ನಂದೀಶ್ ಭದ್ರಾವತಿ, ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಕಣ ಮದಗಜಗಳ ಹೋರಾಟದ ಜತೆಗೆ, ವದಂತಿಗಳ ಕೇಂದ್ರಬಿಂದವೂ ಆಗಿದೆ. ಒಕ್ಕಲಿಗ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ಹೋರಾಟದ ನಡುವೆ, ಒಕ್ಕಲಿಗ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲು ಯೋಜಿಸಲಾಗುತ್ತಿದೆ. ಹೀಗಾಗಿ ಚನ್ನಪಟ್ಟಣ ಉಪಚುನಾವಣೆ ಒಕ್ಕಲಿಗರ ಪ್ರಬಲ ನಾಯಕರಿಬ್ಬರ ನಡುವಿನ ಪ್ರತಿಷ್ಠೆಯಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಸೋಲುಂಡು ಹಸಿದ ಹುಲಿಯಂತಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣ ಉಪಚುನಾವಣೆ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಗೆಲ್ಲಲೇಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ. ಹಾಗಾದ್ರೆ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ? ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಯಿತಾ ಮೈತ್ರಿಕೂಟ..?
ಚನ್ನಪಟ್ಟಣ ಉಪಚುನಾವಣೆ ಈ ಬಾರಿ ದೇಶದ ಗಮನ ಸೆಳೆಯಲಿದೆ. ಯಾಕಂದ್ರೆ, ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಡಿಸಿಎಂ ಡಿಕೆ ಶಿವಕುಮಾರ್ ಅಖಾಡದ ನೇರ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಚನ್ನಪಟ್ಟಣ ರಣಕಣವಾಗಿ ಮಾರ್ಪಟ್ಟಿದೆ. ಮತ್ತೊಂದು ಕಡೆ ಬೆಂಗಳೂರು ಗ್ರಾಮಾಂತರದಲ್ಲಿ ಗೆದ್ದು ಬೀಗುತ್ತಿರುವ ಎನ್ಡಿಎ ಮೈತ್ರಿಕೂಟ ಡಿ.ಕೆ ಸಹೋದರರನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸುವ ಯೋಜನೆ ರೂಪಿಸಿವೆ.
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಂತರದಲ್ಲಿ ಡಿ.ಕೆ.ಸುರೇಶ್ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಒಂದು ವೇಳೆ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಹಾಗೂ ಕಾಂಗ್ರೆಸ್ ನ ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ಪತ್ನಿ ಅನಸೂಯಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಚಿಂತನೆ ನಡೆಸಿವೆ.
ಅನುಸೂಯಾ ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರು ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಅನಸೂಯಾ ಅವರನ್ನು ಕಣಕ್ಕಿಳಿಸಿದರೆ ಯಾವೆಲ್ಲ ಪ್ರಯೋಜನಗಳು ಆಗಬಹುದು ಮತ್ತು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಉಭಯ ಪಕ್ಷಗಳ ನಾಯಕರು ತೊಡಗಿದ್ದಾರೆ ಎನ್ನಲಾಗ್ತಿದೆ.
ಎಚ್.ಡಿ. ಕುಮಾರಸ್ವಾಮಿ ಈಗ ಕೇಂದ್ರ ಸಚಿವರಾಗಿದ್ದಾರೆ. ಜತೆಗೆ ಚನ್ನಪಟ್ಟಣದಲ್ಲಿ ರಾಜಿನಾಮೆಯಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವು ಕಾಣಲೇಬೇಕು. ಹೀಗಾಗಿ ಭದ್ರಕೋಟೆ ಉಳಿಸಿಕೊಳ್ಳಲು ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚು ಎನ್ನಲಾಗ್ತಿದೆ.
ಒಟ್ಟಾರೆ.. ಉಪಚನಾವಣೆಯನ್ನು ಜೆಡಿಎಸ್ ಬಿಜೆಪಿ ಗಂಭೀರವಾಗಿ ಪರಿಗಣಿಸಿ, ಆಡಳಿತರೂಢ ಕಾಂಗ್ರೆಸ್ಗೆ ಸೆಡ್ಡು ಹೊಡೆಯುವುದಕ್ಕೆ ಸಜ್ಜಾಗಿ ನಿಂತಿವೆ.