- ಚನ್ನಗಿರಿ: ಕನ್ನಡ ನಾಡು ಮತ್ತು ಕನ್ನಡ ಚಿತ್ರರಂಗವು ಕನ್ನಡ ನಾಡಿನ ರತ್ನದಂತಹ ನಟನನ್ನು ಕಳೆದುಕೊಂಡಿದ್ದರೂ ಪುನೀತ್‌ರಾಜ್‌ಕುಮಾರ್‌ರವರ ಕನ್ನಡ ನಾಡಿನ ಪ್ರತಿಯೊಬ್ಬರ ಮನ ಮನದಲ್ಲಿ ಉಳಿದಿದ್ದಾರೆ ಎಂದು ಶಾಸಕ ಬಸವರಾಜು ಶಿವಗಂಗಾ ಹೇಳಿದರು.
ತಾಲೂಕಿನ ನಲ್ಲೂರು ಗ್ರಾಮದಲ್ಲಿ ದಿವಗಂತ ಡಾ.ಪುನೀತ್ ರಾಜ್‌ಕುಮಾರ್‌ರವರ 161 ಕೆ.ಜಿ. ತೂಕದ 3.60.000 ರೂ ವೆಚ್ಚದ ಪುತ್ಥಳಿಯನ್ನು ಅನಾವರಣ ಮಾಡಿ ಮಾತನಾಡಿ, ಪುನೀತ್‌ರಾಜ್‌ಕುಮಾರ್ ನಮಗೆಲ್ಲಾ ಅದರ್ಶದ ವ್ಯಕ್ತಿಯಾಗಿದ್ದಾರೆ. ಅವರು ನಟರಾಗಿದ್ದಾಗ ನಟನೆಯ ಮೂಲಕ ಜನರ ಮನದಲ್ಲಿ ಉಳಿದರೆ ಮತ್ತೊಂದು ಭಾಗವಾಗಿ ಕನ್ನಡ ನಾಡಿನ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದರು. ಉತ್ತಮ ಸಂಸ್ಕಾರಗಳನ್ನು ಅವರ ಜೀವನದಲ್ಲಿ ಸಹ ಅಳವಡಿಸಿಕೊಂಡಿದ್ದರು ಎಂದರು.
ಅಪ್ಪು ಪುತ್ಥಳಿ ಲೋಕಾರ್ಪಣೆ
ಪ್ರಥಮ ದರ್ಜೆ ಗುತ್ತಿಗೆದಾರ ಆರ್. ಪರಮೇಶ್ ಮಾತನಾಡಿ, ಅಪ್ಪು ಅಭಿಮಾನಿ ಬಳಗದವರು ಅವರ ಅಭಿಮಾನ ಪ್ರೀತಿಯಿಂದ ಪುತ್ಥಳಿ ನಿರ್ಮಾಣ ಮಾಡಲು ರೇಖಾ ಪರಮೇಶ್‌ರವರಲ್ಲಿ ಕೇಳಕೊಂಡಾಗ ಪ್ರೀತಿಯಿಂದ ಒಪ್ಪಿಕೊಂಡರು. ಕಳೆದ ಎರಡು ವರ್ಷಗಳಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು ಇಂದು ಲೋಕಾರ್ಪಣೆ ಮಾಡಲಾಗಿದೆ. ಅಪ್ಪುರವರು ನಮ್ಮ ಜೊತೆಯಲ್ಲಿ ಇಲ್ಲ. ಆದರೆ ಅವರು ಮಾಡಿರುವಂತಹ ಸೇವೆ ಜನರ ಮನದಲ್ಲಿ ಉಳಿದಿದೆ ಎಂದರು.
ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ ಪುನೀತ್‌ರಾಜ್‌ಕುಮಾರ್‌ರವರ ಪುತ್ಥಳಿಯನ್ನು ನಲ್ಲೂರು ಅಪ್ಪು ಅಭಿಮಾನಿ ಬಳಗದವರು ನಿರ್ಮಾಣ ಮಾಡಿರುವುದು ಶ್ಲಾಘನೀಯ. ನಾವು ಸಮಾಜದಲ್ಲಿ ಬದುಕಿದಾಗಿ ನಾವು ಮಾಡಿರುವ ಒಳ್ಳೆಯ ಕಾರ್ಯಗಳು ಮಾತ್ರವೇ ನಾವು ಇಲ್ಲದೇ ಇದ್ದಾಗ ನೆನಪಿಸುತ್ತವೆ. ಪ್ರತಿದಿನ ಅವರ ಪುತ್ಥಳಿಯನ್ನು ನೋಡುತ್ತಾ ಇದ್ದರೆ ಮಕ್ಕಳಲ್ಲಿ ಯುವಕರಲ್ಲಿ ಅವರಂತೆ ನಾನಾಗಬೇಕು ಎಂಬ ಭಾವನೆ ಮೂಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಎಂ.ಯೋಗೇಶ್, ತುಮ್‌ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ನಲ್ಲೂರು ಗ್ರಾಮದ ಮುಖಂಡರು, ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು, ಪಿ.ಡಿ.ಓ ಪ್ರಸನ್ನಕುಮಾರ್ ಇತರರು ಹಾಜರಿದ್ದರು. ಜೂನಿಯರ್ ಪುನೀತ್‌ರಾಜ್‌ಕುಮಾರ್ ಪುನೀತ್ ರಾಜ್‌ಕುಮಾರ್ ಹಾಡುಗಳನ್ನು ಹೇಳಿದರು. ಪುನೀತ್ ಸವಿನೆನಪಿನ ಅಂಗವಾಗಿ ರಕ್ತದಾನ ಶಿಬಿರ ಮತ್ತು ಗ್ರಾಮದ ಜನರಿಗೆ ಅನ್ನಸಂತರ್ಪಣೆ ಕಾರ್ಯ ನಡೆಸಲಾಯಿತು .
….
ವರದಿ ಸತೀಶ್ ಎಂ ಪವಾರ್ ದಾವಣಗೆರೆ ವಿಜಯ ಚನ್ನಗಿರಿ