ಮೈಸೂರು : ಮೈಸೂರು ಕೊಡಗು ಲೋಕಸಭಾ ಕ್ಷೇತ್ರ.. ಸಿಎಂ ಸಿದ್ರಾಮಯ್ಯನವರ ತವರು ಲೋಕಸಭಾ ಕ್ಷೇತ್ರ.. ಈ ಕ್ಷೇತ್ರವನ್ನ ಗೆಲ್ಲಲೇಬೇಕು ಅಂತೇಳಿ ಸಿಎಂ ಸಿದ್ರಾಮಯ್ಯ ಪಣತೊಟ್ಟಿದ್ದಾರೆ. ಅದಕ್ಕಾಗಿ ಅಂತಾನೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಒಕ್ಕಲಿಗ ಬ್ರಹ್ಮಾಸ್ತ್ರವನ್ನ ಹೂಡಿದೆ. ಎಂ ಲಕ್ಷ್ಮಣ್ ಅವರನ್ನ ಅಖಾಡಕ್ಕಿಳಿಸಿರೋದು BJPಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಾಗಾದ್ರೆ ಇಲ್ಲಿ ಬಿಜೆಪಿ ಮಾಡಿದ ಆ 1 ತಪ್ಪಾದ್ರೂ ಏನ್ ಗೊತ್ತಾ.?
ಮೈಸೂರು ಕೊಡಗು ಲೋಕಸಭಾ ಕ್ಷೇತ್ರ.. ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಕಣಕ್ಕಿಳಿಸಿದ್ರೆ, ಕಾಂಗ್ರೆಸ್ ಒಕ್ಕಲಿಗ ಮುಖಂಡ ಎಂ ಲಕ್ಷ್ಮಣ್ ಅವರನ್ನ ಕಣಕ್ಕಿಳಿಸಿದೆ. ಆ ಮೂಲಕ ಈ ಭಾಗದ ಒಕ್ಕಲಿಗರ ಅಸ್ಮಿತೆಯನ್ನ ಬಡಿದೆಬ್ಬಿಸೋ ಕೆಲಸಕ್ಕೆ ಕೈ ಹಾಕಿದೆ. ಯಾಕಂದ್ರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಸೋಲು ಗೆಲುವಿನಲ್ಲಿ ನಿರ್ಣಾಯಕವಾಗಿವೆ. ಹೀಗಿದ್ರೂ ಬಿಜೆಪಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿಸಿ, ಅವರ ಬದಲಿಗೆ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ಕೊಟ್ಟಿದೆ. ಆ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ನಿಜ ಹೇಳ್ಬೇಕು ಅಂದ್ರೆ ಬಿಜೆಪಿ ಇಂಥಾ ಎಡವಟ್ಟು ಮಾಡುತ್ತೆ ಅಂತೇಳಿ ಖುದ್ದು ಕಾಂಗ್ರೆಸ್ ನಾಯಕರು ಕೂಡ ಎಕ್ಸ್ಪೆಕ್ಟ್ ಮಾಡಿರ್ಲಿಲ್ಲ. ಬಿಜೆಪಿಯ ಈ ತಪ್ಪಿನಿಂದಾಗಿ ಕಾಂಗ್ರೆಸ್ಗೆ ರೊಟ್ಟಿ ತಾನಾಗೇ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.
ಇನ್ನ ಇಲ್ಲಿ ಕಾಂಗ್ರೆಸ್ಗೆ ಗೆಲುವು ಸುಲಭ ಅನ್ನೋದು ಗೊತ್ತಿದ್ರೂ, ಸಿಎಂ ಸಿದ್ರಾಮಯ್ಯ ತಮ್ಮ ತವರ ಜಿಲ್ಲೆಯಲ್ಲಿ ಗೆಲ್ಲೋದನ್ನ ಪ್ರತಿಷ್ಠೆಯಾಗಿ ತಗೊಂಡಿದ್ದಾರೆ. ಇದೇ ಕಾರಣಕ್ಕೆ ವಾರಗಟ್ಟಲೆ ಮೈಸೂರಲ್ಲೇ ಇದ್ದು ಅಭ್ಯರ್ಥಿ ಪರ ಮತಬೇಟೆಗೆ ಇಳಿದಿದ್ದಾರೆ. ಹಲವು ರಣತಂತ್ರ ಹೆಣೆಯುತ್ತಿದ್ದಾರೆ. ಇದು ಬಿಜೆಪಿಗೆ ತಲೆ ನೋವಾಗಿದೆ. ಇದರ ನಡುವೆ ಒಕ್ಕಲಿಗ ಸಮುದಾಯ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರಿಗೆ ದೊಡ್ಡ ಶಾಕ್ ನೀಡಿದೆ. ಅದುವೇ ಒಕ್ಕಲಿಗ ಬ್ರಹ್ಮಾಸ್ತ್ರ.. ಬಿಜೆಪಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿಸಿದ್ದಕ್ಕೆ ಈ ಭಾಗದ ಒಕ್ಕಲಿಗ ಸಮುದಾಯ ಕೊತಕೊತ ಕುದಿಯುತ್ತಿತ್ತು. ಇದನ್ನು ಕಾಂಗ್ರೆಸ್ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದರ ಪರಿಣಾಮವಾಗಿಯೇ ಒಕ್ಕಲಿಗ ಸಮುದಾಯ ಬಿಜೆಪಿ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ.
ಹೌದು ವೀಕ್ಷಕರೇ, ಮೈಸೂರು ಒಕ್ಕಲಿಗ ಸಂಘದ ಅಧ್ಯಕ್ಷ ಮರಿ ಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿದ್ದಾರೆ. ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಒಕ್ಕಲಿಗ ಸಮುದಾಯದಿಂದ ಬಂದಿದ್ದರಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಒಕ್ಕಲಿಗರನ್ನು ವ್ಯವಸ್ಥಿತವಾಗಿ ಬದಿಗೊತ್ತಲಾಗಿದೆ ಮತ್ತು ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, “ಎಂ ಲಕ್ಷ್ಮಣ್ ಅವರು ಕಾಂಗ್ರೆಸ್ ಅಭ್ಯರ್ಥಿ ಅನ್ನೋ ಕಾರಣಕ್ಕೆ ನಾವು ಅವರನ್ನು ಬೆಂಬಲಿಸುತ್ತಿಲ್ಲ. ಬದಲಿಗೆ ಲಕ್ಷ್ಮಣ್ ಅವರು ಒಕ್ಕಲಿಗರು, ಅವರು ಒಕ್ಕಲಿಗರ ಸಂಘದಿಂದಲು ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಪಕ್ಷಾತೀತವಾಗಿ ಒಕ್ಕಲಿಗ ಅಭ್ಯರ್ಥಿಗೆ ಮತ ನೀಡುತ್ತೇವೆ ಅಂತೇಳಿದ್ದಾರೆ.
ನಿಮಗೆ ಗೊತ್ತಿರ್ಲಿ, ಮೈಸೂರು ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸುತ್ತಿದ್ದಂತೆ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಈ ಭಾಗದ ಕೆಲ ಬಿಜೆಪಿ ನಾಯಕರು ಅಸಲಿಗೆ ಎಂ ಲಕ್ಷ್ಮಣ್ ಅವರು ಒಕ್ಕಲಿಗರೇ ಅಲ್ಲ ಅಂತೇಳಿ ವಾದ ಮಾಡಿದ್ರು. ಆದರೆ ಇದಕ್ಕೆ ತಕ್ಕ ತಿರುಗೇಟು ಕೊಟ್ಟಿದ್ದ ಸಿದ್ರಾಮಯ್ಯ, ಎಂ ಲಕ್ಷ್ಮಣ್ ಅವರು 100ಕ್ಕೆ 200 ಪರ್ಸೆಂಟ್ ಒಕ್ಕಲಿಗ ಅಂತೇಳಿ ಒತ್ತಿ ಒತ್ತಿ ಹೇಳಿದ್ರು. ಲಕ್ಷ್ಮಣ್ ಒಕ್ಕಲಿಗರಾಗಿ ಹುಟ್ಟಿ ಕುವೆಂಪು ಆಶಯ ಪಾಲಿಸುತ್ತಿದ್ದಾರೆ ಅಂತೇಳಿದ್ರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಮತದಾರರು ಇದ್ದಾರೆ. ಅವರಲ್ಲಿ 4 ಲಕ್ಷಕ್ಕೂ ಹೆಚ್ಚು ಒಕ್ಕಲಿಗರಿದ್ದು, ಆ ಬಳಿಕ ಲಿಂಗಾಯತರು, ದಲಿತರು ಮತ್ತು ಒಬಿಸಿ ಮತದಾರರಿದ್ದಾರೆ. ಅಲ್ಲದೆ, 1.5 ಲಕ್ಷ ಮುಸ್ಲಿಂ ಸಮುದಾಯದ ಮತಗಳು ಮತ್ತು 1 ಲಕ್ಷ ಬ್ರಾಹ್ಮಣ ಮತದಾರರಿದ್ದಾರೆ.
ಇಲ್ಲಿ ಕಾಂಗ್ರೆಸ್ 4 ಲಕ್ಷ ಒಕ್ಕಲಿಗ, ಮುಸ್ಲಿಂ, ದಲಿತ, ಒಬಿಸಿ ಮತಗಳನ್ನ ಸೆಳೆದ್ರೆ ಈ ಮತಗಳೇ 8 ಲಕ್ಷದ ಗಡಿ ದಾಟುತ್ತೆ. ಹೀಗಾಗಿ ಈ ಮತಗಳ ಜೊತೆಗೆ ಇತರೆ ಸಮುದಾಯಗಳ ಮತಗಳನ್ನೂ ಸೆಳೆದ್ರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಗೆದ್ದು ಬೀಗೋದು ಗ್ಯಾರಂಟಿ.