಡಿತ್ತು. ಇದರ ಸುಳಿವು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಫಿಲ್ಡ್ಗೆ ಎಂಟ್ರಿ ಕೊಟ್ಟಿದ್ದು ಬಂಡಾಯ ಥಂಡ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಮುಸ್ಲಿಂ ಮತಗಳು ಚದುರಿ ಹೋಗದಂತೆ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದ್ದಾರೆ.

ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವವ ಮೂಲಕ ಆರಂಭಿಸಿವೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡೆದ್ದ ಅಜ್ಜಂಪೀರ್ ಖಾದ್ರಿ ಕೊನೆಗಳಿಗೆಯಲ್ಲಿ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಅವರನ್ನು ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸುಮಾರು ಅರ್ಧಗಂಟೆ ಅಜ್ಜಂಪೀರ್ ಖಾದ್ರಿ ಅವರೊಂದಿಗೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು, ಬಿಜೆಪಿ ಅಭ್ಯರ್ಥಿ ಸೋಲಿಸಬೇಕು, ನೀನು ಪಕ್ಷದ ಪರ ಕೆಲಸ ಮಾಡು ಎಂದು ಮನವೊಲಿಸಿದ್ದು, ಮಾಜಿ ಶಾಸಕ ಅಜ್ಜಂಪೀರ್ ತಮ್ಮ ನಾಮಪತ್ರ ವಾಪಸ್ ಪಡೆಯುತ್ತಾರೆ ಎನ್ನಲಾಗಿದೆ. ಆದರೆ, ಮತ್ತೋರ್ವ ಬಂಡಾಯ ಅಭ್ಯರ್ಥಿ ಮಂಜುನಾಥ್ ಕುನ್ನೂರು ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು ಕೇಳಿಬಂದಿತ್ತು. ಆದರೆ, ಅಲ್ಪಸಂಖ್ಯಾತ ಮುಸ್ಲಿಂ ಮತದಾರರು ಹೆಚ್ಚಿರುವ ಕಾರಣ ಪಠಾಣೆಗೆ ಟಿಕೆಟ್ ನೀಡಲಾಗಿದೆ. ಇದರಿಂದ ಕಾಂಗ್ರೆಸ್ನ ಪ್ರಭಾವಿ ನಾಯಕ ಮಂಜುನಾಥ ಕನ್ನೂರು ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯ ಬಾವುಟ ಹಾರಿಸಿದ್ದಾರೆ.