ದಾವಣಗೆರೆ : ಈ ಸಲ ಜೆಡಿಎಸ್ ಒಟ್ಟು 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಆದ್ರೆ ಈ ಮೂರು ಕ್ಷೇತ್ರಗಳಲ್ಲಿ ದಳ ಗೆಲುವು ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದೆ. ಅದರಲ್ಲೂ ಆ 2 ಕ್ಷೇತ್ರಗಳಲ್ಲಿ ದಳ ಬುಡ ಗಢಗಢ ಅಲುಗಾಡ್ತಾಯಿದೆ. ಹಾಗಾದ್ರೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ್ರೇ ಬಿಟ್ಟುಕೊಟ್ಟ ಆ ಗುಟ್ಟೇನು..? BJPಗೆ ದಳ ಸಾತ್.. 3-2=0.. ಏನಿದು ದಳ ಲೆಕ್ಕ ಅಂದ್ರಾ..?
ಇದೇ ಏಪ್ರಿಲ್ 26ರಂದು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ 14 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಿರೋ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಆದ್ರೆ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆಬಿದ್ದ ದಿನವೇ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ್ರು ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಜೆಡಿಎಸ್ ಸ್ಪರ್ಧಿಸಿರೋ 3 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಸಾತ್ ಕೊಟ್ಟೇ ಇಲ್ಲ ಅಂತೇಳಿ ಹೇಳಿದ್ದಾರೆ. ದೇವೇಗೌಡ್ರ ಈ ಮಾತು ಬಿಜೆಪಿ ಮತ್ತು ಜೆಡಿಎಸ್ ನಡುವಿನ ದೋಸ್ತಿಯಲ್ಲಿ ಒಡಕು ಮೂಡಿದೆ ಅನ್ನೋದನ್ನ ಸ್ಪಷ್ಟವಾಗಿ ಎತ್ತಿ ತೋರಿಸ್ತಾಯಿದೆ. ಹೌದು ವೀಕ್ಷಕರೇ, ಹಾಸನದಲ್ಲಿ ಬಿಜೆಪಿಯ ಕೆಲವರ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ ಅಂತೇಳಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ್ರು ಹೇಳಿದ್ದಾರೆ. ಆ ಮೂಲಕ ಮೈತ್ರಿಯಲ್ಲಿ ಇನ್ನೂ ಪೂರ್ಣ ಒಮ್ಮತ ಮೂಡದಿರುವ ಬಗ್ಗೆ ಸುಳಿವು ನೀಡಿದ್ದಾರೆ.
ಹಾಸನದಲ್ಲಿ ಬಿಜೆಪಿಯ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದು ನೀವು ಕೇಳಬಹುದು. ನಾವು ಈ ಭಾಗದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಹಾಸನದಲ್ಲಿ ಬಿಜೆಪಿಯ ಕೆಲವು ವ್ಯಕ್ತಿಗಳು ಸಹಕಾರ ನೀಡದೇ ಇರುವುದು ನಿಜ. ಮಂಡ್ಯದಲ್ಲಿ ಕುಮಾರಸ್ವಾಮಿಗೆ ಸುಮಲತಾ ಸಹಾಯ ಮಾಡಿಲ್ಲ. ಹಾಗೆಂದು ಅದರಿಂದ ಕುಮಾರಸ್ವಾಮಿಗೆ ಬಹಳ ಅಪಾಯ ಆಗಿಬಿಡುತ್ತದೆ ಎನ್ನೋ ಹಾಗಿಲ್ಲ ಅಂತೇಳಿ ದೇವೇಗೌಡರು ಹೇಳಿದ್ದಾರೆ.
ಅಂದ್ರೆ ಒಂದು ಕಡೆ ಅಸಮಾಧಾನ ಹೊರ ಹಾಕುತ್ತಲೇ ದೇವೇಗೌಡ್ರು ಮತ್ತೊಂದು ಕಡೆ ಡ್ಯಾಮೇಜ್ ಕಂಟ್ರೋಲ್ ಮಾಡೋಕೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿಮಗೆ ಗೊತ್ತಿರ್ಲಿ, ಹಾಸನದಲ್ಲಿ ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಗೆಲುವಿಗಾಗಿ ಪೂರ್ಣ ಪ್ರಮಾಣದಲ್ಲಿ ಶ್ರಮಿಸೋದು ಅನುಮಾನ. ರಾಜ್ಯ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ರೂ ಹಾಸನ ಬಿಜೆಪಿಯಲ್ಲಿ ಪ್ರೀತಂಗೌಡ ದಳದ ಜೊತೆ ಮಿಂಗಲ್ ಆಗೋ ಚಾನ್ಸೇ ಇಲ್ಲ ಎನ್ನಲಾಗುತ್ತಿದೆ. ಹಾಸನದಲ್ಲಿ ದಳ ಚಿಗುರಿಕೊಂಡ್ರೆ ಭವಿಷ್ಯದಲ್ಲಿ ತಮ್ಮ ಬುಡಕ್ಕೆ ಕುತ್ತು ಬರುತ್ತೆ ಅನ್ನೋದು ಪ್ರೀತಂಗೌಡ್ರಿಗೆ ಚನ್ನಾಗಿ ಗೊತ್ತಿದೆ. ಹೀಗಾಗಿ ಜೆಡಿಎಸ್ ಜೊತೆ ಮಿಂಗಲ್ ಆದಂತೆ ಕಂಡು ಬಂದ್ರೂ ಸಿಂಗಲ್ ಆಟವನ್ನ ಭರ್ಜರಿಯಾಗೇ ಆಡ್ತಾಯಿದ್ದಾರೆ.
ಇದು ಲೋಕಸಭಾ ಚುನಾವಣೆಯಲ್ಲಿ NDA ಅಭ್ಯರ್ಥಿಯಾಗಿರೋ ಜೆಡಿಎಸ್ನ ಪ್ರಜ್ವಲ್ ರೇವಣ್ಣ ಅವರ ಗೆಲುವಿನ ಮೇಲೆ ಕರಿನೆರಳು ಬೀಳೋ ಸಾಧ್ಯತೆ ಇದೆ. ಇದೇ ಮಾತನ್ನ ದೇವೇಗೌಡ್ರು ಪರೋಕ್ಷವಾಗಿ ಹೇಳಿದ್ದಾರೆ. ಮತ್ತೊಂದು ಕಡೆ ಈ ಸಲ ತಮಗೆ ಮಂಡ್ಯ ಬಿಜೆಪಿ ಟಿಕೆಟ್ ಕೈ ತಪ್ಪಿಸಿರೋದಕ್ಕೆ ಸಂಸದೆ ಸುಮಲತಾ ದಳಪತಿಗಳ ವಿರುದ್ಧ ಒಳಗೊಳಗೆ ಕೊತಕೊತ ಕುದಿಯುತ್ತಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ರೆ ಸುಮಲತಾ ಅವರ ರಾಜಕೀಯ ಭವಿಷ್ಯಕ್ಕೆ ಕುತ್ತು ಬರುತ್ತೆ. ಅದು ಕೂಡ ತಮ್ಮ ಮಂಡ್ಯದಲ್ಲಿ ಸುಮಲತಾ ಬಿಜೆಪಿಯಲ್ಲಿ ಬೆಳೆಯೋದಕ್ಕೆ ಸಾಧ್ಯವಾಗಲ್ಲ ಅನ್ನೋ ಲೆಕ್ಕಾಚಾರಗಳಿವೆ.
ಹೀಗಾಗಿನೇ ಸುಮಲತಾ ಕುಮಾರಸ್ವಾಮಿ ಪರ ಪ್ರಚಾರ ಮಾಡಿಲ್ಲ ಅನ್ನೋ ಮಾತುಗಳಿವೆ. ಹೀಗಾಗಿ ಮಂಡ್ಯದಲ್ಲೂ ಜೆಡಿಎಸ್ಗೆ ಹಿನ್ನಡೆಯಾಗೋ ಸಾಧ್ಯತೆ ಇದೆ ಅನ್ನೋ ಮಾತುಗಳೂ ಕೇಳಿ ಬರ್ತಾಯಿವೆ. ಇದನ್ನ ಸೂಕ್ಷ್ಮವಾಗಿ ಗಮನಿಸಿರೋ ದೇವೇಗೌಡ್ರು ಪರೋಕ್ಷವಾಗಿ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಆಗ್ತಾಯಿರೋ ಅನ್ಯಾಯದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇನ್ನ ಕೋಲಾರ ಬಿಜೆಪಿಯಲ್ಲೂ ದಳಕ್ಕೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ಸಿಗುತ್ತೆ ಅಂತ ಹೇಳೋಕೆ ಬರಲ್ಲ. ಇಲ್ಲೂ ಕೂಡ ಬಿಜೆಪಿ ಒಳ ಏಟು ಕೊಡೋ ಸಾಧ್ಯತೆ ಇದೆ. ಹೀಗಾಗಿನೇ ದೇವೇಗೌಡ್ರು 3-2=1 ಅಂತದ್ಕೊಂಡ್ರೂ ಆ 1 ಕೂಡ ಗೆಲ್ಲೋದು ಅನುಮಾನ.. ಇದ್ರಿಂದ 3-2=0 ಅಂತ ಹೇಳಲಾಗುತ್ತಿದೆ.
ಹಾಗಾದ್ರೆ ಬಿಜೆಪಿ ಜೊತೆ ಕೈ ಜೋಡಿಸಿ ದಳ ತಪ್ಪು ಮಾಡ್ತಾ..? 3 ಕ್ಷೇತ್ರಗಳಲ್ಲಿ ಜೆಡಿಎಸ್ ಸೊನ್ನೆ ಸುತ್ತುತ್ತಾ..? ಜೆಡಿಎಸ್ – ಬಿಜೆಪಿ ದೋಸ್ತಿ ಜಗಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬೀಗ್ತಾರಾ?