ಹೊನ್ನಾಳಿ: ಭಾರತ್ ಜೋಡೊ ಯಾತ್ರೆ ನನಗೆ ಪ್ರೇರಣೆ ಹಾಗೂ ಸ್ಫೂರ್ತಿ ನೀಡಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ಕುಮಾರ್ ತಿಳಿಸಿದರು.
ತಾಲೂಕಿನ ಗಡಿಭಾಗವಾದ ಕೋಣನತಲೆ ಗ್ರಾಮದಲ್ಲಿ ಪಾದಯಾತ್ರೆ ಆರಂಭಿಸುವ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಹುಲ್ಗಾಂಧಿ ನಡೆಸಿದ ಪಾದಯಾತ್ರೆ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿದೆ. ಈ ಕಾರಣದಿಂದ ನಾನು ಪಾದಯಾತ್ರೆ ಕೈಗೊಳ್ಳುತ್ತಿದ್ದೇನೆ. ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವ ಉದ್ದೇಶವಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಸಲಹೆ ಸೂಚನೆಗಳನ್ನು ಕೊಡುವ ಕೆಲಸವನ್ನೂ ಮಾಡುತ್ತಿದ್ದೇನೆ’ ಎಂದು ಉತ್ತರಿಸಿದರು.
ಸ್ಥಳೀಯ ಮಟ್ಟದಲ್ಲಿ ನಾಯಕತ್ವ ಬೆಳೆಸುವ ಅಗತ್ಯವಿದೆ. ಈ ಹಿಂದೆ ಜಿಲ್ಲೆಯಲ್ಲಿ ಯಾರೂ ಇಂತಹ ಕಾರ್ಯಕ್ರಮ ಮಾಡಿಲ್ಲ. ಪಾದಯಾತ್ರೆ ಆರಂಭಿಸಿದ ದಿನದಿಂದ ಇಲ್ಲಿಯವರೆಗೂ ಪ್ರತಿ ಗ್ರಾಮದಲ್ಲೂ ಅಭೂತಪೂರ್ವ ಸ್ವಾಗತ ಸಿಗುತ್ತಿದೆ.
ಈ ಬಾರಿ ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ. ಜಿಲ್ಲೆಯಲ್ಲಿ ಹೊಸ ಮುಖಕ್ಕಾಗಿ ಜನರು ಹಂಬಲಿಸುತ್ತಿದ್ದಾರೆ. ಕಾಂಗ್ರೆಸ್ ವರಿಷ್ಠರು ನನಗೆ ಟಿಕೆಟ್ ಕೊಡುತ್ತಾರೆ ಎಂಬ ಅಚಲ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಕೊಡದಿದ್ದರೂ ಪಲಾಯನ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವುದಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದು, ಯುವಕರನ್ನು ರಾಜಕೀಯದತ್ತ ಸೆಳೆಯುವುದು ಹಾಗೂ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿದ್ದೇನೆ’ ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಜನರ ನಡುವೆ ಬೆರೆಯುವುದರಿಂದ ಅವರ ಮನದಿಂಗಿತವನ್ನು ಅರಿಯಬಹುದು. ಜಗಳೂರು ತಾಲ್ಲೂಕಿನ ಚಿಕ್ಕ ಉಜ್ಜಯಿನಿಯಿಂದ ಪಾದಯಾತ್ರೆ ಪ್ರಾರಂಭಿಸಿದೆ. ಅಲ್ಲಿ 5 ದಿನ, ಹರಪನಹಳ್ಳಿ ತಾಲ್ಲೂಕಿನಲ್ಲಿ 3 ದಿನ ಹಾಗೂ ಹರಿಹರ ಕ್ಷೇತ್ರದಲ್ಲಿ ಮೂರು ದಿನ ಪಾದಯಾತ್ರೆ ನಡೆಸಿ, ನಿರಂತರವಾಗಿ 98 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಒಟ್ಟು 280 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದೇನೆ’ ಎಂದು ಹೇಳಿದರು.
ರಾಜಕಾರಣದಲ್ಲಿರುವವರು ಜನರ ಸೇವೆಗಾಗಿ ಹೆಚ್ಚಿನ ಸಮಯ ಮೀಸಲಿಟ್ಟರೆ, ದುಡ್ಡು ಕಡಿಮೆ ಖರ್ಚಾಗುತ್ತೆ ಎಂದು ಪಕ್ಷದ ಹಿರಿಯರು ಹೇಳಿದ್ದಾರೆ. ನಾನು ಜನರಿಗಾಗಿಯೇ ಹೆಚ್ಚಿನ ಸಮಯ ಮೀಸಲಿಡಲು ಇಷ್ಟಪಡುತ್ತೇನೆ’ ಎಂದರು.
ಕಾಂಗ್ರೆಸ್ ಮುಖಂಡರಾದ ಬಿ.ಸಿದ್ದಪ್ಪ, ಎಚ್.ಎ. ಉಮಾಪತಿ ಮಾತನಾಡಿದರು. ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ವಿ.ನಾಗಪ್ಪ, ಸದಸ್ಯ ನಾಗೇಂದ್ರಪ್ಪ, ಗ್ರಾಮದ ಮುಖಂಡರಾದ ಶಿವಮೂರ್ತಪ್ಪ, ಪರಮೇಶ್ವರಪ್ಪ, ಕರಿಯಪ್ಪ, ಸುಭಾಶ್, ಕರವೇ ಅಧ್ಯಕ್ಷ ಎಸ್.ಶ್ರೀನಿವಾಸ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಎ. ರಂಜಿತ್ ಉಪಸ್ಥಿತರಿದ್ದರು.