ದಾವಣಗೆರೆ : ಇಪ್ಪತ್ತನೆಯ ಶತಮಾನದಲ್ಲಿ ಕವಿಗಳು, ಸಾಹಿತಿಗಳು, ಸಾಂಸ್ಕೃತಿಕ ಚಿಂತಕರು ಒಟ್ಟಿಗೆ ಸೇರಲು ಸಾಂಸ್ಥಿಕ ರೂಪವೊಂದರ ಅಗತ್ಯವು ಕಾಣಿಸಿಕೊಂಡಿತು. ಸಾಹಿತ್ಯ ಸಂಸ್ಥೆಗಳು ಕವಿ, ಸಾಹಿತಿಗಳು ಹಂಚಿಕೊಳ್ಳುವ ಬಯಕೆಗಳ ಒಂದು ಮೂರ್ತರೂಪ, ಕನ್ನಡ ಸಂದರ್ಭದಲ್ಲಿ ಬಂದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿಕೊಂಡಿತು.
ಅಲ್ಲಿಯವರೆಗೆ ಬಿಡಿಬಿಡಿಯಾಗಿದ್ದ ಕನ್ನಡ ಪ್ರದೇಶಗಳಲ್ಲಿ ಸ್ಥಳೀಯವಾಗಿ ಸಾಹಿತ್ಯ ಸಂಘಟನೆಗಳು ಇದ್ದರೂ ಕನ್ನಡ ಮಾತನಾಡುವ ಮತ್ತು ಕನ್ನಡದಲ್ಲಿ ಬರೆಯುವ ಜನರಿಗೆ ಒಂದು ಭಾವನಾತ್ಮಕ ಅಖಂಡತೆಯ ಕಲ್ಪನೆಯನ್ನು ತಂದುಕೊಟ್ಟಿದ್ದು ಕನ್ನಡ ಸಾಹಿತ್ಯ ಪರಿಷತ್ತು. ಇಂತಹ ಕೆಲಸವನ್ನು ಮಾಡುವ ವ್ಯಾಪಕ ಸಂಸ್ಥೆಗಳು ಇಲ್ಲದೆ ಇದ್ದ ಕಾಲದಲ್ಲಿ ‘ಪರಿಷತ್ತು’ ಕನ್ನಡ ಜನ ವಾಸಿಸುವ ಬೇರೆಬೇರೆ ಸ್ಥಳಗಳಲ್ಲಿ ವಾರ್ಷಿಕ ಸಮ್ಮೇಳನಗಳನ್ನು ನಡೆಸುವ ಒಂದು ಸಾಂಸ್ಕ್ರತಿಕ ಸಂವಹನ ಪ್ರಕ್ರಿಯೆಯನ್ನು ಆರಂಭಮಾಡಿತು. ಒಂದು ಕಾಲಕ್ಕೆ ನಮ್ಮ ಜನರಿಗೆ ವರ್ಷಕ್ಕೆ ಒಂದೇ ಒಂದು ಬಾರಿ ಜನರು ಒಟ್ಟಿಗೆ ಸೇರಲು ಅವಕಾಶವಿದ್ದ ಊರ ಜಾತ್ರೆಗಳಂತೆ ‘ಸಾಹಿತ್ಯ ಸಮ್ಮೇಳನ’ಗಳಿಗೆ ವಿಶೇಷ ಬಗೆಯ ಸಂಭ್ರಮ, ಉಲ್ಲಾಸ ಮತ್ತು ರೋಮಾಂಚನದ ಗುಣಗಳಿದ್ದವು.
ತಾವು ಓದಿದ, ಕೇಳಿದ ಕವಿಗಳನ್ನು, ಸಾಹಿತಿಗಳನ್ನು ಕಾಣುವುದು, ಮಾತನಾಡಿಸುವುದು, ಅವರ ಮಾತುಗಳನ್ನು ಆಲಿಸುವುದು ಇದೆಲ್ಲ, ಊರ ಹಬ್ಬದ ಸಂಭ್ರಮದ ಉತ್ಸಾಹವನ್ನು ತಂದು ಕೊಡುತ್ತಿದ್ದವು. ಈಗ ಸುಮಾರು 1915 ರಿಂದ 2024ರ ವರೆಗೆ ಅಂದರೆ 109 ವರ್ಷಗಳ ಬಳಿಕ ಕರ್ನಾಟಕ ತನ್ನ ಭೌಗೋಳಿಕ, ರಾಜಕೀಯ, ಆರ್ಥಿಕ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಸಾಹಿತ್ಯ ಮತ್ತು ಸಂಸ್ಕøತಿಗಳು, ‘ಉದ್ಧೇಶ’ ಮತ್ತು ‘ಪರಿಣಾಮ’ಗಳಲ್ಲಿ ಬೇರೆಯೇ ಆದಂತಹ ಆಕೃತಿಗಳನ್ನು ಪಡೆದುಕೊಂಡಿವೆ.
ಕನ್ನಡ ಸಾಹಿತ್ಯ ಪರಿಷತ್ತು ಹಿನ್ನಲೆ:
ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕುರಿತು ಚಿಂತನ-ಮಂಥನ ನಡೆಸಲು, ನಾಡಿನ ಜನರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮಹತ್ವದ ವೇದಿಕೆ ಅಗತ್ಯವಾಗಿತ್ತು. ಅದನ್ನೊದಗಿಸುವ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ದಿನಾಂಕ:5-5-1915ರಲ್ಲಿ, ಸ್ಥಾಪನೆಯಾಯಿತು. ಕನ್ನಡಿಗರ ಸಾಂಸ್ಕ್ರತಿಕ ಮೇರು ಸಂಸ್ಥೆಯೇ ಈ ‘ಸಾಹಿತ್ಯ ಪರಿಷತ್ತು’. 1914ರಲ್ಲಿ ಮೈಸೂರು ಸಂಸ್ಥಾನ ಸಂಪದಭ್ಯುದಯ ಸಮಾಜ ತನ್ನ ವಾರ್ಷಿಕ ಅಧಿವೇಶನದಲ್ಲಿ ಕೈಗೊಂಡ ನಿರ್ಧಾರ ‘ಪರಿಷತ್ತು’ ಉಗಮಕ್ಕೆ ಕಾರಣವಾಯ್ತು.
ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ‘ಪರಿಷತ್ತಿನ’ ಸ್ಥಾಪನೆಗೆ ಚಾಲನೆ ನೀಡಿದರು.ಬೆಂಗಳೂರಿನ ಶಂಕರಪುರಂ ಬಡಾವಣೆಯಲ್ಲಿ ಚಿಕ್ಕ ಕೊಠಡಿಯಲ್ಲಿ ಆರಂಭವಾದ ಅಂದಿನ ‘ಕರ್ನಾಟಕ ಸಾಹಿತ್ಯ ಪರಿಷತ್ತು’ 1935ರಲ್ಲಿ ಈ ಹೆಸರನ್ನು ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಬದಲಾಯಿಸಿಕೊಂಡಿತು. ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡನಾಡು – ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆಯಾಗಿದೆ. ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ‘ಪರಿಷತ್ತು’ ರಚನೆಗೊಂಡು 109 ವರ್ಷಗಳಾದವು. ಹೀಗಾಗಿ ಪರಿಷತ್ತಿನ 110ನೇ ಸ್ಥಾಪನಾ ದಿನಾಚರಣೆ ಸಮಗ್ರ ಕನ್ನಡಿಗರ ಸಂಭ್ರಮವೂ ಹೌದು. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ-ಮೂಲೆಗಳಲ್ಲಿ ಹಬ್ಬಿಸುವ ಆಶಯ ಹೊಂದಿದೆ. ಪರಿಷತ್ತು ಪ್ರಸ್ತುತ ಮೂರು ಲಕ್ಷ ಇಪ್ಪತ್ತೈದು ಸಾವಿರ ಸದಸ್ಯರನ್ನು ಹೊಂದಿದೆ.
ಸಾಹಿತ್ಯ ಪರಿಷತ್ತಿನ 109ವರ್ಷದ ಸಾರಥಿಗಳು:
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ‘ಕನ್ನಡ ಸಾಹಿತ್ಯ ಪರಿಷತ್ತು’ ರಚನೆಗೊಂಡು ಮೇ-5ಕ್ಕೆ 109 ವರ್ಷಗಳಾದವು. 1915 ರಿಂದ 1924ರ ವರೆಗೆ ಪರಿಷತ್ತು 26 ಜನ ಅಧ್ಯಕ್ಷರನ್ನು ತನ್ನ ಕನ್ನಡ ನಾಡು-ನುಡಿಯ ಸೇವೆಗಾಗಿ ಪಡೆದುಕೊಂಡಿದೆ. 1915 ರಿಂದ 1940ರ ವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು. 1915-1920ರ ವರೆಗೆ ಎಚ್.ವಿ. ನಂಜುಂಡಯ್ಯ, 1920-1923 ಸರ್.ಎಂ. ಕಾಂತರಾಜ ಅರಸ್, 1924-1940 ಶ್ರೀಕಂಠಿರವ ನರಸಿಂಹರಾಜ ಒಡೆಯರ್ ಬಹದ್ದೂರ್ ನಂತರ ಶ್ರೀ ಜಯ ಚಾಮರಾಜ ಒಡೆಯರ್ ಬಹದ್ದೂರ್, 1941-1946 ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್, ಶ್ರೀ ಲೋಕುರು ನಾರಾಯಣರಾವ್ ಸ್ವಾಮಿರಾವ್, 1947-1949 ಶ್ರೀ ತಿರುಮಲೆ ತಾತಾಚಾರ್ಯಶರ್ಮ, ರೆವರೆಂಡ್ ಉತ್ತಂಗಿ ಚನ್ನಪ್ಪ, ಎಂ.ಆರ್. ಶ್ರೀನಿವಾಸಮೂರ್ತಿ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪ್ರೊ.ಎ.ಎನ್. ಮೂರ್ತಿರಾಯರು, ಬಿ. ಶಿವಮೂರ್ತಿಶಾಸ್ತ್ರಿ, ಪ್ರೊ. ಜಿ. ವೆಂಕಟಸುಬ್ಬಯ್ಯ, ಜಿ. ನಾರಾಯಣ, ಡಾ. ಹಂಪಾನಾಗರಾಜಯ್ಯ, ಹೆಚ್.ಬಿ. ಜ್ವಾಲನಯ್ಯ, ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ, ಗೊ.ರು. ಚನ್ನಬಸಪ್ಪ, ಡಾ. ಸಾ.ಸಿ. ಮರಳಯ್ಯ, ಎನ್. ಬಸವರಾಧ್ಯ, ಹರಿಕೃಷ್ಣ ಪುನರೂರು, ಪ್ರೊ. ಚಂದ್ರಶೇಖರ ಪಾಟೀಲ್ (ಚಂಪಾ), ಡಾ. ನಲ್ಲೂರು ಪ್ರಸಾದ್, ಪುಂಡಲೀಕ ಹಾಲಂಬಿ, ಡಾ. ಮನುಬಳಿಗಾರ, ಡಾ. ಮಹೇಶ ಜೋಶಿ (22-11-2021 ರಿಂದ 21-11-2026ರ ವರೆಗೆ) ಒಟ್ಟು 26 ಅಧ್ಯಕ್ಷರನ್ನು ಕ.ಸಾ.ಪ. ತನ್ನ ಸಾರಥಿಗಳನ್ನಾಗಿ, ಅಧ್ಯಕ್ಷರನ್ನಾಗಿ ಕ.ಸಾ.ಪ ಮತದಾರರ ಮೂಲಕ ನೇಮಿಸಿಕೊಂಡಿದೆ.
ಕ.ಸಾ.ಪ. ಸಮ್ಮೇಳನಕ್ಕೆ ಸಾಹಿತ್ಯ ದಿಗ್ಗಜರ ಅಧ್ಯಕ್ಷತೆ:
ಕನ್ನಡ ಸಾಹಿತ್ಯ ಸಮ್ಮೇಳನ ಬರಹಗಾರರು, ಕವಿ, ಸಾಹಿತಿಗಳ ಮತ್ತು ಕನ್ನಡಿಗರ ಪ್ರಧಾನ ಸಭೆಯಾಗಿದೆ. ‘ಕನ್ನಡ ಭಾಷೆ’, ಅದರ ಸಾಹಿತ್ಯ, ಕಲೆ, ಸಂಸ್ಕøತಿ ಮತ್ತು ಸಂಗೀತವನ್ನು ಉಳಿಸುವ ಮತ್ತು ಅಭಿವೃದ್ಧಿ ಪಡಿಸುವ ಉದ್ಧೇಶದಿಂದ ಸಮ್ಮೇಳನ ನಡೆಸಲಾಗುತ್ತಿದೆ. ಇದನ್ನೂ 1915ರಲ್ಲಿ ಎಚ್.ವಿ. ನಂಜುಂಡಯ್ಯನವರು ಆರಂಭಿಸಿದರು. ಇದನ್ನು ಬೆಂಗಳೂರಿನಲ್ಲಿ ಪ್ರಥಮ ಸಮ್ಮೇಳನ ನಡೆಸಲಾಯಿತು. 1915-1948ರ ವರೆಗೆ ಕವಿ, ಸಾಹಿತಿಗಳು ಸಮ್ಮೇಳನÀಗಳನ್ನು ಉದ್ಘಾಟಿಸಿದರು ನಂತರ ಕರ್ನಾಟಕದ ಮುಖ್ಯಮಂತ್ರಿಗಳು ಉದ್ಘಾಟಿಸುವ ಸಂಪ್ರದಾಯ ಆರಂಭಗೊಂಡಿತು. ಕ.ಸಾ.ಪ.ಗೆ ಸಮ್ಮೇಳನ ನಡೆಸುವ ಹೊಣೆ ಇದೆ. ಇಲ್ಲಿಯವರೆಗೆ 86 ಸಮ್ಮೇಳನಗಳು ನಡೆದಿವೆ. ಈ ಸಮ್ಮೇಳನಕ್ಕೆ ನಾಡಿನ ಹೆಸರಾಂತ ಸಾಹಿತ್ಯ ದಿಗ್ಗಜರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನೇಮಿಸಿ ಕನ್ನಡದ ತೇರು ಎಳೆಯಲು ಕನ್ನಡಿಗರು ಸಹಕರಿಸಿದ್ದಾರೆ. ಸಾಹಿತ್ಯ ದಿಗ್ಗಜರನ್ನು ಗುರುತಿಸಿದ್ದಾರೆ.
ಪ್ರಥಮ ಸಮ್ಮೇಳನವನ್ನು ಎಚ್.ವಿ. ನಂಜುಂಡಯ್ಯ ಉದ್ಘಾಟಿಸಿದರು. 1918ರಲ್ಲಿ ಧಾರವಾಡದಲ್ಲಿ ನಡೆದ ಸಮ್ಮೇಳನವನ್ನು ಆರ್. ನರಸಿಂಹಾಚಾರ್ ಉದ್ಘಾಟಿಸಿದರು. 1935ರಲ್ಲಿ ಮುಂಬೈನಲ್ಲಿ ನಡೆದ ಸಮ್ಮೇಳನವನ್ನು ಎನ್.ಎಸ್. ಸುಬ್ಬರಾವ್, 1941ರಲ್ಲಿ ಹೈದ್ರಾಬಾದ್ನಲ್ಲಿ ಎ.ಆರ್. ಕೃಷ್ಣಶಾಸ್ತ್ರಿ, 1945 ರಲ್ಲಿ ನಡೆದ 29ನೇ ಸಮ್ಮೇಳನವನ್ನು ಟಿ.ಪಿ. ಕೈಲಾಸಂ, 1948ರಲ್ಲಿ ಕಾಸರಗೋಡ್ನಲ್ಲಿ ಟಿ.ಟಿ. ಶರ್ಮ, 1950ರಲ್ಲಿ ಸೊಲ್ಲಾಪುರದಲ್ಲಿ ಎಂ.ಆರ್. ಶ್ರೀನಿವಾಸ್ಮೂರ್ತಿ, 1951ರಲ್ಲಿ ಮುಂಬೈನಲ್ಲಿ ಎಂ.ಗೋವಿಂದ ಪೈ, 1978 ದೆಹಲಿಯಲ್ಲಿ ನಡೆದ 50ನೇ ಸಮ್ಮೇಳನವನ್ನು ಜಿ.ಪಿ. ರಾಜರತ್ನಂ. ಹೀಗೆ ರಾಜ್ಯದ ಹೊರಗೂ ಸಮ್ಮೇಳನ ನಡೆದಿವೆ. ಕರ್ನಾಟಕ ರಾಜ್ಯದ್ಯಾಂತ ಎಲ್ಲಾ ಜಿಲ್ಲೆಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆದಿವೆ. 86ನೇ ಸಮ್ಮೇಳನ ಹಾವೇರಿಯಲ್ಲಿ ಸಾಹಿತಿ ದೊಡ್ಡರಂಗೇಗೌಡ್ರು ಉದ್ಘಾಟಿಸಿದರು. ಈಗ 87ನೇ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಬೇಕಾಗಿದೆ.
ಲೆಕ್ಕಕ್ಕಿಲ್ಲದ ಕ.ಸಾ.ಪ ನಿರ್ಣಯಗಳು
ಕ.ಸಾ.ಪ. ಇಲ್ಲಿಯವರೆಗೆ ನಡೆಸಿದ 86 ಸಾಹಿತ್ಯ ಸಮ್ಮೇಳನಗಳಲ್ಲಿ ಬಹುತೇಕ ನಿರ್ಣಯಗಳನ್ನು ಕೈಗೊಳ್ಳುತ್ತಾ ಬಂದರೂ ಸರ್ಕಾರಕ್ಕೆ ಈ ನಿರ್ಣಯಗಳು ಲೆಕ್ಕಕ್ಕಿಲ್ಲದ ಸ್ಥಿತಿಯನ್ನು ಗಮನಿಸಬಹುದು. ಕ.ಸಾ.ಪ. ಸಾಹಿತ್ಯ ಸಮ್ಮೇಳನ ನಿರ್ಣಯಗಳಿಗೆ ಏನಿದೆ ಬೆಲೆ? ಎಂದು 1945ರಲ್ಲಿ ಮದ್ರಾಸ್ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಟಿ.ಪಿ. ಕೈಲಾಸಂ ಮಾಡಿದ್ದ ಗೇಲಿ ಇದು. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. 1918ರಲ್ಲಿ ಧಾರವಾಡದಲ್ಲಿ ನಡೆದ ಸಮ್ಮೇಳನದಿಂದ ಗೊತ್ತುವಳಿ ಪರಿಪಾಠ ಆರಂಭವಾಯ್ತು. ಅದಕ್ಕೆ ಕಾರಣ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಮೈಸೂರು ಸಂಸ್ಥಾನದ ಆಗಿನ ದಿವಾನ್ ಕಾಂತರಾಜ ಅರಸು ರವರು ನಿರ್ಣಯಗಳ ಪರಿಪಾಠ ಪಾಸಾಗುತ್ತಾ ಹೋದವು. ಆದರೆ ಅನುಷ್ಠಾನದ ಹಂತದಲ್ಲಿ ನಪಾಸಾದವು. ಕನ್ನಡ ಕಡ್ಡಾಯ, ಆಡಳಿತ ಭಾಷೆ, ಶಿಕ್ಷಣ ಭಾಷೆ ಕನ್ನಡವಾಗಿರಬೇಕು. ಸರೋಜಿನಿಮಹಿಷಿ, ಮಹಾಜನ್ ವರದಿ, ನಂಜುಡಪ್ಪ ವರಿದಿಯ ಅನುಷ್ಠಾನ, ರಾಷ್ಟ್ರೀಯ ಭಾಷಾ ನೀತಿ ಜಾರಿ, ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯ, ಸರ್ಕಾರಿ ಶಾಲೆಗಳ ಸಬಲೀಕರಣ, ಇತ್ಯಾದಿ ನಿರ್ಣಯಗಳನ್ನು ಕೈಗೊಳ್ಳತಾ ಬಂದರೂ ರಾಜ್ಯದ ಮುಖ್ಯ ಮಂತ್ರಿಗಳು ಸಮ್ಮೇಳನವನ್ನು ಉದ್ಘಾಟಿಸಿದರೂ ಸಮ್ಮೇಳನದಲ್ಲಿ ಕೈಗೊಂಡ ಬಹುತೇಕ ನಿರ್ಣಯಗಳು ಇವತ್ತಿನವರೆಗೆ ಜಾರಿಯಾಗದೇ ಹಾಳೆಯಲ್ಲಿಯೇ ಉಳಿದಿವೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕೈಗೊಂಡ ನಿರ್ಣಯಗಳು ಜಾರಿಯಾಗಿಲ್ಲ ಎಂಬ ಅವಮಾನ ಸರಕಾರಕ್ಕೆ, ಸಮ್ಮೇಳನ ಅಧ್ಯಕ್ಷರಿಗೆ ಹಾಗೂ ಸಮಗ್ರ ಕನ್ನಡಿಗರಿಗೆ ಆಗಬಾರದು. ಈ ನಿಟ್ಟಿನಲ್ಲಿ ಸರ್ಕಾರಗಳು ಗಂಭೀರವಾಗಿ ಯೋಚಿಸುವಂತಾಗಲಿ. ವರದಿಗಳು ಜಾರಿಯಾಗದೇ ಉಳಿಯುವುದು ವಿಷಾದನೀಯ ಸಂಗತಿ.
ಸಮ್ಮೇಳನದ ಕುರಿತು ಅಭಿಪ್ರಾಯ ಭೇದಗಳು
ಬದಲಾಗುತ್ತಿರುವ ಸಂದರ್ಭದಲ್ಲಿ ಕ.ಸಾ.ಪ ಸಾಹಿತ್ಯ ಸಮ್ಮೇಳನಗಳ, ಔಚಿತ್ಯಗಳನ್ನು ಪ್ರಶ್ನಿಸುವ ಪ್ರಕ್ರಿಯೆ ಸುಮಾರು ವರ್ಷಗಳಿಂದ ಆರಂಭವಾಗಿದೆ. ಇಂತಹ ಸಮ್ಮೇಳನಗಳಿಗಾಗಿ ಮಾಡುವ ಆರ್ಥಿಕ ವೆಚ್ಛದ ಬಗ್ಗೆಯ ಸಾಕಷ್ಟು ಅಭಿಪ್ರಾಯ ಭೇದಗಳು ಸಾರ್ವಜನಿಕ ವಲಯದಲ್ಲಿ ಪ್ರಕಟವಾಗುತ್ತಿವೆ. ಕನ್ನಡ ಭಾಷೆ, ಕನ್ನಡ ಸಾಹಿತ್ಯ ಎನ್ನುವ ಮಾತುಗಳು ಇಂದು ಕೇವಲ ಸಂಭ್ರಮದ ನುಡಿಕಟ್ಟುಗಳಾಗಿ ಉಳಿದಿಲ್ಲ. ಅವು ನಮ್ಮ ನಿಜವನ್ನು ಒಳಹೊಕ್ಕು ನೋಡುವ, ತಿಕ್ಕುವ, ತೀಡುವ ಸಾಣೆ ಕಲ್ಲುಗಳು ಕೂಡಾ ಹೌದು. ಕನ್ನಡ ಭಾಷೆ ಸಾಹಿತ್ಯ, ಕನ್ನಡನಾಡು ಇವುಗಳ ಕುರಿತು ನಮ್ಮ ಪ್ರೀತಿ, ಅಭಿಮಾನಗಳ ಭಾವಾವೇಶದ ಸಂರಚನೆಗಳನ್ನು ವಿರಚನೆಗೋಳಿಸಿ ಮತ್ತೆ ಹೊಸತಾಗಿ ನೋಡಬೇಕಾಗಿದೆ.
ಕನ್ನಡವನ್ನು ಮಾತನಾಡಿದ, ಕನ್ನಡದಲ್ಲಿ ಬರೆದ ಮಾತ್ರಕ್ಕೆ ನಾವು ಕನ್ನಡ ಸಂಸ್ಕೃತಿಯನ್ನು ಬದುಕಿಸಿದಂತೆ ಹಾಗಾಗುವುದಿಲ್ಲ. ನೀತಿ ಮತ್ತು ಮೌಲ್ಯಗಳು ಮುಖ್ಯವಾಗಿಲ್ಲದೆ, ಕೇವಲ ಭಾಷೆಯೊಂದನ್ನು ತಾಂತ್ರಿಕವಾಗಿ ಬಳಸುವುದು ಮಾತ್ರ ಭಾಷಾಭಿಮಾನ ಎನ್ನುವ ನಿಲುವನ್ನು ನಾವು ಬದಲಾಯಿಸಿ ಕೊಳ್ಳಬೇಕು. ನಮ್ಮ ಭಾಷೆ, ಸಾಹಿತ್ಯ, ಕನ್ನಡಿಗರ ಬದುಕಾಗಬೇಕಾಗಿದೆ.
ಡಾ. ಗಂಗಾಧರಯ್ಯ ಹಿರೇಮಠ,ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.ಮೊ: 9880093613